More

    58 ರೈತರಿಗೆ ಭೂ ಮಂಜೂರಾತಿಗೆ ಕ್ರಮ

    ಹಾನಗಲ್ಲ: ಶಾಸಕ ಸಿ.ಎಂ. ಉದಾಸಿ ಅವರ ಕಾನೂನಾತ್ಮಕ ಪ್ರಯತ್ನದಿಂದ ತಾಲೂಕಿನ 70 ರೈತರಿಗೆ ಭೂಮಿ ಮಂಜೂರು ಮಾಡಿಸಿದ್ದಾರೆ. ವಿಚಾರಣಾ ಹಂತದಲ್ಲಿರುವ ಇನ್ನುಳಿದ 58 ರೈತರಿಗೆ ಮುಂಬರುವ ದಿನಗಳಲ್ಲಿ ಭೂ-ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ತಾಲೂಕಿನ ಹಿರೇಬಾಸೂರು, ಸೋಮಸಾಗರ, ಡೊಮ್ಮನಾಳ, ಕರೆಕ್ಯಾತನಹಳ್ಳಿ, ಬ್ಯಾತನಾಳ, ಶೇಷಗಿರಿ, ತಿಳವಳ್ಳಿ ಗ್ರಾಮಗಳಲ್ಲಿ ರೈತರಿಗೆ ಪಹಣಿ ಪತ್ರ ವಿತರಣೆ, ಅಂಗನವಾಡಿ ಕಟ್ಟಡ, ಕಾಂಕ್ರೀಟ್ ರಸ್ತೆ, ಯಾತ್ರಿ ನಿವಾಸ, ಶಾಲಾ ಕೊಠಡಿ ಸೇರಿದಂತೆ ಒಟ್ಟು 13 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ, ಮೇಲ್ಮಟ್ಟದ ಜಲಾಗಾರದ ಉದ್ಘಾಟನೆ ಶುಕ್ರವಾರ ನೆರವೇರಿಸಿ ಅವರು ಮಾತನಾಡಿದರು.

    ಶಿವಮೊಗ್ಗ ಜಿಲ್ಲೆಯ ಘಟಾನುಘಟಿ ನಾಯಕರು ಹಲವು ವರ್ಷಗಳಿಂದ ಹೋರಾಡಿದ್ದರೂ ಅರಣ್ಯಭೂಮಿ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಯಶಸ್ವಿಯಾಗಿಲ್ಲ. ಹಾನಗಲ್ಲ ತಾಲೂಕಿನ ರೈತರಿಗೆ ಮಾತ್ರ ಭೂಮಿ ಮಂಜೂರಾಗಿದೆ ಎಂದರು.

    ತಾಲೂಕಿನಲ್ಲಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಿದ್ದು, ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಬಾಳಂಬೀಡ, ಗೊಂದಿ, ಯಳವಟ್ಟಿ ಕೇಂದ್ರಗಳನ್ನು 110 ಕೆವಿಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ ಎಲ್ಲ ಶಾಲೆ, ಅಂಗನವಾಡಿಗಳಲ್ಲಿ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಪುರಸ್ಕೃತ ‘ಹರ್​ಖೇತ್ ಕೋ ಪಾನಿ’ ಮಹತ್ವದ ಯೋಜನೆಗೆ ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕು ಆಯ್ಕೆಯಾಗಿದ್ದು, 1180 ಅರ್ಜಿ ಸಲ್ಲಿಕೆಯಾಗಿದ್ದು, 85 ಕೋಟಿ ರೂ. ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನ ತಿಳವಳ್ಳಿಯಿಂದ ಕತ್ರಿಕೊಪ್ಪದವರೆಗಿನ 26 ಕಿ.ಮೀ. ರಸ್ತೆಯನ್ನು 29 ಕೋಟಿ ರೂ.ಗಳಲ್ಲಿ ಹೆದ್ದಾರಿಯಾಗಿ ಪರಿವರ್ತಿಸಲಾಗುತ್ತಿದೆ ಎಂದರು.

    ಕರೊನಾ ಸಂಕಷ್ಟದ ಸಂದರ್ಭದಲ್ಲಿಯೂ ನಿರಂತರವಾಗಿ ಕಾಮಗಾರಿಗಳು ನಡೆಯುತ್ತಿವೆ. ಎನ್​ಆರ್​ಇಜಿ ಯೋಜನೆಯಡಿ ರಾಜ್ಯದಲ್ಲಿ ಅತಿ ಹೆಚ್ಚು ಕಾಮಗಾರಿ ಕೈಗೊಂಡಿರುವುದರಲ್ಲಿ ಹಾನಗಲ್ಲ ತಾಲೂಕು ಪ್ರಥಮ ಸ್ಥಾನದಲ್ಲಿದೆ. ತಾಲೂಕಿನಲ್ಲಿ ಇತ್ತೀಚೆಗೆ ಶುಂಠಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಪ್ರಸ್ತುತ ವರ್ಷ ಶುಂಠಿಯನ್ನೂ ಬೆಳೆ ವಿಮೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಪ್ರಸಕ್ತ ವರ್ಷ ಕೃಷಿ ಇಲಾಖೆಯಿಂದ 3361 ರೈತರ ಜಮೀನಿನಲ್ಲಿ ಮಣ್ಣು ಪರೀಕ್ಷೆ ಮಾಡಿ ಕಾರ್ಡ್ ವಿತರಿಸಲಾಗಿದೆ ಎಂದರು.

    ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಮಾರ್ತಾಂಡಪ್ಪ ದೇಸಾಯಿ, ಶಿವಲಿಂಗಪ್ಪ ತಲ್ಲೂರ ಮಾತನಾಡಿದರು. ಹೊನ್ನಪ್ಪ ಗೊಂದಿ ಅಧ್ಯಕ್ಷತೆ ವಹಿಸಿದ್ದರು. ಮಕ್ಬುಲ್​ಸಾಬ್ ನಾಗನೂರ, ಚಂದ್ರಪ್ಪ ಜಾಲಗಾರ, ಡಾ. ಸುನೀಲ ಹಿರೇಮಠ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಣುಕಾ ತಿಮ್ಮಾಪುರ, ಬಸವರಾಜ ನರೇಂದ್ರ, ಸಿಡಿಪಿಒ ಎಚ್. ಸಂತೋಷಕುಮಾರ, ಗ್ರಾಮಲೆಕ್ಕಾಧಿಕಾರಿ ಶಿವಾನಂದ ಕೊಟಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts