More

    440 ಕೋಟಿ ರೂ. ವೆಚ್ಚದಲ್ಲಿ ಶೀಘ್ರ ಆರಂಭ

    ಕಾರವಾರ: ರಾಜ್ಯದ ಪ್ರಮುಖ 4 ಬಂದರುಗಳಿಗೆ ಸಂಪರ್ಕ ಕಲ್ಪಿಸಲು ಭಾರತ ಮಾಲಾ ಯೋಜನೆಯಲ್ಲಿ 3 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

    ಶಿರಸಿ – ಕುಮಟಾ – ಬೇಲೆಕೇರಿ ಬಂದರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ (ರಾಷ್ಟ್ರೀಯ ಹೆದ್ದಾರಿ 766 ಇ ಮತ್ತು 766 ಇಇ, ಇದರ ಒಟ್ಟು ಉದ್ದ 58.9 ಕಿ.ಮೀ.) 440.16 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶನಿವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಮಾಜಾಳಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಶಿರಸಿ – ಕುಮಟಾ – ಬೇಲೆಕೇರಿ ಬಂದರು ರಸ್ತೆಯನ್ನು 2022ರ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

    ಶಿರಸಿಯ ಎಕ್ಕಂಬಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯೂ ಶೀಘ್ರ ಪ್ರಾರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಹೊನ್ನಾವರದ ಕಾಸರಕೋಡು ಬಂದರಿಗೆ ಸಂಪರ್ಕ ಕಲ್ಪಿಸುವ 4 ಕಿಮೀ, ಅಂಕೋಲಾದ ಬೇಲೆಕೇರಿ ಬಂದರಿಗೆ ಸಂಪರ್ಕ ಕಲ್ಪಿಸುವ 7 ಕಿಮೀ ಬೈಪಾಸ್ ರಸ್ತೆ ನಿರ್ವಣಕ್ಕೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧ ಮಾಡಲಾಗುತ್ತಿದ್ದು, 2021ರಲ್ಲಿ ಅವಾರ್ಡ್ ಆಗಲಿದೆ. ಕೊಂಕಣ ರೈಲು ಮಾರ್ಗದಿಂದ ಬೇಲೆಕೇರಿ ಬಂದರಿಗೆ ರೈಲು ಹಳಿ ಸಂಪರ್ಕ ಕಾಮಗಾರಿಗೆ ಯೋಜನೆ ಸಿದ್ಧವಾಗುತ್ತಿದ್ದು, 2022ರಲ್ಲಿ ಅವಾರ್ಡ್ ಆಗಲಿದೆ. ಈ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಅತಿ ಹೆಚ್ಚು ಅನುಕೂಲವಾಗಲಿದೆ. ಖಾನಾಪುರ-ಗೋವಾ ರಾಷ್ಟ್ರೀಯ ಹೆದ್ದಾರಿ 4ಎ ಕಾಮಗಾರಿ ಶೇ. 70ರಷ್ಟು ಮುಕ್ತಾಯವಾಗಿದ್ದು, 2021ರ ಆಗಸ್ಟ್​ನಲ್ಲಿ ಮುಕ್ತಾಯವಾಗಲಿದೆ ಎಂದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಡಿ.ಬಿ. ಸದಾನಂದ ಗೌಡ, ಮೇಜರ್ ವಿ.ಕೆ. ಸಿಂಗ್, ರಾಜ್ಯಸಭಾ ಸದಸ್ಯರಾದ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇದ್ದರು. ಕಾರ್ಯಕ್ರಮ ವೀಕ್ಷಣೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಎಡಿಸಿ ಕೃಷ್ಣಮೂರ್ತಿ, ಎಸಿ ವಿದ್ಯಾ ಇದ್ದರು.

    ಸದ್ಯ ಬೈಪಾಸ್​ಗಳಿಲ್ಲ:
    ಈಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲೇ ಚತುಷ್ಪಥ ಕಾಮಗಾರಿಗಳನ್ನು ಶೀಘ್ರ ಮುಗಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಎಚ್​ಎಐ) ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಅವರಿಗೆ ಮಾಹಿತಿ ನೀಡಿದ್ದಾರೆ.

    ಕಾರ್ಯಕ್ರಮದ ಬಳಿಕ ನಡೆದ ಅನೌಪಚಾರಿಕ ಸಭೆಯಲ್ಲಿ ಅಧಿಕಾರಿಗಳು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧೆಡೆ ಬೈಪಾಸ್, ಅಂಡರ್ ಪಾಸ್, ಮೇಲ್ಸೇತುವೆ ನಿರ್ವಣಕ್ಕೆ ಬೇಡಿಕೆ ಇದೆ. ಆದರೆ, ಸದ್ಯ ಇದ್ದ ಹೆದ್ದಾರಿಯಲ್ಲೇ ವಿಸ್ತರಿಸಿ ಕಾಮಗಾರಿ ಮುಗಿಸಲಾಗುವುದು. ಎರಡನೇ ಹಂತದಲ್ಲಿ ಸ್ಥಳೀಯ ಶಾಸಕರ, ಜನರ ಅಭಿಪ್ರಾಯ ಪಡೆದು ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕುಮಟಾ ಪಟ್ಟಣದಲ್ಲಿ ಕೆಲವು ಅತಿಕ್ರಮಣ ತೆರವು ಮಾಡಲಾಗುವುದು. ಬೇರೆ ಭೂ ಸ್ವಾಧೀನ ಮಾಡದೇ 30 ಮೀಟರ್​ಗೆ ಸೀಮಿತ ಮಾಡಿ ಕಾಮಗಾರಿ ನಡೆಸಲಾಗುವುದು. ಹೊನ್ನಾವರ ಶರಾವತಿ ಸೇತುವೆಯಿಂದ ಭಟ್ಕಳ ಸರ್ಕಲ್​ವರೆಗೆ 45 ಮೀಟರ್, ಅಲ್ಲಿಂದ ಬೆಂಗಳೂರು ಸರ್ಕಲ್​ವರೆಗೆ 30 ಮೀಟರ್, ಮುಂದೆ ರ್ಕ ದಿಕ್ಕಿನಲ್ಲಿ ಮತ್ತೆ 45 ಮೀಟರ್ ವಿಸ್ತರಣೆ ಮಾಡಲಾಗುವುದು. ಹಳೆಯ ಶರಾವತಿ ಸೇತುವೆಯ ಮೇಲೂ ಸದ್ಯಕ್ಕೆ ವಾಹನ ಸಂಚಾರ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

    ಮಾಜಾಳಿಯಿಂದ ಮಾದನಗೇರಿಯವರೆಗೆ 17 ಕಡೆಗಳಲ್ಲಿ ಮೇಲ್ಸೇತುವೆ, ಅಂಡರ್ ಪಾಸ್ ನಿರ್ವಣಕ್ಕೆ ಪ್ರಸ್ತಾವನೆ ಕಳಿಸಿದ್ದು, ಎರಡನೇ ಹಂತದಲ್ಲಿ ಕಾಮಗಾರಿ ನಡೆಸುವ ಭರವಸೆಯನ್ನು ಎನ್​ಎಚ್​ಎಐ ಅಧಿಕಾರಿಗಳು ನೀಡಿದ್ದಾರೆ. ಹೆದ್ದಾರಿ ಪಕ್ಕ ಸರ್ವೀಸ್ ರಸ್ತೆಗಳನ್ನು ನಿರ್ವಿುಸಲು ಒತ್ತು ನೀಡುವಂತೆ ಸೂಚಿಸಿದ್ದೇನೆ.
    | ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts