More

    4 ವರ್ಷದ ಬಳಿಕ 450 ಮೀ. ರಸ್ತೆ ಅಗಲೀಕರಣ ಸನ್ನಿಹಿತ

    ಶಿವಮೊಗ್ಗ: ಕಳೆದ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಾಗರ ರಸ್ತೆಯ ಗಾಡಿಕೊಪ್ಪ ಭಾಗದ ರಸ್ತೆ ಅಗಲೀಕರಣ ಕಾಮಗಾರಿ ಕೊನೆಗೂ ಶುರುವಾಗಿದೆ. ಇದರೊಂದಿಗೆ ಎಂಆರ್‌ಎಸ್‌ನಿಂದ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದವರೆಗಿನ ಚತುಷ್ಪಥ ರಸ್ತೆ ಪೂರ್ಣಗೊಳ್ಳುವ ದಿನ ಸನ್ನಿಹಿತವಾಗುತ್ತಿದೆ.
    70 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಎಸ್ ವೃತ್ತದಿಂದ ಲಯನ್ ಸಫಾರಿ ಸಮೀಪದವರೆಗೆ 15 ಕಿಮೀ ಹಾಗೂ ವಿದ್ಯಾನಗರದ ರೈಲ್ವೆ ಗೇಟ್‌ನಿಂದ ಪುರಲೆ ಸುಬ್ಬಯ್ಯ ಕಾಲೇಜುವರೆಗೆ 3 ಕಿಮೀ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿತ್ತು. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇದೀಗ ಆಲ್ಕೊಳದಿಂದ ಗಾಡಿಕೊಪ್ಪವರೆಗೆ ರಸ್ತೆ ಅಗಲೀಕರಣಕ್ಕೆ ಎದುರಾಗಿದ್ದ ಹಲವು ಅಡೆತಡೆಗಳು ನಿವಾರಣೆ ಆಗಿದ್ದು ಕಾಮಗಾರಿಗೆ ಮತ್ತೆ ಭರದಿಂದ ಸಾಗಿದೆ.
    ಅರಣ್ಯ ಇಲಾಖೆಯಿಂದ ಅನುಮತಿ ಸಿಗದೆ, ಹಲವೆಡೆ ವಾಟರ್ ಲೈನ್ ಶಿಫ್ಟಿಂಗ್ ಮಾಡದೆ, ಭದ್ರಾವತಿ ವಲಯ ಟೆಂಡರ್ ಅಂತಿಮಗೊಳದೆ ಹಾಗೂ ಮರಗಳ ಸ್ಥಳಾಂತರಗೊಳಿಸದೆ ಹಲವು ವರ್ಷ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬಗೊಂಡಿತ್ತು. 8ರಿಂದ 10 ಮನೆಗಳ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಇದೀಗ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ ಸಹಕಾರದಿಂದ ಎಲ್ಲ ಅಡೆತಡೆಗಳನ್ನು ನಿವಾರಿಸಿದೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ಅಗಲೀಕರಣ ಶುರುವಾಗಿದ್ದು ಜುಲೈ ಮಾಸಾಂತ್ಯಕ್ಕೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
    450 ಮೀ ರಸ್ತೆ ನಿರ್ಮಾಣಕ್ಕೆ ಹರಸಾಹಸ: ಆಲ್ಕೊಳ ವೃತ್ತದಿಂದ ಗಾಡಿಕೊಪ್ಪ ಗ್ರಾಮದವರೆಗಿನ ರಸ್ತೆ ನಿರ್ಮಾಣ ಮಾತ್ರ ನನೆಗುದಿಗೆ ಬಿದ್ದಿದ್ದ ಕಾರಣದಿಂದ ಸಾಗರ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸವಾರರು ತೊಂದರೆ ಎದುರಿಸುತ್ತಿದ್ದರು. ಅದರಲ್ಲೂ 18 ಕಿಮೀ ನಲ್ಲಿ ಕೇವಲ 450 ಮೀಟರ್ ರಸ್ತೆ ಅಗಲೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹರಸಾಹಸ ಪಡುವಂತಾಗಿತ್ತು. ಎಲ್ಲ ಕಡೆ ಕೆಲಸ ಮುಗಿಸಿದರೂ ಈ ಅಲ್ಪ ಪ್ರಮಾಣದ ರಸ್ತೆ ಮುಗಿಸದೇ ಗುತ್ತಿಗೆದಾರರೂ ಜಾಗ ಖಾಲಿ ಮಾಡದ ಸ್ಥಿತಿ ನಿರ್ಮಾಣವಾಗಿತ್ತು.
    ಹೆಚ್ಚಿನ ಪರಿಹಾರಕ್ಕೆ ಸ್ಥಳೀಯರಿಂದ ಮೊರೆ: ಸಾಗರ ರಸ್ತೆಯಲ್ಲಿ ಆಲ್ಕೊಳದಿಂದ ಗಾಡಿಕೊಪ್ಪದವರೆಗೆ ಎರಡೂ ಭಾಗದಲ್ಲಿ ಮನೆಗಳು ಇದ್ದವು. ಈ ಮೊದಲು ಸರ್ಕಾರ ನಿಗದಿ ಪಡಿಸಿದ್ದ ಪರಿಹಾರ ಪಡೆಯಲು ನಿವಾಸಿಗಳು ನಿರಾಕರಿಸಿದ್ದರು. ಆರಂಭದಲ್ಲಿ ಖಾತೆ ಇರುವ ಜಾಗಕ್ಕೆ ಪರಿಹಾರ ನೀಡಲಾಗಿತ್ತು. ಕೆಲವರು ಖಾತೆ ಹೊಂದಿರಲಿಲ್ಲ. ಅಂತಹವರಿಗೂ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಬೇಡಿಕೆ ಈಡೇರಿಸುವವರೆಗೆ ರಸ್ತೆ ನಿರ್ಮಾಣಕ್ಕೆ ಬಿಡಲಿಲ್ಲ. ಅಂತಿಮವಾಗಿ ಜಿಲ್ಲಾಡಳಿತ ಹೆಚ್ಚಿನ ಮೊತ್ತದ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ತೆರವು ಮಾಡಿದರು.
    5 ಕೋಟಿ ರೂ. ಪರಿಹಾರ ವಿತರಣೆ: 40ಕ್ಕೂ ಅಧಿಕ ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಅದರಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ಬಲಭಾಗದ ನಿವಾಸಿಗಳಿಗೆ ಸಂಪೂರ್ಣ ಪರಿಹಾರ ವಿತರಿಸಿದ್ದು ಎಡಭಾಗದ ನಿವಾಸಿಗಳಲ್ಲಿ ಕೆಲವರಿಗೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಈವರೆಗೆ 5 ಕೋಟಿ ರೂ. ಪರಿಹಾರ ನೀಡಿದ್ದು ಇನ್ನೂ ಸ್ವಲ್ಪ ಪ್ರಮಾಣದ ಮೊತ್ತ ಪರಿಹಾರ ಬಾಕಿ ಇದೆ. ಇದರ ಜತೆಗೆ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಮಾರ್ಗ ಸ್ಥಳಾಂತರ ಪ್ರಕ್ರಿಯೆ ಮೆಸ್ಕಾಂ ಕಡೆಯಿಂದ ಮಂದಗತಿಯಲ್ಲಿ ಸಾಗಿತ್ತು. ಚರಂಡಿ, ಪೈಪ್‌ಲೈನ್ ಅಳವಡಿಕೆ ಇತ್ಯಾದಿ ಕೆಲಸಗಳನ್ನು ಪೂರ್ಣಗೊಳಿಸುವುದು ವಿಳಂಬವಾಗಿದ್ದ ಕಾರಣ 450 ಮೀ. ರಸ್ತೆ ನಿರ್ಮಾಣಕ್ಕೆ ಸತತ ನಾಲ್ಕು ವರ್ಷ ತೆಗೆದುಕೊಳ್ಳುವಂತಾಯಿತು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts