More

    51 ಜನರಿಗೆ ಸೋಂಕು ಖಚಿತ

    ಕಾರವಾರ: ಜಿಲ್ಲೆಯಲ್ಲಿ ಗುರುವಾರ ಒಟ್ಟು 51 ಜನರಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಒಬ್ಬರು ಸಾವನ್ನಪ್ಪಿದ್ದಾರೆ. 20 ಕ್ಕೂ ಅಧಿಕ ಪ್ರಕರಣಗಳ ಮೂಲ ಪತ್ತೆಯಾಗಿಲ್ಲ. ಜ್ವರ ಕಾಣಿಸಿಕೊಂಡ 15 ರಷ್ಟು ಜನರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ಕರೊನಾ ಪತ್ತೆಯಾಗಿದೆ.

    ಶಿರಸಿಯ 12, ದಾಂಡೇಲಿಯ 11, ಹಳಿಯಾಳದ 6, ಅಂಕೋಲಾದ 5, ಭಟ್ಕಳದ 8, ಮುಂಡಗೋಡಿನ 4, ಯಲ್ಲಾಪುರದ 2, ಕಾರವಾರ, ಹೊನ್ನಾವರ ಹಾಗೂ ಸಿದ್ದಾಪುರದ ತಲಾ ಒಬ್ಬರಿಗೆ ಸೋಂಕು ಖಚಿತವಾಗಿದೆ.

    ಜ್ವರ ಬಂದವರಲ್ಲಿ ಕರೊನಾ: ಶಿರಸಿಯಲ್ಲಿ ಜ್ವರ ಬಂದವರ ಹಲವರ ತಪಾಸಣೆ ನಡೆಸಿದಾಗ ಕರೊನಾ ಇರುವುದು ಗುರುವಾರ ದೃಢವಾಗಿದೆ. ಆಶಾ ಸರ್ವೆಯಲ್ಲಿ ಗುರುತಿಸಿದ್ದ ಕೆಎಚ್​ಬಿ ಕಾಲನಿ, ಕಸ್ತೂರಬಾ ನಗರ, ರಾಜೀವ ನಗರ

    ಹಾಗೂ ಸಾಲ್ಕಣಿಯ ತಲಾ ಒಬ್ಬರಿಗೆ ರೋಗ ಖಚಿತವಾಗಿದೆ. ಹನುಮಂತಿ- ಹಾರುಗಾರಿನಲ್ಲಿ ಗೋವಾದಿಂದ ವಾಪಸಾದ ವ್ಯಕ್ತಿಗೆ, ಟಿಎಸ್​ಎಸ್ ರಸ್ತೆಯ ಸಮೃದ್ಧಿ ನಗರದ ನಿವಾಸಿ ಸಹಕಾರಿ

    ಬ್ಯಾಂಕ್​ನ ಉದ್ಯೋಗಿಗೆ, ಉತ್ತರ ಪ್ರದೇಶದಿಂದ ವಾಪಸಾದ ಕೋಟೆಕೆರೆ ಸಮೀಪದ ವ್ಯಕ್ತಿಗೆ, ಮಾರಿಕಾಂಬಾ ದೇವಾಯಲದ ಮತ್ತೊಬ್ಬ ಸಿಬ್ಬಂದಿಗೆ, ಕೋರ್ಟ್ ರಸ್ತೆಯಲ್ಲಿ ಹಾವೇರಿ ಸೋಂಕಿತರ ಸಂಪರ್ಕಕ್ಕೆ ಬಂದ ಇಬ್ಬರಿಗೆ, ಹುಬ್ಬಳ್ಳಿಗೆ ಡಯಾಲಿಸಿಸ್​ಗೆ ತೆರಳುತ್ತಿದ್ದ ಕೊರ್ಲಕಟ್ಟಾದ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

    ಪ್ರಾಥಮಿಕ, ದ್ವಿತೀಯ ಸಂಪರ್ಕ ಜಾಸ್ತಿ: ದಾಂಡೇಲಿಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದ ಜಾಸ್ತಿ ಜನರಿಗೆ ಸೋಂಕು ಹರಡಿದೆ. 4 ಪರುಷರಿಗೆ 7 ಮಹಿಳೆಯರಿಗೆ ಗುರುವಾರ ಕರೊನಾ ದೃಢವಾಗಿದೆ. ಜೆಎನ್ ರಸ್ತೆಯಲ್ಲಿ ಇಬ್ಬರಿಗೆ, ಟೆನೆಮೆಂಟ್ ಪ್ರದೇಶದಲ್ಲಿ ಇಬ್ಬರು ಮಕ್ಕಳು ಸೇರಿ ಮೂವರಿಗೆ, ಟೌನ್​ಶಿಪ್​ನಲ್ಲಿ ಮೂವರಿಗೆ, ಹಳಿಯಾಳ ರಸ್ತೆಯ ಒಬ್ಬರಿಗೆ ಕೋವಿಡ್ ಕಂಡುಬಂದಿದೆ.

    ಗ್ರಾಮೀಣ ಭಾಗದಲ್ಲಿ: ಹಳಿಯಾಳದಲ್ಲಿ ಗ್ರಾಮೀಣ ಭಾಗಕ್ಕೆ ಸೋಂಕು ನುಗ್ಗಿದೆ. ಕ್ವಾರಂಟೈನ್​ನಲ್ಲಿ ಇದ್ದ ನಾಲ್ವರು ಸೇರಿ 6 ಜನರಿಗೆ ಕರೊನಾ ದೃಢವಾಗಿದೆ. ಬಸ್ ನಿಲ್ದಾಣದ ಬಳಿ ಇರುವ ಲಾಜ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿಗೆ ಹಾಗೂ ಸಮೀಪ ಇಸ್ತ್ರಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಲಾಡ್ಜ್ ಸೀಲ್​ಡೌನ್ ಮಾಡಲಾಗಿದೆ. ಧಾರವಾಡದ ಖಾಸಗಿ ಕಾರಿನ ಕಂಪನಿ ಉದ್ಯೋಗದಲ್ಲಿದ್ದ ಗುತ್ತಿಗೇರಿ ನಿವಾಸಿಗೆ, ಮುರ್ಕವಾಡ, ತತ್ವಣಗಿ, ಕರ್ಲಕಟ್ಟಾ, ಮಂಗಳವಾಡ, ತೇರಗಾಂವ ಹೀಗೆ ವಿವಿಧ ಗ್ರಾಮಗಳ ತಲಾ ಒಬ್ಬರಿಗೆ ಸೋಂಕು ಕಂಡುಬಂದಿದೆ. ಕುಮಟಾ ಸುವರ್ಣಗದ್ದೆಯಲ್ಲಿ 5, ರಾಮನಗರ ಹಾಗೂ ಹಣ್ಣೆಮಠದಲ್ಲಿ ತಲಾ ಒಬ್ಬರಿಗೆ ಸೋಂಕು ಕಂಡುಬಂದಿದೆ.

    ಕರೊನಾ ಸೇನಾನಿಗಳಿಗೆ ಸೋಂಕು

    ಮುಂಡಗೋಡ : ತಾಲೂಕಿನ ಮಳಗಿಯ ಬಿಎಎಂಎಸ್ ವೈದ್ಯ, ಪಟ್ಟಣದ ತಾಲೂಕು ಆಸ್ಪತ್ರೆಯ ಎಕ್ಸ್​ರೇ ಟೆಕ್ನೀಷಿಯನ್, ಸ್ಟಾಫ್ ನರ್ಸ್ ಹಾಗೂ ಫಾರ್ಮಸಿಸ್ಟ್ ಸೇರಿ ನಾಲ್ವರು ಕರೊನಾ ಸೇನಾನಿಗಳಿಗೆ ಸೋಂಕು ಖಚಿತವಾಗಿದೆ. ಕೆಲವರು ಹೊರ ಊರುಗಳಿಂದ ಬರುವವರಾಗಿದ್ದರೆ. ಇನ್ನೂ ಕೆಲವರು ಇಲ್ಲಿಯೇ ರೋಗಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ.

    ಭಟ್ಕಳದಲ್ಲಿ ಮತ್ತೊಂದು ಸಾವು : ಭಟ್ಕಳದ ಮುಗ್ದುಂ ಕಾಲನಿಯಲ್ಲಿ 64 ವರ್ಷದ ವೃದ್ಧರೊಬ್ಬರು ಬುಧವಾರ ಸಾವನ್ನಪ್ಪಿದ್ದು, ಅವರಿಗೆ ಕರೊನಾ ಸೋಂಕು ಇರುವುದು ಗುರುವಾರ ಗಂಟಲ ದ್ರವ ಪರೀಕ್ಷೆಯ ಮೂಲಕ ಖಚಿತವಾಗಿದೆ. ಕೋವಿಡ್-19 ಶಿಷ್ಟಾಚಾರದಂತೆ ಅಂತಿಮ ಸಂಸ್ಕಾರ ನಡೆಸಲಾಗಿದೆ. ಗುರುವಾರ 8 ಜನರಲ್ಲಿ ಸೋಂಕು ಕಂಡುಬಂದಿದ್ದು, ಹೆಚ್ಚಿನವರು ರೋಗಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ.

    ಕರೊನಾ ಸೋಂಕಿತರ ವಿವರವನ್ನು ಅಪ್​ಲೋಡ್ ಮಾಡಲು ಇರುವ ಆಪ್ ಕೆಲಸ ನಿಲ್ಲಿಸಿದ್ದರಿಂದ ಬುಧವಾರ ಸೋಂಕಿತರ ವಿವರಗಳನ್ನು ಅಪ್​ಲೋಡ್ ಮಾಡಲು ಸಾಧ್ಯವಾಗಿರಲಿಲ್ಲ. ಗುರುವಾರ ಕರೊನಾ ಬುಲೆಟಿನ್​ನಲ್ಲಿ ಗೊಂದಲ ಉಂಟಾಗಿದೆ. ಜಿಲ್ಲೆಯಲ್ಲಿ 51 ಜನರಿಗೆ ಕರೊನಾ ಸೋಂಕು ದೃಢ ಎಂದು ಜಿಲ್ಲಾಡಳಿತ ವರದಿ ನೀಡಿದರೆ, ರಾಜ್ಯ ಬುಲೆಟಿನ್​ನಲ್ಲಿ 79 ಜನರಿಗೆ ಸೋಂಕು ಖಚಿತ ಎಂದು ವಿವರಿಸಲಾಗಿದ

    ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

    ಕುಮಟಾ: ಜಿಲ್ಲೆಯಲ್ಲಿ ಕರೊನಾ ಸೋಂಕು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ತಾಲೂಕಿನ ಧಾರೇಶ್ವರದ ಶ್ರೀ ಧಾರಾನಾಥ ದೇವಾಲಯವನ್ನು ಜುಲೈ 20 ರಿಂದ ಅನಿರ್ದಿಷ್ಟಕಾಲಾವಧಿಗೆ ಭಕ್ತರ ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ದೇವಾಲಯದ ಆಡಳಿತ ಮಂಡಳಿ, ಅರ್ಚಕರು ಹಾಗೂ ಸಿಬ್ಬಂದಿ ಈ ಕುರಿತು ರ್ಚಚಿಸಿ ತೀರ್ವನಿಸಲಾಗಿದ್ದು ದೇವಾಲಯದ ದಿನನಿತ್ಯದ ಪೂಜಾ ಕೈಂಕರ್ಯಗಳು ಅರ್ಚಕರಿಂದ ಎಂದಿನಂತೆ ನಡೆಯಲಿದೆ. ಆಡಳಿತ ಮಂಡಳಿಯ ಮುಂದಿನ ತೀರ್ವನದವರೆಗೆ ಸಾರ್ವಜನಿಕರು ಸಹಕರಿಸುವಂತೆ ಮೊಕ್ತೇಸರ ಲಕ್ಷ್ಮಣ ಎಂ. ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    ಪಡಿತರ ಪಡೆಯಲು ಅಂತರ ಮರೆತರು

    ಯಲ್ಲಾಪುರ: ಕರೊನಾ ವೈರಸ್ ದಾಂಗುಡಿ ಇಡುತ್ತಿದ್ದರೂ ತಾಲೂಕಿನ ಜನರು ಅದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಕಿರವತ್ತಿ ಗ್ರಾಮದಲ್ಲಿ ಬುಡಕಟ್ಟು ಜನಾಂಗದವರಿಗೆ ಪಡಿತರ ವಿತರಣೆ ಸಂದರ್ಭದಲ್ಲಿ ಪರಸ್ಪರ ಅಂತರ ಕಂಡುಬರಲಿಲ್ಲ. ನೂರಾರು ಜನರು ಗುಂಪು ಗುಂಪಾಗಿ ಸೇರುತ್ತಿರುವುದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಶ್ರಮಿಸುತ್ತಿದ್ದರೂ ಜನರು ಇನ್ನೂ ಗುಂಪು ಗುಂಪಾಗಿ ಸೇರುವುದು ಬಿಡುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಒಂದೇ ದಿನ, ಒಂದೇ ಸ್ಥಳದಲ್ಲಿ ಪೌಷ್ಟಿಕ ಆಹಾರ ವಿತರಿಸುವ ಬದಲು ಫಲಾನುಭವಿಗಳ ಗ್ರಾಮಗಳಿಗೆ ತೆರಳಿ ಅಲ್ಲಿಯೇ ವಿತರಿಸುವ ವ್ಯವಸ್ಥೆ ಮಾಡಿದರೆ ಇಂತಹ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಮನೀಷ ನಾಯ್ಕ, ‘ಬುಡಕಟ್ಟು ಜನಾಂಗದವರಿಗೆ ಪೌಷ್ಟಿಕ ಆಹಾರ ವಿತರಿಸುವ ಕಾರ್ಯ ಸಂಬಂಧಿಸಿದ ಗುತ್ತಿಗೆದಾರರದ್ದು. ಅವರಿಗೆ ಕಡ್ಡಾಯವಾಗಿ ಸರ್ಕಾರದ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಆದರೆ, ಕಿರವತ್ತಿಯಲ್ಲಿ ನಿಯಮ ಪಾಲಿಸದಿರುವುದು ಗಮನಕ್ಕೆ ಬಂದಿದೆ. ಮುಂದಿನ ಸಲ ಒಂದೇ ಸ್ಥಳದಲ್ಲಿ ಪಡಿತರ ವಿತರಣೆ ಮಾಡದೇ ಗ್ರಾ.ಪಂ. ವ್ಯಾಪ್ತಿಯ ಎರಡು ಸ್ಥಳಗಳಲ್ಲಿ ಪ್ರತ್ಯೇಕವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಗುತ್ತಿಗೆದಾರರಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯಲಾಗುತ್ತದೆ’ ಎಂದು ತಿಳಿಸಿದರು.

    ಇಬ್ಬರ ವಿರುದ್ಧ ಪ್ರಕರಣ ದಾಖಲು

    ಕಾರವಾರ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಇಬ್ಬರ ವಿರುದ್ಧ ಇಲ್ಲಿನ ಚಿತ್ತಾಕುಲಾ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

    ಕ್ವಾರಂಟೈನ್​ಗೆ ಒಳಪಟ್ಟ ವ್ಯಕ್ತಿಗಳ ಮೊಬೈಲ್ ನಂಬರ್ ಪಡೆದು ಜಿಪಿಎಸ್ ಟ್ರ್ಯಾಕಿಂಗ್ ಮಾಡಲಾಗುತ್ತಿದೆ. ಮನೆಯಿಂದ 500 ಮೀಟರ್ ಹೊರಗೆ ಸುತ್ತಾಡಿದ ಮಾಹಿತಿ ಲಭ್ಯವಾದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

    ಜೂನ್ 28ರಂದು ಗೋವಾದಿಂದ ಕಾರವಾರದ ಮಾಜಾಳಿಗೆ ಬಂದಿದ್ದ ಉಮೇಶ ಉಲ್ಲಾಸ ನಾಯ್ಕ ಜು.14 ರವರೆಗೆ ಮನೆಯಲ್ಲೇ ಇರಬೇಕಿತ್ತು. ಜುಲೈ 12ರಂದು ಮನೆಯ ಹೊರಗಡೆ ಓಡಾಡಿರುವುದು ಕ್ವಾರಂಟೈನ್ ವಾಚ್ ಆಪ್​ನಲ್ಲಿ ಕಂಡುಬಂದಿದೆ. ಬೆಂಗಳೂರಿನಿಂದ ಬೋಳಶಿಟ್ಟಾ ಗ್ರಾಮಕ್ಕೆ ಜು.1 ರಂದು ಆಗಮಿಸಿದ್ದ ಸುಶಾಂತ ಶ್ಯಾಮಕಾಂತ ತಳೇಕರ್ ಜು. 12 ರಂದು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಹೊರಗಡೆಗೆ ಓಡಾಡಿರುವುದು ಕಂಡು ಬಂದಿದೆ ಎಂದು ಚಿತ್ತಾಕುಲಾ ಪಿಎಸ್​ಐ ಪ್ರವೀಣ್ ಕುಮಾರ ಆರ್. ಅವರು ಮಾಹಿತಿ ನೀಡಿದ್ದಾರೆ.

    ಗುಣಹೊಂದಿದ 8 ಜನರ ಬಿಡುಗಡೆ: ಕರೊನಾದಿಂದ ಗುಣ ಹೊಂದಿದ ಒಬ್ಬ ವೃದ್ಧೆ ಸೇರಿ 8 ಜನರನ್ನು ಕ್ರಿಮ್್ಸ ಆಸ್ಪತ್ರೆಯಿಂದ ಗುರುವಾರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಧಾರವಾಡದ 6 ಹಾಗೂ ಶಿರಸಿ ಮತ್ತು ದಾಂಡೇಲಿ ತಲಾ ಒಬ್ಬರಿದ್ದಾರೆ. ಕರೊನಾ ದೃಢಪಟ್ಟು ತೀವ್ರ ನಿಗಾ ಘಟಕದಲ್ಲಿದ್ದ ಕಾರವಾರದ ಇಬ್ಬರು ಹಾಗೂ ಕ್ರಿಟಿಕಲ್ ವಾರ್ಡ್​ನಲ್ಲಿರುವ ಶಿರಸಿಯ ಒಬ್ಬರ ಗಂಟಲ ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆದರೆ, ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts