More

    6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಹಾಜರಿಯಲ್ಲಿಲ್ಲ ಏರಿಕೆ, ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ಒಲವು!

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 6 ರಿಂದ 8ನೇ ತರಗತಿಗಳ ಪುನರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ 2 ವಾರ ಕಳೆಯುತ್ತಾ ಬಂದರೂ ಶಾಲೆಗಳಲ್ಲಿ ಶೇ.100 ಹಾಜರಾತಿ ಕಂಡುಬರುತ್ತಿಲ್ಲ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇ.74 ವಿದ್ಯಾರ್ಥಿಗಳ ಹಾಜರಾತಿ ಇದ್ದು, ಖಾಸಗಿ ಶಾಲೆಗಳಲ್ಲಿ ಶೇ.62 ಮಕ್ಕಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

    ಗೌರಿ-ಗಣೇಶ ಹಬ್ಬದ ಬಳಿಕ ಹಾಜರಾತಿ ಹೆಚ್ಚಾಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಹಬ್ಬದ ಬಳಿಕ ಮತ್ತಷ್ಟು ಮಕ್ಕಳ ಗೈರು ಕಂಡುಬರುತ್ತಿದೆ. ಅದರಲ್ಲೂ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿರುವುದು ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದೆ. ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳ ಮಾಹಿತಿ ಪಡೆದು ಅವರ ಪಾಲಕರನ್ನು ಸಂಪರ್ಕಿಸಿ ಶಾಲೆಗೆ ಕಳುಹಿಸುವ ಬಗ್ಗೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

    ಖಾಸಗಿ ಆನ್‌ಲೈನ್ ಗುಮ್ಮ: ಕೆಲವೊಂದು ಖಾಸಗಿ ಶಾಲೆಗಳು ಇಂದಿಗೂ ಆನ್‌ಲೈನ್ ತರಗತಿಗೆ ಆದ್ಯತೆ ನೀಡುತ್ತಿದ್ದು, ಕಾಟಾಚಾರಕ್ಕೆ ಎಂಬಂತೆ ಭೌತಿಕ ತರಗತಿ ನಡೆಸುತ್ತಿವೆ. ಕೆಲವೊಂದು ಶಾಲೆಗಳಲ್ಲಿ ಇಂದಿಗೂ ಬೋಧಕ ಸಿಬ್ಬಂದಿ ಕೊರತೆ ಇದೆ, ಈ ಹಿನ್ನೆಲೆಯಲ್ಲಿ ಉಳಿದ ಶಿಕ್ಷಕರಿಂದಲೇ ಆನ್‌ಲೈನ್ ತರಗತಿ ನಡೆಸಲು ಮುಂದಾಗಿವೆ. ಕರೊನಾ ಲಾಕ್‌ಡೌನ್ ವೇಳೆ ಸಾಕಷ್ಟು ಶಿಕ್ಷಕರನ್ನು ಸೇವೆಯಿಂದ ವಿಮುಕ್ತಿಗೊಳಿಸಿದ್ದು, ಇಂದಿಗೂ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಂಡಿಲ್ಲ ಎಂಬ ಆರೋಪವೂ ಇದೆ. ಶೇ.100 ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾದರೆ ಪಾಠ ಪ್ರವಚನಕ್ಕೆ ಕಷ್ಟ ಎಂಬ ಕಾರಣಕ್ಕೆ ಆನ್‌ಲೈನ್ ತರಗತಿಗೆ ಮೊರೆ ಹೋಗಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

    ಬೋಧಕೇತರ ಸಿಬ್ಬಂದಿಯೂ ಇಲ್ಲ: ಕೆಲವೊಂದು ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕರೊನಾ ಲಾಕ್‌ಡೌನ್‌ನಿಂದಾಗಿ ಬೋಧಕೇತರ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ, ತೆಗೆದುಕೊಂಡರೂ ಕಡಿಮೆ ವೇತನ ನೀಡುವುದಾಗಿ ಶಿಕ್ಷಣ ಸಂಸ್ಥೆಗಳು ಮೊಂಡಾಟ ಮಾಡುತ್ತಿವೆ, ಇದರಿಂದ ಬೋಧಕೇತರ ಸಿಬ್ಬಂದಿಯೂ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಶೇ.100 ಮಕ್ಕಳ ಹಾಜರಾತಿಗೆ ತೊಡಕಾಗಿದೆ ಎಂಬ ಮಾತು ಕೇಳಿಬರುತ್ತಿದೆ.

    ಪಾಲಕರ ಹಿಂದೇಟು: ಜಿಲ್ಲೆಯಲ್ಲಿ ಪ್ರಸ್ತುತ ಕರೊನಾ ತೀವ್ರಮಟ್ಟದಲ್ಲಿ ಹತೋಟಿಯಲ್ಲಿದ್ದರೂ, ಕರೊನಾ ನಂತರದ ಕೆಲವೊಂದು ಕಾಯಿಲೆಗಳ ಬಗ್ಗೆ ಪಾಲಕರು ಆತಂಕಗೊಂಡಿದ್ದಾರೆ. ಡೆಲ್ಟಾ ವೈರಸ್ ಬಗ್ಗೆಯೂ ಜನ ಆತಂಕಗೊಂಡಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ.

    ವಿದ್ಯಾರ್ಥಿಗಳ ಹಾಜರಿ, ಗೈರು: ಸರ್ಕಾರಿ ಶಾಲೆಗಳಲ್ಲಿ 6 ತರಗತಿಗೆ ಶೇ.75.20, 7ನೇ ತರಗತಿ ಶೇ.73.82, 8ನೇ ತರಗತಿ ಶೇ73.88 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಅನುದಾನಿತ ಶಾಲೆಗಳಲ್ಲಿ 6ನೇ ತರಗತಿ ಶೇ.66.46, 7ನೇ ತರಗತಿ ಶೇ.65.80, 8ನೇ ತರಗತಿ ಶೇ.63 ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ.

    ಖಾಸಗಿ ಶಾಲೆಗಳಲ್ಲಿ 6ನೇ ತರಗತಿ ಶೇ.56.47, 7ನೇ ತರಗತಿ ಶೇ.61.35, 8ನೇ ತರಗತಿ ಶೇ.70.57 ಹಾಜರಾತಿ ಇದೆ. ಸರ್ಕಾರಿ, ಅನುದಾನಿತ ಹಾಗೂ ಸರ್ಕಾರಿ ಶಾಲೆಗಳು ಸೇರಿ 6ರಿಂದ 8ನೇ ತರಗತಿವರಗೆ ಇದುವರೆಗೆ ಶೇ.67.95 ವಿದ್ಯಾರ್ಥಿಗಳಷ್ಟೇ ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ-ಅಂಶಗಳಲ್ಲಿ ತಿಳಿದುಬಂದಿದೆ.

    ಶಾಲೆಗಳು ಪುನರಾರಂಭಗೊಂಡು 2 ವಾರವಾಗುತ್ತಿದ್ದು, 9 ಹಾಗೂ 10ನೇ ತರಗತಿಗಳಿಗೆ ಹೋಲಿಸಿದರೆ 6ರಿಂದ 8ನೇ ತರಗತಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಯಷ್ಟಿಲ್ಲ, ಇಂಥ ಮಕ್ಕಳ ಮಾಹಿತಿ ಕಲೆಹಾಕಿ ಅವರ ಪಾಲಕರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ನಡೆಯುತ್ತಿದೆ, ಶೇ.100 ಹಾಜರಾತಿಗೆ ಪ್ರಯತ್ನಿಸುತ್ತಿದ್ದು, ಕರೊನಾ ಮಾರ್ಗಸೂಚಿಯನ್ನು ಪ್ರತಿನಿತ್ಯ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
    ಗಂಗಮಾರೇಗೌಡ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts