More

    30 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿ ಹೆಸರಿಗೆ ಐದು ಎಕರೆ ಸರ್ಕಾರಿ ಜಮೀನು ಮಂಜೂರು: ಗ್ರಾಮಸ್ಥರಿಂದ ಪ್ರತಿಭಟನೆ

    ಕನಕಪುರ: ತಾಲೂಕಿನ ಬರಡನಹಳ್ಳಿಯ 5 ಎಕರೆ ಸರ್ಕಾರಿ ಜಮೀನನ್ನು 30 ವರ್ಷಗಳ ಹಿಂದೆ ಮೃತಪಟ್ಟ ಬೈರೇಗೌಡ ಎಂಬುವವರ ಹೆಸರಿಗೆ ಮಂಜೂರು ಮಾಡಿರುವ ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಚಾಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಬರಡನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಗ್ರಾಮದ ಸರ್ವೇ ನಂ.40ರಲ್ಲಿ 133 ಎಕರೆ ಸರ್ಕಾರಿ ಜಮೀನು ಇದ್ದು, ಇದು ಗೋಮಾಳಕ್ಕೆ ಮೀಸಲಾಗಿದೆ. ಗೋಮಾಳಕ್ಕೆ ಸ್ವಲ್ಪ ಜಾಗ ನೀಡಿ, ಉಳಿದಿದ್ದನ್ನು ಸಾರ್ವಜನಿಕ ಕೆಲಸಕ್ಕೆ ನೀಡಬೇಕು. ಈ ಬಗ್ಗೆ 50 ವರ್ಷಗಳಿಂದ
    ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇಲ್ಲಿನ 30 ಎಕರೆ ಪ್ರದೇಶವನ್ನು ನವೋದಯ ಶಾಲೆ ನಿರ್ಮಾಣಕ್ಕೆ ಸರ್ಕಾರ ನೀಡಿತ್ತು. 30 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿ ಹೆಸರಲ್ಲಿ ಸರ್ವೇ ನಂ.40ರಲ್ಲಿ ಇದೀಗ 5 ಎಕರೆ ಜಮೀನು ಮಂಜೂರು ಮಾಡಲಾಗಿದೆ.

    ಯಾವುದೇ ರೀತಿಯ ವ್ಯವಸಾಯ ಮಾಡದಿದ್ದರೂ ಮೃತವ್ಯಕ್ತಿ ಹೆಸರಲ್ಲಿ ಜಮೀನು ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಗ್ರಾಮಸ್ಥರ ಹೇಳಿಕೆ ಪಡೆಯದೆ ಮಂಜೂರು ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
    ತಾಪಂ ಸದಸ್ಯ ಜಗದೀಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಚಿರಣಕುಪ್ಪೆ ರವಿ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಕಾನೂನು ಉಲ್ಲಂಸಿಲ್ಲ: ಬರಡನಹಳ್ಳಿ ಗ್ರಾಮದ ಸರ್ವೇ ನಂ.40ರಲ್ಲಿ ಬೈರೇಗೌಡ ಅವರ ಹೆಸರಿಗೆ ಐದು ಎಕರೆ ಜಮೀನು ಖಾತೆ ಮಾಡಿ ಎರಡು ತಿಂಗಳೊಳಗೆ ವರದಿ ನೀಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೈರೇಗೌಡರ ಹೆಸರಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಹಸೀಲ್ದಾರ್ ವರ್ಷಾ ಒಡೆಯರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts