More

    4 ಮಿಲಿಯನ್ ತಂಬಾಕು ಮಾರಾಟ

    ಸಿ.ಎನ್.ವಿಜಯ್ ಪಿರಿಯಾಪಟ್ಟಣ
    2ನೇ ಬಾರಿ ಆರಂಭಗೊಂಡಿದ್ದ ತಂಬಾಕು ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು 4 ಮಿಲಿಯನ್ ತಂಬಾಕು ಮಾರಾಟವಾಗಿದೆ.

    ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಮಾರ್ಚ್ ತಿಂಗಳಿನಲ್ಲಿ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ರೈತರು ಸುಮಾರು ನಾಲ್ಕು ಮಿಲಿಯನ್ ತಂಬಾಕು ಅನ್ನು ಮಾರಾಟ ಮಾಡಲಾಗಿರಲಿಲ್ಲ. ಲಾಕ್‌ಡೌನ್‌ನಲ್ಲಿ ಕೊಂಚ ಸಡಿಲಿಕೆ ನೀಡಿದ್ದರಿಂದ ತಂಬಾಕು ಮಂಡಳಿಯ ಅಧಿಕಾರಿಗಳು ಮತ್ತು ತಂಬಾಕು ಖರೀದಿದಾರರು ಮೇ ಮೂರನೆಯ ವಾರದಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಪುನರಾರಂಭಿಸಿದ್ದರು. ಸುಮಾರು ಇಪ್ಪತ್ತು ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಿರಿಯಾಪಟ್ಟಣ, ಕಂಪಲಾಪುರ, ಚಿಲ್ಕುಂದ, ಹುಣಸೂರು ಸೇರಿದಂತೆ 6 ತಂಬಾಕು ಹರಾಜು ಮಾರುಕಟ್ಟೆಗಳಲ್ಲಿ ಒಟ್ಟಾರೆ 04 ಮಿಲಿಯನ್ ತಂಬಾಕು ಮಾರಾಟಗೊಳ್ಳುವ ಮೂಲಕ 2019-2020 ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ವರ್ಷ 106 ಮಿಲಿ ಯನ್ ತಂಬಾಕು ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ ಸಾಲಿನಲ್ಲಿ 85ಮಿಲಿಯನ್ ತಂಬಾಕು ಮಾತ್ರ ಮಾರಾಟ ವಾಗಿತ್ತು. ತಂಬಾಕು ಉತ್ಪಾದನೆಯಲ್ಲಿ ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಸಾಲಿನಲ್ಲಿ 21 ಮಿಲಿಯನ್ ಹೆಚ್ಚಳಗೊಂಡಿದೆ.

    ಕಳೆದ ಸಾಲಿನಲ್ಲಿ ಉತ್ತಮ ತಂಬಾಕು ಪ್ರತಿ ಕೆಜಿಗೆ ಸರಾಸರಿ 142 ರೂ.ಗೆ ಮಾರಾಟವಾಗಿತ್ತು. ಈ ಸಾಲಿನಲ್ಲಿ 124 ರೂಗೆ ಮಾರಾ ಟವಾಗಿದ್ದು ಬೆಳೆಗಾರರು ಪ್ರತಿ ಕೆಜಿಗೆ 18 ರೂ.ನಷ್ಟ ಅನುಭವಿಸಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅತಿ ವೃಷ್ಟಿ ಯಿಂದಾಗಿ ತೇವಾಂಶ ಹೆಚ್ಚಳಗೊಂಡಿದ್ದರಿಂದ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದನೆ ಕುಸಿತಗೊಂಡಿದೆ. ಕೆಳದರ್ಜೆಯ ತಂಬಾಕು ಹೆಚ್ಚು ಉತ್ಪಾದನೆಯಾಗಿದೆ. ಕಳೆದ ಸಾಲಿನಲ್ಲಿ 19 ಮಿಲಿಯನ್ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದನೆಯಾಗಿತ್ತು.

    ಈ ವರ್ಷ ಆ ಪ್ರಮಾಣ 14 ಮಿಲಿಯನ್‌ಗೆ ಕುಸಿದಿದೆ. ಕಳೆದ ವರ್ಷ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ 165 ರೂ. ಪಡೆದಿದ್ದ ತಂಬಾಕು ಬೆಳೆಗಾರರು ಈ ವರ್ಷ ಪ್ರತಿ ಕೆಜಿಗೆ 175 ರೂ.ಪಡೆದಿದ್ದರೂ ಉತ್ಪಾದನೆಯಲ್ಲಿ ಕುಸಿತವಾಗಿರುವುದರಿಂದ ತಂಬಾಕು ಬೆಳೆಗಾರರಿಗೆ ಲಾಭ ಕಾಣದಂತಾಗಿದೆ. ಕಳೆದ ವರ್ಷ 26 ಮಿಲಿಯನ್ ಕೆಳದರ್ಜೆಯ ತಂಬಾಕು ಉತ್ಪನ್ನವಾಗಿದ್ದು ಆದರೆ ಈ ಸಾಲಿನಲ್ಲಿ ಆ ಪ್ರಮಾಣ 45 ಮಿಲಿಯನ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಕಳೆದ ಸಾಲಿನಲ್ಲಿ ಕೆಳ ದರ್ಜೆ ತಂಬಾಕಿಗೆ ಪ್ರತಿ ಕೆಜಿಗೆ ಸರಾಸರಿ 118 ರೂ. ಲಭಿಸಿತ್ತು. ಆದರೆ ಈ ಸಾಲಿನಲ್ಲಿ ಪ್ರತಿ ಕೆಜಿಗೆ ಸರಾಸರಿ 91 ರೂ. ಲಭಿಸುವ ಮೂಲಕ ತಂಬಾಕು ಬೆಳೆಗಾರರು ಪ್ರತಿ ಕೆಜಿಗೆ ಸರಾಸರಿ 27 ರೂ. ನಷ್ಟ ಅನುಭವಿಸಿದ್ದಾರೆ. ಕಳೆದ ಸಾಲಿನಲ್ಲಿ 39 ಮಿಲಿಯನ್ ಮಧ್ಯಮ ಗುಣಮಟ್ಟದ ತಂಬಾಕು ಉತ್ಪಾದನೆಯಾಗಿದ್ದರೆ ಈ ಸಾಲಿನಲ್ಲಿ 46 ಮಿಲಿಯನ್ ಮಧ್ಯಮ ದರ್ಜೆಯ ತಂಬಾಕು ಉತ್ಪಾದನೆಯಾಗಿದೆ.

    ಆದರೆ ಕಳೆದ ಸಾಲಿನಲ್ಲಿ ಮಧ್ಯಮ ದರ್ಜೆ ತಂಬಾಕಿಗೆ ಪ್ರತಿ ಕೆಜಿಗೆ ಸರಾಸರಿ 147ರೂ. ಪಡೆದಿದ್ದ ತಂಬಾಕು ಬೆಳೆಗಾರರು ಈ ಸಾಲಿನಲ್ಲಿ ಪ್ರತಿ ಕೆಜಿಗೆ 140 ರೂ. ಪಡೆಯುವ ಮೂಲಕ ಪ್ರತಿ ಕೆಜಿಗೆ 7 ರೂ. ನಷ್ಟ ಅನುಭವಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಉತ್ಪಾದನೆಯ ವೆಚ್ಚದಲ್ಲಿ ಏರಿಕೆಯಾಗುತ್ತಿದ್ದರೂ ತಂಬಾಕು ಬೆಳೆಗಾರರಿಗೆ ನಿರೀಕ್ಷಿತ ದರ ದೊರಕದೆ ನಷ್ಟದ ಸುಳಿಯಲ್ಲಿ ಸಿಲುಕುವಂತಾಗಿದೆ. ತಂಬಾಕು ಬೆಳೆಯನ್ನೇ ನಂಬಿ ಬ್ಯಾಂಕುಗಳಲ್ಲಿ ಮತ್ತು ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದಿರುವ ಬೆಳೆಗಾರರಿಗೆ ಉತ್ಪಾದನಾ ವೆಚ್ಚವೂ ಕೈಗೆ ಸಿಗದೆ ಸಾಲ ತೀರಿಸುವ ಬಗೆ ಹೇಗೆ ಎಂದು ಚಿಂತಿಸುವಂತಾಗಿದೆ.

    ರೈತರು ಹಲವು ತಂಬಾಕು ಬೆಳೆಗಾರರು ಈ ವರ್ಷ ತಂಬಾಕಿಗೆ ಬೆಳೆ ರಜೆ ಘೋಷಿಸಿ ತಂಬಾಕು ಬೆಳೆಗಾರರಿಗೆ ಪರಿಹಾರ ಒದಗಿ ಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಆದರೆ ಇವರ ಮನವಿಗೆ ಸ್ಪಂದಿಸದ ಸರ್ಕಾರ 2020- 21 ನೇ ಸಾಲಿಗೆ 88 ಮಿಲಿಯನ್ ತಂಬಾಕು ಮಾತ್ರ ಉತ್ಪಾದಿಸುವಂತೆ ನಿಗದಿಪಡಿಸಿ ತಂಬಾಕು ಬೆಳೆಗಾರರಿಗೆ ಸೂಚಿಸಿದೆ. ಕೋವಿಡ್ ಸಂಕಷ್ಟದ ನಡುವೆಯೂ ಕೃಷಿಯಲ್ಲಿ ತೊಡಗಿಕೊಂಡಿರುವ ತಂಬಾಕು ಬೆಳೆಗಾರರಿಗೆ ಈ ಸಾಲಿನಲ್ಲಿಯಾದರೂ ಉತ್ತಮ ಇಳುವರಿ ಹಾಗೂ ದರ ದೊರೆತು ಸಂಕಷ್ಟಗಳು ದೂರವಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

    ತಂಬಾಕು ಮಂಡಳಿ ತಂಬಾಕು ಬೆಳೆಗಾರರಿಗೆ ಈ ಸಾಲಿನಲ್ಲಿ 88 ಮಿಲಿಯನ್ ತಂಬಾಕು ಮಾತ್ರ ಉತ್ಪಾದನೆ ಮಾಡುವಂತೆ ನಿಗದಿ ಪಡಿಸಿದೆ. ತಂಬಾಕು ಬೆಳೆಗಾರರ ನೋಂದಣಿ ನವೀಕರಣ ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದೆ. ಶೇ.95 ರಷ್ಟು ತಂಬಾಕು ಬೆಳೆ ಗಾರರು ಮೇ ತಿಂಗಳ ಅಂತ್ಯದ ವೇಳೆಗೆ ನಾಟಿ ಕಾರ್ಯ ಪೂರೈಸಿದ್ದು ತಂಬಾಕು ಮಂಡಳಿ ಸಹ ನೋಂದಾಯಿತ ತಂಬಾಕು ಬೆಳೆಗಾರರಿಗೆ ರಸಗೊಬ್ಬರ ವಿತರಿಸಿದೆ. ತಂಬಾಕು ಬೆಳೆಗಾರರು ಮಂಡಳಿ ನಿಗದಿಪಡಿಸಿರುವ ಪ್ರಮಾಣದಷ್ಟು ಮಾತ್ರ ತಂಬಾಕು ಉತ್ಪಾದನೆ ಮಾಡ ಬೇಕು. ತಂಬಾಕು ಬೆಳೆಯಲ್ಲಿ ತಾಲೂಕಿನ ಕೆಲವೆಡೆ ಕಂಡುಬಂದಿರುವ ಎಲೆ ಸುರುಳಿ ರೋಗ ಕುರಿತು ಸಿಟಿಆರ್‌ಐನ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.
    ಬಿ.ಮಾರಣ್ಣ, ಪ್ರಾದೇಶಿಕ ವ್ಯವಸ್ಥಾಪಕ. ತಂಬಾಕು ಮಂಡಳಿ, ಪಿರಿಯಾಪಟ್ಟಣ

    ತಂಬಾಕಿಗೆ ಸೂಕ್ತ ದರ ದೊರಕದೆ ತಂಬಾಕು ಬೆಳೆಗಾರರು ತಂಬಾಕಿನಿಂದ ವಿಮುಖರಾಗುವಂತಾಗಿದೆ. ಉರುವಲು, ರಸಗೊಬ್ಬರ, ಕೀಟನಾಶಕಗಳು, ಕೂಲಿಯಾಳುಗಳ ವೇತನ ಸೇರಿದಂತೆ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಲೇ ಇದೆ. ಈಗಿರುವ ಸ್ಥಿತಿಯಲ್ಲಿ ಪ್ರತಿ ಕೆಜಿ ತಂಬಾಕಿಗೆ ಸರಾಸರಿ 200 ರೂಪಾಯಿ ದೊರೆತರೆ ಮಾತ್ರ ತಂಬಾಕು ಬೆಳೆಗಾರರಿಗೆ ಉಳಿಗಾಲವಿದೆ. ತಂಬಾಕು ಮಂಡಳಿ ಮತ್ತು ತಂಬಾಕು ಖರೀದಿದಾರರು ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮತ್ತು ಸಂಕಷ್ಟಗಳನ್ನು ಹೋಗಲಾಡಿಸುವ ಕೆಲಸಗಳನ್ನು ಮಾಡುತ್ತಿಲ್ಲ.
    ಶಿವಣ್ಣಶೆಟ್ಟಿ, ತಾಲೂಕು ರೈತ ಸಂಘದ ಅಧ್ಯಕ್ಷರು, ಪಿರಿಯಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts