More

    300 ಎಕರೆಗೂ ಹೆಚ್ಚು ನೀರಾವರಿ ಸೌಲಭ್ಯ

    ಶಿರಸಿ: ನೀರಾವರಿಗಾಗಿ ವಿಧಾನಸಭೆ ಕ್ಷೇತ್ರದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ತರಲಾಗಿದೆ. ಈ ಮೂಲಕ ರೈತಪರವಾದ ಹೆಜ್ಜೆ ಇಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ತಾಲೂಕಿನ ಕಲಕರಡಿಯಲ್ಲಿ 4 ಕೋಟಿ ರೂಪಾಯಿ ವೆಚ್ಚದ ಬಾಂದಾರ ಹಾಗೂ ಏತ ನೀರಾವರಿ ಯೋಜನೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ವರದಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಎರಡನೇ ಹಂತದ ಯೋಜನೆಗೆ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಪ್ರಸ್ತುತ ಏತ ನೀರಾವರಿಯಿಂದ ಈ ಭಾಗದ 300ಕ್ಕೂ ಹೆಚ್ಚು ಎಕರೆಗೆ ನೀರಾವರಿ ಸೌಲಭ್ಯ ಆಗಲಿದೆ ಎಂದರು. ಹಲವು ಶಾಸಕರು ಈ ಭಾಗದಲ್ಲಿ ಅಧಿಕಾರ ನಡೆಸಿದರೂ ನನ್ನ ಅವಧಿಯಲ್ಲಿ ಆದ ಕಾಮಗಾರಿಗಳನ್ನು ಯಾಕೆ ಅವರಿಗೆ ಮಾಡಲಾಗಿಲ್ಲ? ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಇರುವವರು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಅಧಿಕಾರಕ್ಕಿಂತ ಮತದಾರರ ಆಶಯ ಈಡೇರಿಸಬೇಕು. ಅದು ನಿಜವಾದ ಜನಪ್ರತಿನಿಧಿಯ ಕರ್ತವ್ಯ ಎಂದರು.

    ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಪರಿಸರ ಕಾರ್ಯಕರ್ತರು ತೊಡಕಾಗಿದ್ದಾರೆ. ಅದೇ ರೀತಿ ಶಿರಸಿ- ಕುಮಟಾ ರಸ್ತೆಗೂ ಪರಿಸರವಾದಿಗಳು ಸಮಸ್ಯೆ ತಂದೊಡ್ಡುತ್ತಿದ್ದಾರೆ. ಅಭಿವೃದ್ಧಿಗೆ ಇವರೇ ತೊಡಕಾಗಿದ್ದಾರೆ. ಹಾಗಾಗಿ ಅಭಿವೃದ್ಧಿಯಲ್ಲಿ ರಾಜಕೀಯ ದೂರ ಇಡಬೇಕು ಎಂದರು.

    ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ಅರೆಮಲೆನಾಡಿನಲ್ಲಿ ಕೆರೆಗಳಿಗೆ ನೀರು ತುಂಬುವ ಯೋಜನೆಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

    ಜಿಪಂ ಸದಸ್ಯರಾದ ಬಸವರಾಜ ದೊಡ್ಮನಿ ಮಾತನಾಡಿ, ರೈತರಿಗೆ ಅನುಕೂಲ ಆಗುವ ಯೋಜನೆಗೆ ಚಾಲನೆ ನೀಡಿದ್ದು ಸಂತಸ ತಂದಿದೆ. ಇದರಿಂದ ಕೃಷಿಕರಿಗೆ ಅತ್ಯಂತ ಪ್ರಯೋಜನವಾಗಲಿದೆ ಎಂದರು.

    ಇದಕ್ಕೂ ಪೂರ್ವದಲ್ಲಿ ಅಂಡಗಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ವಿುಸಿದ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿದರು. ಅಜ್ಜರಣಿ ಸೇತುವೆಗೆ ಶಿಲನ್ಯಾಸ ನೆರವೇರಿಸಿದರು. ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸದಸ್ಯೆ ಪ್ರೇಮಾ ಬೇಡರ, ಜಿಪಂ ಸದಸ್ಯೆ ಉಷಾ ಹೆಗಡೆ, ಪ್ರಶಾಂತ ಗೌಡ, ಸಿದ್ದನಗೌಡ, ಮಲ್ಲಸರ್ಜನ ಗೌಡ, ಮಂಜುನಾಥ ಅಂಡಗಿ, ದ್ಯಾಮಣ್ಣ ದೊಡ್ಮನಿ, ಮಂಗಲಾ ನಾಯ್ಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts