More

    ಅಕ್ರಮ ಮದ್ಯ ಮಾರಾಟ ಮಾಡಿದರೆ 30 ಸಾವಿರ ರೂ. ದಂಡ

    ಕೊಳ್ಳೇಗಾಲ: ಪಟ್ಟಣದ ಭೀಮನಗರ ಬಡಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಕುಲದ ಪದ್ಧತಿಯಂತೆ 30 ಸಾವಿರ ರೂ. ದಂಡ ದಂಡ ವಿಧಿಸಲು ಕಸಬಾ ಮನೆ ಯಜಮಾನರು ತೀರ್ಮಾನಿಸಿದ್ದಾರೆ.

    ಅಕ್ರಮವಾಗಿ ಮದ್ಯ ಮಾರಾಟ ಮಾಡುವವರನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟವರಿಗೆ ಐದು ಸಾವಿರ ರೂ. ಬಹುಮಾನ ನೀಡಲು ನಿಶ್ಚಯಿಸಿದ್ದಾರೆ. ಭೀಮನಗರದಲ್ಲಿ ಕೆಲ ತಿಂಗಳಿಂದ ಯುವ ಪೀಳಿಗೆ ಹೆಚ್ಚಿನ ರೀತಿಯಲ್ಲಿ ಸಾವು ನೋವಿಗೆ ತುತ್ತಾಗುತ್ತಿರುವುದನ್ನು ಮನಗಂಡ ಹಿನ್ನೆಲೆ ಕಸಬಾ ಮನೆ ದೊಡ್ಡ ಯಜಮಾನ ಸಿ.ಬಾಬು, ಯಜಮಾನರಾದ ಡಿ.ನಟರಾಜು, ಎಂ.ಸಿದ್ದಾರ್ಥ, ಕೆ.ಜೆ.ಜವರಪ್ಪ, ಜಗದೀಶ್, ಎಸ್.ಎಲ್.ಲಿಂಗರಾಜು, ಪ್ರಭುಸ್ವಾಮಿ, ಲಿಂಗರಾಜು ಭಾನುವಾರ ಬೆಳಗ್ಗೆ ಭೀಮನಗರದ ಶ್ರೀ ಬಸವನ ದೇವರ ಗುಡಿಯಲ್ಲಿ ಕುಲಸ್ಥರ ಸಭೆ ನಡೆಸಿ ಈ ತೀರ್ಮಾನಕ್ಕೆ ಕೈಗೊಂಡಿದ್ದಾರೆ.

    ತಾಲೂಕಿನ ಕಿರಾಣಿ ಅಂಗಡಿಗಳು ಹಾಗೂ ವಾಸದ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ದಂಧೆ ಇತ್ತೀಚೆಗೆ ಭೀಮನಗರ ಬಡಾವಣೆಯ ಹಲವು ಬೀದಿಗಳನ್ನು ಆವರಿಸಿದ್ದು, ದಿನದ 24 ಗಂಟೆ ಕಾಲ ಅಕ್ರಮ ಮದ್ಯ ಮಾರಾಟ ಪ್ರಕ್ರಿಯೆಗಳು ಕಂಡುಬಂದಿದೆ. ಈ ನಡುವೆ ಕುಡಿತಕ್ಕೆ ದಾಸರಾದವರು, ತಮ್ಮ ಮನೆ ಅಕ್ಕಪಕ್ಕ ಹಾಗೂ ಕಿರಾಣಿ ಅಂಗಡಿಗಳಲ್ಲಿ ದೊರೆಯುವ ಮದ್ಯವನ್ನು ಖರೀದಿಸಿ ಸೇವಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ಈ ಮದ್ಯ ಸೇವಿಸಿ ಪ್ರಾಣಕ್ಕೂ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂಬ ವಿಚಾರಗಳು ಸಭೆಯಲ್ಲಿ ಚರ್ಚೆಗೊಂಡವು.
    ನಿರ್ಧಾಕ್ಷಿಣ್ಯ ಕ್ರಮಕ್ಕೆ ಒತ್ತಾಯ: ಕಾನೂನುಬಾಹಿರವಾಗಿ ಮದ್ಯ ಅಕ್ರಮ ಮಾರಾಟ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮಕ್ಕೆ ಪಟ್ಟಣ ಪೊಲೀಸ್ ಠಾಣೆ ಹಾಗೂ ಅಬಕಾರಿ ಇನ್ಸ್‌ಪೆಕ್ಟರ್ ಕಚೇರಿಗೆ ಲಿಖಿತ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳು ತಮ್ಮದೇ ಆದ ಮಾಹಿತಿ ಆಧರಿಸಿ, ಬಡಾವಣೆಯಲ್ಲಿ ಮದ್ಯ ಮಾರಾಟ ಮಾಡದಂತೆ ಹಾಗೂ ಇಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಪರೋಕ್ಷವಾಗಿ ಮದ್ಯ ಪೂರೈಸುವ ವೈನ್ಸ್ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲು ಸಿದ್ಧತೆ ನಡೆಸಿದ್ದಾರೆ. ಈ ಮಹತ್ತರ ತೀರ್ಮಾನಕ್ಕೆ ತಾಲೂಕಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts