More

    ಒಂದೇ ದಿನ 6 ಜನಕ್ಕೆ ಕರೊನಾ ದೃಢ, ಕೊಪ್ಪಳ ಜಿಲ್ಲೆಯ 7 ತಾಲೂಕುಗಳಲ್ಲೂ ಕಾಣಿಸಿಕೊಂಡ ಸೋಂಕು

    ಕೊಪ್ಪಳ: ಜಿಲ್ಲೆಯಲ್ಲಿ ಆಗೊಂದು, ಈಗೊಂದು ಪತ್ತೆಯಾಗುತ್ತಿದ್ದ ಕರೊನಾ ಪ್ರಕರಣ ಮಂಗಳವಾರ ಒಂದೇ ದಿನಕ್ಕೆ ಆರು ಜನರಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದೆ.

    ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದ 52 ವರ್ಷದ ವ್ಯಕ್ತಿ, ಗಂಗಾವತಿಯ 18 ವರ್ಷದ ಯುವಕ, ಕನಕಗಿರಿಯ 50 ವರ್ಷದ ವ್ಯಕ್ತಿ, ಕಾರಟಗಿಯ ತಿಮ್ಮಾಪುರ 23 ವರ್ಷದ ಯುವತಿ, ಯಲಬುರ್ಗಾ ತಾಲೂಕಿನ 60 ವರ್ಷದ ವೃದ್ಧ, ಕಾರಟಗಿಯ ಬಸವೇಶ್ವರ ನಗರದ 45 ವರ್ಷದ ಮಹಿಳೆ ಕರೊನಾ ಸೋಂಕಿತರು. ಇವರು ಸೇರಿ ಸೋಂಕಿತರ ಸಂಖ್ಯೆ ಒಟ್ಟು 13ಕ್ಕೆ ಏರಿದ್ದು, ಎಲ್ಲ ಸೋಂಕಿತರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

    ಮುಧೋಳದ ವ್ಯಕ್ತಿ ಮೈಸೂರಿನಿಂದ ಚಿತ್ರದುರ್ಗ-ಹೊಸಪೇಟೆ-ಕೊಪ್ಪಳ ಮಾರ್ಗವಾಗಿ ತಮ್ಮೂರು ತಲುಪಿದ್ದು, ಯಲಬುರ್ಗಾದಲ್ಲಿ ಸಹ ಓಡಾಡಿದ್ದಾನೆ ಎನ್ನಲಾಗಿದೆ. ಜೂ.4ರಂದು ಈತನ ಗಂಟಲು ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈತನ ಮಗ ಮತ್ತು ಪತ್ನಿ ಪ್ರಾಥಮಿಕ ಸಂಪರ್ಕಿತರಾಗಿದ್ದು, ಇವರು ನರೇಗಾದಡಿ ಕೂಲಿ ಕೆಲಸಕ್ಕೆ ಹೋಗಿದ್ದರಿಂದ ಅಲ್ಲಿನ ಜನರಲ್ಲೆಲ್ಲ ಈಗ ಭೀತಿ ಶುರುವಾಗಿದೆ. ಮುಧೋಳವನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.

    ಕಾರಟಗಿ ತಾಲೂಕಿನ ತಿಮ್ಮಾಪುರದ ಯುವತಿ ಮೂಲತಃ ಕುಕನೂರು ತಾಲೂಕಿನ ಮಂಗಳೂರು ಗ್ರಾಮದವಳು. ಜೂ.3ರಂದು ಮಂಗಳೂರಿನಿಂದ ಬೈಕ್‌ನಲ್ಲಿ ತಿಮ್ಮಾಪುರಕ್ಕೆ ಬಂದಿದ್ದಾಳೆ. ರೋಗಲಕ್ಷಣ ಕಾಣಿಸಿಕೊಂಡಿದ್ದರಿಂದ ಜೂ.4ರಮದು ಗಂಗಾವತಿಯಲ್ಲಿ ಗಂಟಲು ದ್ರವದ ಮಾದರಿ ಪಡೆಯಲಾಗಿದೆ. ಸದ್ಯ ಯುವತಿ ವರದಿ ಪಾಸಿಟಿವ್ ಬಂದಿದ್ದು, ಮಂಗಳೂರು ಮತ್ತು ತಿಮ್ಮಾಪುರಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕನಕಗಿರಿಯ 50 ವರ್ಷದ ವ್ಯಕ್ತಿ ಮುಂಬೈನಿಂದ ಬಂದಿದ್ದು, ಕ್ವಾರಂಟೈನ್ ಸೆಂಟರ್‌ನಲ್ಲಿದ್ದರು. ಮೊನ್ನೆಯಷ್ಟೇ ಇವರ ಮಗನಿಗೆ ಪಾಸಿಟಿವ್ ಬಂದಿದ್ದು ಸದ್ಯ ಈತನ ವರದಿಯೂ ಪಾಸಿಟಿವ್ ಬಂದಿದೆ. ಮಗನಿಂದ ತಂದೆಗೆ ಸೋಂಕು ವರ್ಗಾವಣೆಯಾಗಿದೆ. ಕಾರಟಗಿಯ 45 ವರ್ಷದ ಮಹಿಳೆಯಲ್ಲೂ ಅನಾರೋಗ್ಯ ಕಾಣಿಸಿಕೊಂಡ ಕಾರಣ ಜೂ.5ರಂದು ಮಾದರಿ ಸಂಗ್ರಹಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದ್ದು, ಇವರು ವಾಸವಿರುವ ಪ್ರದೇಶವನ್ನು ಕಂಟೇನ್ಮೆಂಟ್ ರೆನ್ ಮಾಡಲಾಗಿದೆ.

    ಗಂಗಾವತಿ ನಗರದ 18 ವರ್ಷದ ಯುವಕ ಜೂ.4ರಂದು ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದ. ಬಳಿಕ ಸ್ವಯಂ ಪ್ರೇರಿತವಾಗಿ ಗಂಟಲು ದ್ರವದ ಮಾದರಿ ನೀಡಿದ್ದ. ಸಂಜನಾ ಟ್ರಾವೆಲ್ಸ್‌ನಲ್ಲಿ ಈತ ಪ್ರಯಾಣಿಸಿದ್ದು, ಈತನೊಂದಿಗೆ ಕಾರಟಗಿ, ಸಿಂಧನೂರು ಸೇರಿ ಇತರ ಭಾಗದ ಪ್ರಯಾಣಿಕರು ಬಸ್‌ನಲ್ಲಿದ್ದರು. ಹೀಗಾಗಿ ಪ್ರಯಾಣಿಕರ ವಿವರ ಸಂಗ್ರಹಿಸಲಾಗುತ್ತಿದೆ. ಈತ ವಾಸವಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಸದ್ಯ ಆರು ಜನ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 31 ಜನರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಮುಂದುವರಿದಿದೆ.

    ಪತ್ತೆಯಾಗದ ಸೋಂಕಿನ ಮೂಲ
    ಸದ್ಯ 6 ಸೋಂಕಿತರ ಪೈಕಿ ಕನಗಿರಿ ವೃದ್ಧ ಮಹಾರಾಷ್ಟ್ರದಿಂದ ಬಂದರೆ, ಗಂಗಾವತಿ ಯುವಕ ಬೆಂಗಳೂರಿನಿಂದ ಬಂದಿದ್ದಾನೆ. ಉಳಿದವರು ಅಕ್ಕಪಕ್ಕದ ತಾಲೂಕಿನಲ್ಲೇ ಓಡಾಡಿದ್ದಾರೆ. ಢಣಾಪುರದ ವ್ಯಕ್ತಿಗಂತೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಆದರೂ, ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸೋಂಕಿನ ಮೂಲದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    ಕೊಪ್ಪಳ ಜಿಲ್ಲೆಯ 6 ಜನರಲ್ಲಿ ಮಂಗಳವಾರ ಕರೊನಾ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗತ್ತಿದೆ. ಕೆಲವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಹೀಗಾಗಿ ಸೋಂಕಿನ ಮೂಲ ಪತ್ತೆಗೆ ತನಿಖೆ ನಡೆಸುತ್ತಿದ್ದೇವೆ. ಸದ್ಯ 31 ಜನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿದ್ದೇವೆ. ಮಾಹಿತಿ ಸಂಗ್ರಹಿಸುತ್ತಿದ್ದು, ಹೆಚ್ಚಿನ ಸಂಖ್ಯೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಪತ್ತೆಯಾಗುವ ಸಾಧ್ಯತೆಯಿದೆ.
    | ಪಿ.ಸುನಿಲ್ ಕುಮಾರ್ ಕೊಪ್ಪಳ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts