More

    ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಕುರ್ಚಿಗೆ 36 ಆಕಾಂಕ್ಷಿಗಳು !

    ಮಂಜುನಾಥ ಅಂಗಡಿ ಧಾರವಾಡ
    ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಧಾರವಾಡದ ಕೃಷಿ ವಿವಿ ಕೂಡ ಮುಂಚೂಣಿಯಲ್ಲಿದೆ. ತಿಂಗಳ ಹಿಂದೆ ಕುಲಪತಿ ಹುದ್ದೆ ತೆರವಾಗಿದ್ದು, ಪ್ರಸ್ತುತ ಪ್ರಭಾರ ಕುಲಪತಿ ಆಡಳಿತ ನಿರ್ವಹಿಸುತ್ತಿದ್ದಾರೆ. ಕಾಯಂ ಕುಲಪತಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ರೇಸ್​ನಲ್ಲಿ 36 ಜನ ಪೈಪೋಟಿಗಿಳಿದಿದ್ದಾರೆ.
    ಕುಲಪತಿಯಾಗಿದ್ದ ಡಾ. ಎಂ.ಬಿ. ಚೆಟ್ಟಿ ಅವರು 2022ರ ಜೂ. 30ಕ್ಕೆ ನಿವೃತ್ತಿಯಾಗಿದ್ದಾರೆ. ಸೇವಾ ಹಿರಿತನದ ಆಧಾರದ ಮೇಲೆ ಡಾ. ಆರ್. ಬಸವರಾಜಪ್ಪ ಅವರಿಗೆ ಸರ್ಕಾರ ಹಂಗಾಮಿ ಕುಲಪತಿ ಜವಾಬ್ದಾರಿ ವಹಿಸಿದೆ. ಅವರು 35 ವರ್ಷಗಳಿಂದ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಶಿಕ್ಷಣ ನಿರ್ದೇಶಕರ ಹುದ್ದೆವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದುರ್ಗದ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೂ ಕಾಯಂ ಕುಲಪತಿ ಹುದ್ದೆಯ ರೇಸ್​ನಲ್ಲಿ ಇದ್ದಾರೆ.
    ಸರ್ಕಾರ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಕೃಷಿ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ 3 ದಶಕಗಳಿಗೂ ಹೆಚ್ಚು ವರ್ಷ ಕಾರ್ಯನಿರ್ವಹಿಸಿದ ಶಿಕ್ಷಣ ತಜ್ಞರು ಅರ್ಜಿ ಸಲ್ಲಿಸಿದ್ದಾರೆ. ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮತ್ತು ಆಡಳಿತದ ಅನುಭವ ಹೊಂದಿರುವ 36 ಜನ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
    ಶೋಧನಾ ಸಮಿತಿ ರಚನೆ
    ಕೃಷಿ ವಿವಿಗೆ ಕುಲಪತಿ ಆಯ್ಕೆಯಾಗಿ ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಎಂ.ಎನ್. ಶೀಲವಂತರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಡೈರೆಕ್ಟರ್ ಜನರಲ್, ಯುಜಿಸಿ ಹಾಗೂ ರಾಜ್ಯಪಾಲರಿಂದ ನಾಮನಿರ್ದೇಶಿತ ತಲಾ ಒಬ್ಬರು ಸಮಿತಿಯ ಸದಸ್ಯರಾಗಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಈ ಸಮಿತಿಯು ಪರಿಶೀಲಿಸಿ ರಾಜ್ಯಪಾಲರಿಗೆ ಮೂವರ ಹೆಸರುಗಳನ್ನು ಶಿಫಾರಸು ಮಾಡಲಿದೆ. ರಾಜ್ಯಪಾಲರು ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಲಿದ್ದಾರೆ.
    ಕೃಷಿ ಮೇಳ ಸೆ. 17ರಿಂದ 20
    ಕೋವಿಡ್​ನಿಂದಾಗಿ ಕಳೆದ 2 ವರ್ಷಗಳಿಂದ ಕೃಷಿ ಮೇಳ ಜರುಗಿಲ್ಲ. 3 ದಿನಗಳ ಮೇಳದಲ್ಲಿ ರಾಜ್ಯ- ಅಂತಾರಾಜ್ಯಗಳಿಂದ ಸುಮಾರು 5 ರಿಂದ 8 ಲಕ್ಷ ರೈತರು ಪಾಲ್ಗೊಳ್ಳುವುದು ಧಾರವಾಡ ಕೃಷಿ ಮೇಳದ ಹೆಮ್ಮೆ. ಸದ್ಯ ಕರೊನಾ ಕಾಟ ಕಡಿಮೆಯಾಗಿದ್ದು, ಈ ಬಾರಿ ಕೃಷಿ ಮೇಳ ಆಯೋಜಿಸಲು ವಿಶ್ವವಿದ್ಯಾಲಯ ಸಜ್ಜಾಗಿದೆ. ‘ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಧ್ಯೇಯವಾಕ್ಯದೊಂದಿಗೆ ಸೆ. 17ರಿಂದ 20ರವರೆಗೆ ಕೃಷಿ ಮೇಳ ಆಯೋಜನೆಗೊಳ್ಳಲಿದೆ. ಅಷ್ಟರೊಳಗೆ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿ ನೇಮಕವಾಗಲಿದೆ ಎನ್ನಲಾಗುತ್ತಿದೆ.


    ಕೃಷಿ ವಿವಿಗೆ ಕಾಯಂ ಕುಲಪತಿ ನೇಮಕ ಪ್ರಕ್ರಿಯೆ ನಡೆದಿದೆ. ಈಗಾಗಲೇ ಶೋಧನಾ ಸಮಿತಿ ರಚಿಸಲಾಗಿದೆ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಮೂವರ ಹೆಸರು ರಾಜ್ಯಪಾಲರಿಗೆ ಸಲ್ಲಿಸಬೇಕಿದೆ. ಮುಂದಿನ ತಿಂಗಳು ಜರುಗುವ ಕೃಷಿ ಮೇಳದ ಹೊತ್ತಿಗೆ ಕಾಯಂ ಕುಲಪತಿ ನೇಮಕವಾಗಲಿದ್ದಾರೆ.
    – ಬಿ.ಸಿ. ಪಾಟೀಲ, ಕೃಷಿ ವಿವಿ ಸಹ ಕುಲಾಧಿಪತಿ ಹಾಗೂ ಕೃಷಿ ಸಚಿವ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts