More

    ಕಾಲುಬಾಯಿಗೆ ಐದು ಹಸುಗಳ ಬಲಿ : ಬಾನಂದೂರು ಗ್ರಾಮದಲ್ಲಿ ದುರಂತ ರೈತ ಬಸವರಾಜು ಎಂಬುವವರ

     ಬಿಡದಿ : ಜೀವನ ನಿರ್ವಹಣೆಗೆ ಹೈನುಗಾರಿಕೆಯನ್ನೇ ನಂಬಿದ್ದ ರೈತನ ಐದು ಹಸುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಮೃತಪಟ್ಟಿರುವುದು ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದಿದೆ.

    ಗ್ರಾಮದ ರೈತ ಬಸವರಾಜು ಕಳೆದ ಆರು ವರ್ಷಗಳಿಂದ ಸುಮಾರು 30 ಹಸುಗಳನ್ನು ಸಾಕಿ ಪೋಷಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಲುಬಾಯಿ ರೋಗ ಕಾಣಿಸಿಕೊಂಡ ಪರಿಣಾಮ ಕಳೆದ ಮೂರು ದಿನಗಳಲ್ಲಿ ಎಚ್‌ಎಫ್ ಮತ್ತು ಜರ್ಸಿ ತಳಿಯ 5 ಹಸುಗಳು ಮೃತ ಪಟ್ಟಿವೆ. ಇವುಗಳನ್ನೇ ನಂಬಿದ್ದ ರೈತನಿಗೆ ಹಸುಗಳ ಸಾವು ಬರಸಿಡಿಲು ಬಡಿದಂತಾಗಿದ್ದು, ಇರುವ ಹಸುಗಳನ್ನು ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆೆ.

    ರೈತ ಬಸವರಾಜ್ ಪ್ರತಿನಿತ್ಯ 90 ಲೀಟರ್ ಹಾಲು ಕರೆದು ಹಾಲಿನ ಕೇಂದ್ರಕ್ಕೆ ಸರಬರಾಜು ಮಾಡುತ್ತಿದ್ದರು. ಹಲವು ವರ್ಷಗಳಿಂದ ಸಾಕಿದ್ದ ಹಸು ಇನ್ನೇನು ಕರು ಹಾಕಿ ಹಾಲು ಕೊಡಬೇಕು ಎನ್ನುವ ಸಮಯದಲ್ಲಿ ಒಂದೆರೆಡು ಹಸುಗಳಲ್ಲಿ ರೋಗ ಕಾಣಿಸಿಕೊಂಡು ಮೃತಪಟ್ಟಿವೆ. ದೃಢಕಾಯವಾಗಿದ್ದ 5 ಹಸುಗಳು ಮೃತಪಟ್ಟಿರುವುದರಿಂದ 3 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಪಶುಪಾಲನಾ ಮತ್ತು ಪಶು ಸಂಗೋಪನಾ ಇಲಾಖೆ ಮತ್ತು ಸ್ಥಳೀಯ ಬಮುಲ್ ಶಿಬಿರ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹಸುಗಳು ಸಾವನ್ನಪ್ಪಿವೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಕಾಲಕಾಲಕ್ಕೆ ಲಸಿಕೆ ಹಾಕಿದ್ದರೆ ಹಸುಗಳು ಬದುಕುಳಿಯುತ್ತಿದ್ದವು. ಆದರೆ, ಲಸಿಕೆ ನೀಡದಿರುವುದು ಹಸುಗಳ ಸಾವಿಗೆ ಕಾರಣವಾಗಿದೆ. ಕೂಡಲೇ ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತನಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಗ್ರಾಮದ ನಂಜುಂಡಿ ಎಂಬುವವರು ಆಗ್ರಹಿಸಿದ್ದಾರೆ.
    ರಾಮನಗರ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನೇ ನಂಬಿ ಅದೆಷ್ಟೋ ರೈತರು ಬದುಕು ಸಾಗಿಸುತ್ತಿದ್ದಾರೆ. ಇನ್ನು ಕಾಲುಬಾಯಿ ರೋಗ ಸಹ ಜಿಲ್ಲೆಯಲ್ಲಿ ಉಲ್ಬಣವಾಗುತ್ತಿದೆ. ಕಳೆದ 6 ತಿಂಗಳಿಂದ ವರ್ತುಲ ಲಸಿಕಾ ಕಾರ್ಯಕ್ರಮ ನಡೆಸದ ಪರಿಣಾಮ ಈಗಾಗಲೇ ನೂರಾರು ರಾಸುಗಳು ಕಾಲು ಬಾಯಿ ಜ್ವರಕ್ಕೆ ಬಲಿಯಾಗಿವೆ. ಪಶುವೈದ್ಯ ಇಲಾಖೆಯಲ್ಲಿ ಮಾತ್ರ ಸತ್ತ ರಾಸುಗಳ ಸಂಖ್ಯೆ ಎರಡಂಕಿಯಲ್ಲಿಯೇ ಇದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕಾಲುಬಾಯಿ ಜ್ವರಕ್ಕೆ ಕಡಿವಾಣ ಹಾಕಿ ಹಸುಗಳನ್ನು ರಕ್ಷಿಸಬೇಕೆಂಬುದು ರೈತರ ಒತ್ತಾಯವಾಗಿದೆ.

    ಹಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡ ತಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಡಲಾಗಿತ್ತು. ಆದರೆ ಯಾವುದೇ ಪ್ರಯೋಜವಾಗಿಲ್ಲ. ಬುಧವಾರ 4 ಮತ್ತು ಗುರುವಾರ 1 ಹಸು ಸೇರಿ ಒಟ್ಟು 5 ಹಸುಗಳು ಮೃತಪಟ್ಟಿವೆ. ಪಶು ವೈದ್ಯರು ಲಸಿಕೆ ನೀಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಸಮಗ್ರವಾಗಿ ಎಲ್ಲ ಹಸುಗಳಿಗೆ ಕಾಲುಬಾಯಿ ರೋಗಕ್ಕೆ ವ್ಯಾಕ್ಸಿನ್ ಹಾಕಬೇಕಿತ್ತು. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ.
    ಬಾನಂದೂರು ಬಸವರಾಜು ರಾಸುಗಳನ್ನು ಕಳೆದುಕೊಂಡ ಹೈನುಗಾರ.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts