More

    6 ತಿಂಗಳಲ್ಲಿ ಸಂಚಾರಕ್ಕೆ ಮುಕ್ತ

    ಹುಬ್ಬಳ್ಳಿ: ರಿಂಗ್ ರೋಡ್ ಕಾಮಗಾರಿಗಳು 2017ರಲ್ಲಿಯೇ ಆರಂಭವಾಗಿದ್ದು, ಮುಕ್ತಾಯವಾಗುವಲ್ಲಿ ಸ್ವಲ್ಪ ವಿಳಂಬವಾಗಿದೆ. ಸರಿಸುಮಾರು ಶೇ. 80ರಷ್ಟು ಕೆಲಸ ಮುಗಿದಿದ್ದು, ಮುಂದಿನ ಆರು ತಿಂಗಳ ಒಳಗಾಗಿ ಪೂರ್ಣಗೊಂಡು ಸಂಚಾರಕ್ಕೆ ಅಧಿಕೃತವಾಗಿ ತೆರೆದುಕೊಳ್ಳುವ ನಿರೀಕ್ಷೆ ಇದೆ.

    ಹುಬ್ಬಳ್ಳಿಯ ಹೊರವಲಯದಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ಪರಸ್ಪರ ಜೋಡಿಸುವ ಈ ರಿಂಗ್ ರಸ್ತೆಯ ನಿರ್ವಣವು ಎರಡು ಭಾಗಗಳಲ್ಲಿ ನಡೆಯುತ್ತಿದೆ. ಒಂದಿಷ್ಟು ಸಣ್ಣಪುಟ್ಟ ಅಡಚಣೆ, ಕಿರಿಕಿರಿಗಳು ನಿವಾರಣೆಯಾದರೆ ಬೇಗನೆ ಕಾಮಗಾರಿ ಪೂರ್ಣಗೊಳ್ಳುವುದು ಖಚಿತವಾಗಿದೆ.

    -ಠಿ; 97 ಕೋಟಿ ಯೋಜನೆ: ಕುಸುಗಲ್ ಕ್ರಾಸ್​ನಿಂದ ಗದಗ ರಸ್ತೆವರೆಗೆ 3.8 ಕಿ.ಮೀ. ರಿಂಗ್ ರಸ್ತೆಯ ಭಾಗವನ್ನು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ವತಿಯಿಂದ 97 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸ ಲಾಗುತ್ತಿದೆ. ಅಲ್ಲಿಂದ ಮುಂದೆ ಹೊಸಪೇಟೆ – ಹುಬ್ಬಳ್ಳಿ ಹೆದ್ದಾರಿಯನ್ನು ಇದು ಸಂರ್ಪಸಲಿದೆ.

    ಹೊಸಪೇಟೆ – ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ 143 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಕಾಮಗಾರಿಗೆ 2017ರ ಮಾರ್ಚ್​ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ವತಿಯಿಂದ 1,334 ಕೋಟಿ ರೂ. ವೆಚ್ಚದ ಈ ಕಾಮಗಾರಿಯ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಕೆಎನ್​ಆರ್ ಕನ್​ಸ್ಟ್ರಕ್ಷನ್ ಕಂಪನಿಗೆ ನೀಡಲಾಗಿದೆ. ಈ ರಸ್ತೆ ಹೊಸಪೇಟೆಯಿಂದ ಕೊಪ್ಪಳ, ಗದಗ ಮಾರ್ಗವಾಗಿ ಹುಬ್ಬಳ್ಳಿ ಅಂಚಟಗೇರಿ ಬಳಿಯ ಕಾರವಾರ ರಸ್ತೆಗೆ ಸಂರ್ಪಸಲಿದೆ. ಇದರಲ್ಲೇ ಗದಗ ರಸ್ತೆಯಿಂದ ಪುಣೆ- ಬೆಂಗಳೂರು ರಸ್ತೆ ಮಾರ್ಗವಾಗಿ ಅಂಚಟಗೇರಿವರೆಗಿನ 15 ಕಿ.ಮೀ. ರಿಂಗ್ ರಸ್ತೆ ಸೇರಿದೆ.

    ಸದ್ಯ ಗಬ್ಬೂರು ಬಳಿ ಪುಣೆ- ಬೆಂಗಳೂರು ರಸ್ತೆಯಲ್ಲಿ ಸೇತುವೆ ಕಾಮಗಾರಿ ನಡೆದಿದೆ. ಅಲ್ಲಿಂದ ಅಂಚಟಗೇರಿವರೆಗೆ ಒಂದಿಷ್ಟು ಕಾಮಗಾರಿ ನಡೆದಿದೆ. 2020ರಲ್ಲೇ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ, ಕರೊನಾ ಅಲೆಯ ಹಿನ್ನೆಲೆಯಲ್ಲಿ ತಡವಾಗಿದೆ. ಕಾಮಗಾರಿ ತ್ವರಿತವಾಗಿ ಕೈಗೊಂಡು, 6 ತಿಂಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೆಎನ್​ಆರ್ ಕನ್​ಸ್ಟ್ರಕ್ಷನ್ ಯೋಜನಾ ವ್ಯವಸ್ಥಾಪಕ ವಿಠ್ಠಲ ಪಡಸಲಗಿ.

    ಗದಗ ರಸ್ತೆಯಿಂದ ಪುಣೆ- ಬೆಂಗಳೂರು ನಡುವೆ (10 ಕಿ.ಮೀ.) ಈಗಾಗಲೇ ವಾಹನಗಳ ಸಂಚಾರ ಆರಂಭವಾಗಿದೆ. ಕುಸುಗಲ್ ರಸ್ತೆಯಿಂದ ಗದಗವರೆಗೆ (4ಕಿ.ಮೀ.) ಹಾಗೂ ಪುಣೆ- ಬೆಂಗಳೂರು ರಸ್ತೆಯಿಂದ ಅಂಚಟಗೇರಿವರೆಗೆ (5 ಕಿ.ಮೀ.) ವಾಹನ ಸಂಚಾರ ಇನ್ನೂ ಆರಂಭವಾಗಿಲ್ಲ. ಕುಸುಗಲ್- ಗದಗ ನಡುವೆ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಈ ರಸ್ತೆಯ ನಡುವಿನ ಹೈಟೆನ್ಷನ್ ವೈರ್ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹೈಟೆನ್ಷನ್ ವೈರ್ ಎತ್ತರಕ್ಕೇರಿಸಿದರೆ ಇಲ್ಲಿಯೂ ವಾಹನ ಸಂಚಾರ ನಿರಾತಂಕವಾಗಲಿದೆ.

    ಮಾವನೂರ ಬಳಿ ಅಂಡರ್​ಪಾಸ್ ತಕರಾರು

    ಪುಣೆ- ಬೆಂಗಳೂರು ರಸ್ತೆಯಿಂದ ಅಂಚಟಗೇರಿ ನಡುವೆ ಮಾವನೂರ ಬಳಿ ಅಂಡರ್ ಪಾಸ್ ವಿಚಾರವಾಗಿ ನಾಲ್ಕು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಸದ್ಯ ನಾಲ್ಕು ಮೀ. ಎತ್ತರ ಇರುವ ಅಂಡರ್ ಪಾಸ್ ಅನ್ನು ಐದೂವರೆ ಮೀಟರ್ ಎತ್ತರಕ್ಕೆ ಏರಿಸಬೇಕು ಎಂಬುದು ಸ್ಥಳೀಯ ರೈತರ ಆಗ್ರಹವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಧ್ಯಸ್ಥಿಕೆಯಲ್ಲಿ ಈ ಅಂಡರ್ ಪಾಸ್ ಅನ್ನು ನಾಲ್ಕೂವರೆ ಮೀ.ವರೆಗೆ ಎತ್ತರಿಸಿ, ಪಕ್ಕದಲ್ಲಿ ಸರ್ವೀಸ್ ರಸ್ತೆ ಮಾಡಿಕೊಡುವ ಭರವಸೆಯನ್ನು ಎನ್​ಎಚ್​ಎಐ ನೀಡಿದೆ. ಆದರೂ, ಕೆಲವರ ತಕರಾರು ಮುಂದುವರಿದಿದೆ ಎನ್ನಲಾಗಿದೆ.

    ಕರೊನಾದಿಂದ ರಿಂಗ್ ರಸ್ತೆ ಕಾಮಗಾರಿ ವಿಳಂಬ ವಾಗಿದೆ. ಆದರೂ ಕಾಮಗಾರಿ ವೇಗವಾಗಿ ನಡೆದಿದೆ. ಅಕ್ಟೋಬರ್ ಒಳಗೆ ಪೂರ್ಣಗೊಳಿಸಲಾಗುವುದು. ಈ ಬಾರಿ ಮಳೆ ಹೆಚ್ಚಾದರೆ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು.

    | ಯಶವಂತ ಡೆಪ್ಯುಟಿ ಇಂಜಿನಿಯರ್, ಎನ್​ಎಚ್​ಎಐ

    ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಈ ಸಮಸ್ಯೆ ಈಗ ಬಗೆಹರಿದಿದೆ. 15 ದಿನದೊಳಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ. ಕಾಮಗಾರಿ ಮತ್ತಷ್ಟು ವೇಗಗೊಳಿಸಲು ಸೂಚಿಸುತ್ತೇನೆ.

    | ಪ್ರಲ್ಹಾದ ಜೋಶಿ

    ಕೇಂದ್ರ ಸಚಿವ

    ಶಿರಗುಪ್ಪಿ- ಭಂಡಿವಾಡ ರಸ್ತೆಗೆ ಅಡ್ಡಿ

    ಹುಬ್ಬಳ್ಳಿ- ಹೊಸಪೇಟೆ ರಸ್ತೆ ನಡುವೆ ಭಂಡಿವಾಡ- ಶಿರಗುಪ್ಪಿ ನಡುವಿನ 3 ಕಿ.ಮೀ. ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ತಾಂತ್ರಿಕ ಕಾರಣಗಳಿಂದ ಇಲ್ಲೂ ಕಾಮಗಾರಿ ಸ್ಥಗಿತಗೊಂಡಿದ್ದು, ಸರ್ವಿಸ್ ರಸ್ತೆಯಲ್ಲೇ ವಾಹನಗಳು ಓಡಾಡುತ್ತಿವೆ. ಇದರಿಂದ ಇಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts