More

    ಮೃತ ಕಾರ್ಯಕರ್ತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿ


    ಕೊಡಗು : ಸಿದ್ದಾಪುರ ಸಮೀಪದ ವಾಲ್ನೂರು ಬಳಿ ಪ್ರಚಾರ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ರಾಮಪ್ಪ ಅವರ ಸಾವಿಗೆ ಸರ್ಕಾರ ನೈತಿಕ ಹೊಣೆ ಹೊತ್ತು 50 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಅಪಘಾತ ಮಾಡಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ವಿರಾಜಪೇಟೆ ಮಂಡಲ ಕಾರ್ಯಕರ್ತರು ಶನಿವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.


    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತಯಾಚನೆ ಮಾಡುವುದೇ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ರಕ್ಷಣೆ ನೀಡಬೇಕಾಗಿದೆ. ಕಾರ್ಯಕರ್ತರು ಧೈರ್ಯ ಗುಂದದೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಶ್ರಮವಹಿಸಬೇಕು ಎಂದು ಕೋರಿದರು.


    ವಾಲ್ನೂರ್‌ಬಳಿ ಬಿಜೆಪಿ ಕಾರ್ಯಕರ್ತನ ಮೇಲೆ ಅಪಘಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ಸರ್ಕಾರದ ವತಿಯಿಂದ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಹಣ ನೊಂದ ಕುಟುಂಬಕ್ಕೆ ನೀಡಬೇಕು ಎಂದು ಆಗ್ರಹಿಸಿದರು.


    ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ರಾಜ್ಯದ ವಿವಿಧ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಪ್ರಕರಣಗಳು ಆಗಿಂದ್ದಾಗಿಯೇ ಮರುಕಳಿಸುತ್ತಿದೆ. ಇವುಗಳಿಗೆ ಕಡಿವಾಣ ಹಾಕಬೇಕು. ಅಪಘಾತ ಪ್ರಕರಣದಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಮತ್ತೋರ್ವ ಕಾರ್ಯಕರ್ತ ಚೇತರಿಸಿಕೊಳ್ಳುತ್ತಿದ್ದಾನೆ. ಕಾರು ಹರಿಸಿದ ದುಷ್ಕರ್ಮಿಗಳು ಕಾರನ್ನು ನಿಲ್ಲಿಸದೆ ಪರಾರಿಯಾಗಿರುವುದು ಕಂಡು ಬಂದಿರುವುದರಿಂದ ಉದ್ದೇಶಪೂರ್ವಕವಾಗಿಯೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.


    ವಿರಾಜಪೇಟೆ ಮಂಡಲದ ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಗಣಪತಿ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು.


    ಪೊನ್ನಂಪೇಟೆ ತಹಸೀಲ್ದಾರ್ ಮೋಹನ್ ಕುಮಾರ್ ಅವರ ಮೂಲಕ ರಾಜ್ಯ ಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿರಾಜಪೇಟೆ ಬಿಜೆಪಿ ಮಂಡಳಿಯ ವಕ್ತಾರ ರಾಕೇಶ್ ದೇವಯ್ಯ, ಪೊನ್ನಂಪೇಟೆ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧುಕುಮಾರ್, ಕಾಟಿಮಾಡ ಶರೀನ್ ಮುತ್ತಣ, ಆಲೆಮಾಡ ಸುಧೀರ್, ಸುರೇಶ್ ರೈ, ಮಹಿಳಾ ಮೋರ್ಚದ ಅಧ್ಯಕ್ಷರಾದ ಕವಿತಾ ಬೋಜಪ್ಪ, ಉಪಾಧ್ಯಕ್ಷರಾದ ಬೊಟ್ಟಂಗಡ ದಶಮಿ, ಪಕ್ಷದ ಪ್ರಮುಖರಾದ ಕೊಣಯಂಡ ಬೋಜಮ್ಮ ಸೇರಿದಂತೆ ವಿವಿಧ ಶಕ್ತಿ ಕೇಂದ್ರದ ಪ್ರಮುಖರು, ಸಹಪ್ರಮುಖರು,ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts