More

    5 ವರ್ಷದ ನಂತರ ಬಂತು ಅಂತ್ಯಸಂಸ್ಕಾರ ನಿಧಿ!

    ಕಾರವಾರ: ಮೃತಪಟ್ಟ ಕಡುಬಡವರ ಅಂತ್ಯಸಂಸ್ಕಾರಕ್ಕೆ ನೀಡಬೇಕಾಗಿದ್ದ ತುರ್ತು ನಿಧಿಯನ್ನು ಸರ್ಕಾರ ಐದು ವರ್ಷಗಳ ನಂತರ ಬಿಡುಗಡೆ ಮಾಡಿದೆ. ಹಣ ನೀಡಲು ಅಧಿಕಾರಿಗಳು ಈಗ ಅರ್ಜಿದಾರರ ದಾಖಲೆಗಾಗಿ ಹುಡುಕಾಟ ನಡೆಸಿದ್ದಾರೆ.
    ರಾಜ್ಯ ಸರ್ಕಾರದ ಅಂತ್ಯಸಂಸ್ಕಾರ ಯೋಜನೆಯಡಿ ಫಲಾನುಭವಿಗಳಿಗೆ ವಿತರಣೆಗಾಗಿ ಜಿಲ್ಲೆಗೆ 3.02 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ಬಾಕಿ ಇದ್ದ 5272 ಅರ್ಜಿದಾರರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
    2015ರಿಂದ ಬಾಕಿ:
    ಕಡುಬಡವರು ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ತರಲೂ ಕಷ್ಟಪಡುವ ಪರಿಸ್ಥಿತಿ ಇದೆ. ಇದನ್ನು ಗಮನಿಸಿದ ಸರ್ಕಾರ 2006ರಲ್ಲಿ ಅಂತ್ಯಸಂಸ್ಕಾರ ನಿಧಿ ಯೋಜನೆ ಪ್ರಾರಂಭಿಸಿತು. ಬಿಪಿಎಲ್ ಕುಟುಂಬದವರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರದ ಖರ್ಚಾಗಿ ಸರ್ಕಾರದಿಂದ ತಲಾ 1 ಸಾವಿರ ರೂ. ಗಳನ್ನು ಸಂಬಂಧಿಕರಿಗೆ ತುರ್ತಾಗಿ ನೀಡುವ ಯೋಜನೆ ಇದಾಗಿತ್ತು. ನಂತರ ಈ ಅಂತ್ಯಸಂಸ್ಕಾರ ನಿಧಿಯನ್ನು 5 ಸಾವಿರ ರೂ. ಗೆ ಹೆಚ್ಚಿಸಲಾಗಿದೆ. ಮರಣ ಪ್ರಮಾಣಪತ್ರ, ಸ್ಥಳೀಯ ಇಬ್ಬರು ಮುಖಂಡರ ಸಹಿ ಪಡೆದು ಅರ್ಜಿ ಸಲ್ಲಿಸಿದರೆ ತಹಸೀಲ್ದಾರರು ಕುಟುಂಬಕ್ಕೆ 5 ಸಾವಿರ ರೂ. ನೀಡುವ ಅಧಿಕಾರ ಹೊಂದಿದ್ದರು. ಆದರೆ, ಯೋಜನೆ ಘೋಷಿಸಿದ ಸರ್ಕಾರ ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಮಾಡಿರಲಿಲ್ಲ. ಪ್ರತಿ ತಾಲೂಕಿನಲ್ಲಿ ನೂರಿನ್ನೂರು ಜನರಿಗೂ ಪರಿಹಾರ ದೊರಕಿರಲಿಲ್ಲ. ಜಿಲ್ಲೆಯಲ್ಲಿ 2015 ರಿಂದ ಇದುವರೆಗೂ ಸಲ್ಲಿಸಿದ ಅರ್ಜಿಗಳು ಬಾಕಿ ಇದ್ದವು.
    ಅರ್ಜಿ ಸಲ್ಲಿಸಿದವರೇ ಇಲ್ಲ:
    ಮೃತರ ಅಂತ್ಯ ಸಂಸ್ಕಾರಕ್ಕಾಗಿ ತುರ್ತಾಗಿ ನೀಡಬೇಕಿದ್ದ ನಿಧಿ ಐದನೇ ವರ್ಷದ ಶ್ರಾದ್ಧ ಕಳೆದರೂ ಬಂದಿರಲಿಲ್ಲ. ಅರ್ಜಿ ಸಲ್ಲಿಸಿದವರು ಕಚೇರಿಗೆ ಓಡಾಡಿ ಸೋತು ನಂತರ ಮರೆತು ಹೋಗಿದ್ದರು. ಇತ್ತೀಚೆಗೆ ಸರ್ಕಾರ ಯೋಜನೆಗೆ ಹಣ ಬಿಡುಗಡೆ ಮಾಡುತ್ತಿದ್ದಂತೆ ಎಲ್ಲ ಅರ್ಜಿದಾರರ ದಾಖಲೆಗಳನ್ನು ಮರು ಪರಿಶೀಲನೆ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ತಹಸೀಲ್ದಾರ್ ಕಚೇರಿಗಳಿಂದ ಪ್ರತಿ ಅರ್ಜಿದಾರರ ದಾಖಲೆಗಳನ್ನು ಮರು ಪರಿಶೀಲನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಪೈಕಿ ಕೆಲವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
    39 ಲಕ್ಷ ವಾಪಸ್..?: ಈ ಬಾರಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿ ವಿವಿಧೆಡೆ ಅಂತ್ಯಸಂಸ್ಕಾರಕ್ಕೆ ಸಮಸ್ಯೆಯಾದ ನಂತರ ಸರ್ಕಾರ ಜಿಲ್ಲೆಗೆ ಅಂತ್ಯಸಂಸ್ಕಾರ ನಿಧಿಯಡಿ 3.02 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಿಲ್ಲೆಯಲ್ಲಿ ಕಳೆದ ಮಾರ್ಚ್ ಅಂತ್ಯದವರೆಗೆ ಬಾಕಿ ಇದ್ದ ಅರ್ಜಿಗಳಿಗೆ 2.63 ಕೋಟಿ ರೂ. ಗಳನ್ನು ವೈಯಕ್ತಿಕವಾಗಿ ಖಾತೆಗಳಿಗೆ ಜಮಾ ಮಾಡಲು ಸಿದ್ಧತೆ ನಡೆಸಲಾಗಿದೆ. ಉಳಿದ ಹಣವನ್ನು ಸರ್ಕಾರಕ್ಕೆ ಮರಳಿಸಬೇಕೋ ಅಥವಾ 2021ನೇ ಸಾಲಿನ ಅರ್ಜಿಗಳಿಗೆ ಪರಿಹಾರಕ್ಕೆ ಬಳಸಿಕೊಳ್ಳಬೇಕೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮಾರ್ಚ್​ನಿಂದ ಮೇ ವರೆಗೆ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಯೋಜನೆಯಡಿ 289 ಅರ್ಜಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಂತ್ಯಸಂಸ್ಕಾರ ಯೋಜನೆಯಡಿ ಹಣ ಮಂಜೂರಾಗಿದ್ದು , ಪ್ರತಿ ಅರ್ಜಿದಾರರ ದಾಖಲೆಯನ್ನು ಮರು ಪರಿಶೀಲನೆ ನಡೆಸಿಯೇ ಹಣ ನೀಡಲಾಗುತ್ತಿದೆ.
    | ಕೃಷ್ಣಮೂರ್ತಿ ಎಚ್.ಕೆ., ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts