More

    3 ದಿನ ತರಕಾರಿ ಮಾರುಕಟ್ಟೆ ಬಂದ್

    ಹುಬ್ಬಳ್ಳಿ: ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸಾವಿರಾರು ಜನ ಸೇರಬಹುದಾದ ಸಗಟು ತರಕಾರಿ ಹಾಗೂ ಜಾನುವಾರು ಮಾರುಕಟ್ಟೆ ಬಂದ್ ಮಾಡಲು ಹುಬ್ಬಳ್ಳಿ ಎಪಿಎಂಸಿ ಆಡಳಿತ ಮಂಡಳಿ ನಿರ್ಧರಿಸಿದ ಬೆನ್ನಲ್ಲೇ ಬುಧವಾರ ಬಹುತೇಕ ಚಟುವಟಿಕೆ ನಡೆಯಲಿಲ್ಲ.

    ಮಂಗಳವಾರ ಸಭೆ ನಡೆಸಿ ತರಕಾರಿ ಸಗಟು ವಹಿವಾಟು ಸ್ಥಗಿತಗೊಳಿಸಲು ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ ಅವರು ಸೂಚನೆ ನೀಡಿದ್ದರು. ಅಲ್ಲದೇ 10 ದಿನಗಳವರೆಗೆ ಹುಬ್ಬಳ್ಳಿ ಹಾಗೂ ನೂಲ್ವಿ ಜಾನುವಾರು ಸಂತೆಯನ್ನೂ ನಡೆಸದಂತೆ ಸೂಚಿಸಿದ್ದಾರೆ. ಹಾಗಾಗಿ ಗುರುವಾರ ನಡೆಯಲಿದ್ದ ನೂಲ್ವಿ ಜಾನುವಾರು ಸಂತೆ, ಶನಿವಾರದ ಹುಬ್ಬಳ್ಳಿ ಜಾನುವಾರು ಸಂತೆ ನಡೆಯುವುದಿಲ್ಲ.

    ಬುಧವಾರ ಸಗಟು ಮಾರುಕಟ್ಟೆಗೆ ಬಂದ ತರಕಾರಿಯನ್ನು ಮಾತ್ರ ವಿಲೇವಾರಿ ಮಾಡಲು ಹೇಳಲಾಗಿತ್ತು. ನಂತರದ ಮೂರು ದಿನ ಸ್ಥಗಿತ ಇಡಲು ವರ್ತಕರು ಒಪ್ಪಿದ್ದು, ಶನಿವಾರದವರೆಗೆ ತರಕಾರಿ ಸಗಟು ವ್ಯಾಪಾರ ನಡೆಯುವುದಿಲ್ಲ.

    ಬುಧವಾರ ಅಷ್ಟಾಗಿ ತರಕಾರಿ ಬಂದಿರಲಿಲ್ಲ. ಕೊಳ್ಳುವವರೂ ಕಡಿಮೆ ಇದ್ದರು. ಹಾಗಾಗಿ ದರವೂ ಇಳಿಕೆಯಾಗಿತ್ತು. ಹತ್ತು ಕೆಜಿ ಟೊಮೆಟೊ, ಬದನೆಕಾಯಿ, ಸೌತೆಕಾಯಿಗೆ ಬರೀ 100 ರೂ. ನಿಗದಿಯಾಗಿತ್ತು. ಕೋತಂಬ್ರಿ ಕಟ್ಟುಗಳು 10 ರೂ.ಗೆ ಐದು, ಮೆಣಸಿನಕಾಯಿ, ಹಿರೇಕಾಯಿ ಸೇರಿ ಎಲ್ಲ ತರಕಾರಿ ದರ ಕಡಿಮೆಯಾಗಿತ್ತು.

    ಪೊಲೀಸರೊಂದಿಗೆ ವಾಗ್ವಾದ: ಎಪಿಎಂಸಿಯಿಂದ ಸಗಟು ತರಕಾರಿ ಖರೀದಿಸಿದ ವ್ಯಾಪಾರಸ್ಥರು ಅದನ್ನು ತೆಗೆದುಕೊಂಡು ನಗರ ಪ್ರದೇಶದ ಸಂತೆ ಬಯಲುಗಳಿಗೆ ಬಂದಾಗ ಪೊಲೀಸರಿಂದ ತೀವ್ರ ಕಿರಿಕಿರಿ ಅನುಭವಿಸಿದರು. ಸಂತೆಯಲ್ಲಿ ಹಣ್ಣು- ತರಕಾರಿ ಮಾರಾಟಕ್ಕೆ ಇಟ್ಟಿದ್ದ ವ್ಯಾಪಾರಸ್ಥರನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಹೊರ ಹಾಕಿದರು. ಲಿಂಗರಾಜನಗರ, ಅಶೋಕನಗರ ಸಂತೆ ಬಯಲುಗಳಲ್ಲಿ ಪೊಲೀಸರು ಹಾಗೂ ತರಕಾರಿ ವ್ಯಾಪಾರಸ್ಥರ ಮಧ್ಯೆ ವಾಗ್ವಾದ, ಮಾತಿನ ಚಕಮಕಿ ನಡೆದವು.

    ತರಕಾರಿ ಮಾರಾಟ ಮಾಡಲು ತೊಂದರೆ ಇಲ್ಲ. ಅದರೆ, ನೂರಾರು ಜನ ಒಂದೇ ಕಡೆ ಸೇರುವುದನ್ನು ತಪ್ಪಿಸಿ ವ್ಯಾಪಾರ ಮಾಡಬಹುದಾಗಿದೆ. ಈ ತಿಳಿವಳಿಕೆ ನೀಡುವ ಬದಲು ಸಂತೆಯನ್ನೇ ಬಂದ್ ಮಾಡಲು ಹೊರಟ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

    ಮಧ್ಯಾಹ್ನದ ಬಳಿಕ ಸಂತೆ

    ಅಶೋಕ ನಗರ ಸಂತೆ ಪ್ರದೇಶಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳನ್ನು ಚದುರಿಸಿದರು. ಆದರೆ, ಮಧ್ಯಾಹ್ನದ ಬಳಿಕ ಎಂದಿನಂತೆ ಸಂತೆ ನಡೆಯಿತು. ಒಂದೆಡೆ ಜನರಿಗೆ ಅಗತ್ಯ ವಸ್ತುಗಳು ಸಿಗುವಂತಾಗಬೇಕು. ಇನ್ನೊಂದೆಡೆ 100ಕ್ಕಿಂತ ಹೆಚ್ಚು ಜನ ಜಮಾಯಿಸದಂತೆ ನೋಡಿಕೊಳ್ಳಬೇಕಿದೆ. ಈ ಎರಡು ಅಂಶಗಳನ್ನು ಸಮತೋಲನ ಮಾಡಿಕೊಂಡು ಹೋಗಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಬದಲಾದ ಸ್ಥಳದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿದ್ದೇವೆ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಸಂತೆ ನಡೆಯಲು ಅವಕಾಶ ಕೊಟ್ಟಿರಲಿಲ್ಲ. ಜೀಪ್​ನಲ್ಲಿ ಧ್ವನಿವರ್ಧಕದ ಮೂಲಕ ಘೋಷಣೆ ಮಾಡುತ್ತ ಬಲವಂತವಾಗಿ ಮಾರಾಟಗಾರರನ್ನು ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಮಾತಿನ ಚಕಮಕಿಗಳು ನಡೆದಿದ್ದವು.

    ಅಶೋಕ ನಗರ ಸಂತೆಗೆ ಬೆಳಗ್ಗೆ ತರಕಾರಿ ತಂದಿದ್ದ ಅನೇಕ ವ್ಯಾಪಾರಿಗಳು ಸರ್ಕಾರಿ ಅಧಿಕಾರಿಗಳ ಒತ್ತಾಯದಿಂದ ಅಂಗಡಿ ಬಂದ್ ಮಾಡಿದರು. ತರಕಾರಿಯನ್ನು ಗಂಟುಮೂಟೆ ಕಟ್ಟಿಕೊಂಡು ಬಡಾವಣೆಗಳ ಒಳಗೆ ಹೋಗಿ ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಅಂಗಡಿ ಹಾಕಿಕೊಂಡು ಮಾರಾಟ ಮಾಡಿದರು. ಜನರು ಸಹ ಮನೆ ಬಾಗಿಲಿಗೇ ತರಕಾರಿ ಬಂದಿದ್ದರಿಂದ ಉತ್ಸಾಹದಿಂದ ಖರೀದಿಸಿದರು.

    ಹೀಗೆ ಮಾಡಬಹುದು

    ಸಂತೆ ಪ್ರದೇಶದಲ್ಲಿ ಜನದಟ್ಟಣೆ ಆಗುವುದರಿಂದ ನಿಷೇಧಾಜ್ಞೆ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಸಣ್ಣಪುಟ್ಟ ವ್ಯಾಪಾರಿಗಳು ಹೆಚ್ಚು ಮನೆಗಳಿರುವ ಕಾಲನಿಗಳಲ್ಲಿ ಸ್ವಚ್ಛ ಜಾಗ ಇರುವಲ್ಲಿ ಒಂದೆರಡು ಅಂಗಡಿ ಹಾಕಿಕೊಂಡು ವ್ಯಾಪಾರ ನಡೆಸಿದರೆ ನಿಷೇಧಾಜ್ಞೆ ಉಲ್ಲಂಘನೆಯಾಗುವುದಿಲ್ಲ. ಖರೀದಿ ಮಾಡುವವರಿಗೂ ಅನುಕೂಲವಾಗುತ್ತದೆ. ಹೀಗಾಗಿ, ಗ್ರಾಹಕರಿಗೆ ಹತ್ತಿರವಾಗಿ. ಜನಜಂಗುಳಿ ಸೇರದಂತೆ ನೋಡಿಕೊಳ್ಳಿ. ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಅಧಿಕಾರಿಯೊಬ್ಬರು ಸಂತೆಯ ವ್ಯಾಪಾರಿಗಳಿಗೆ ಸಲಹೆ ನೀಡುತ್ತಿದ್ದುದು ಅಶೋಕ ನಗರದಲ್ಲಿ ಕಂಡುಬಂದಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts