More

    3ನೇ ಅಲೆ ಎದುರಿಸಲು ಸಿದ್ಧತೆ

    ಕಾರವಾರ: ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.
    ನಗರದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗುತ್ತಿರುವುದರಿಂದ ಅಂಕೋಲಾ, ಕುಮಟಾ, ಭಟ್ಕಳ, ಶಿರಸಿ, ದಾಂಡೇಲಿ ಹಾಗೂ ಯಲ್ಲಾಪುರದಲ್ಲಿ ತಲಾ 25 ಹಾಸಿಗೆಗಳ ಪ್ರತ್ಯೇಕ ಮಕ್ಕಳ ವಾರ್ಡ್ ಸಿದ್ಧಪಡಿಸಲು ಇಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ 18 ವರ್ಷದೊಳಗಿನ 5.50 ಲಕ್ಷ ಮಕ್ಕಳಿದ್ದಾರೆ. ಆದರೆ, ಅವರ ಚಿಕಿತ್ಸೆಗೆ ಮಕ್ಕಳ ತಜ್ಞ ವೈದ್ಯರ ಕೊರತೆ ಇದೆ. ಕ್ರಿಮ್್ಸ ಆಸ್ಪತ್ರೆಯಲ್ಲಿ 8, ವಿವಿಧ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ 10 ಮಕ್ಕಳ ತಜ್ಞರಿದ್ದಾರೆ. ಇದರಿಂದ ತಾಲೂಕು ಆಸ್ಪತ್ರೆಗಳ ಎಂಬಿಬಿಎಸ್ ವೈದ್ಯರಿಗೆ ಮಕ್ಕಳ ಚಿಕಿತ್ಸೆಯ ಬಗ್ಗೆ 2 ದಿನದ ತರಬೇತಿ ನೀಡಲು ಸೂಚಿಸಲಾಗಿದೆ. ನಿವೃತ್ತ ಮಕ್ಕಳ ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ. ಹುಬ್ಬಳ್ಳಿ ಕಿಮ್ಸ್​ನಲ್ಲಿ 75 ಕ್ಕೂ ಅಧಿಕ ಮಕ್ಕಳ ತಜ್ಞರಿದ್ದು, ಅವರನ್ನು ಜಿಲ್ಲೆಗೆ ನಿಯೋಜಿಸುವ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.
    ಪ್ರತಿ ಗ್ರಾಪಂನಲ್ಲಿ ಐಸೋಲೇಶನ್ ಕೇಂದ್ರ: ಪ್ರತಿ ಗ್ರಾಪಂ ಹಂತದಲ್ಲಿ 1 ಐಸೋಲೇಷನ್ ಕೇಂದ್ರ ತೆರೆಯಲು ಸೂಚಿಸಲಾಗಿದೆ. ಅಲ್ಲಿ ಒಬ್ಬ ಸ್ಟಾಪ್ ನರ್ಸ್, ಗಂಟಲ ದ್ರವ ಸಂಗ್ರಹಿಸಲು ಒಬ್ಬ ಆರೋಗ್ಯ ಸಿಬ್ಬಂದಿ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲು ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಮಳೆಗಾಲ ಆಗಮಿಸುತ್ತಿದ್ದು, ವಿದ್ಯುತ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಲ್ಲ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಜನರೇಟರ್​ಗಳನ್ನು ಸುಸ್ಥಿತಿಯಲ್ಲಿ ಇಡಬೇಕು ಎಂದು ಸೂಚಿಸಲಾಗಿದೆ. ಜಿಲ್ಲೆಯ ವಿವಿಧ ನಗರಗಳ ಆಸ್ಪತ್ರೆಗಳಲ್ಲಿ 104 ವೈದ್ಯ ಹುದ್ದೆ ಇದ್ದು, 56 ಕಾಯಂ ಹಾಗೂ 11 ಗುತ್ತಿಗೆ ವೈದ್ಯರಿದ್ದರು. ಈಗ 38 ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ 82 ಹುದ್ದೆಗಳಿದ್ದು, 23 ಕಾಯಂ ಹಾಗೂ 13 ಗುತ್ತಿಗೆ ವೈದ್ಯರು ಮಾತ್ರ ಇದ್ದರು. 56 ವೈದ್ಯರ ನೇಮಕವಾಗಿದ್ದು, ಜಿಲ್ಲೆಯ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೋಹನರಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಪ್ರಿಯಾಂಗಾ ಎಂ. ಎಡಿಸಿ ಕೃಷ್ಣಮೂರ್ತಿ ಎಚ್.ಕೆ., ಎಸಿ ವಿದ್ಯಾಶ್ರೀ ಚಂದರಗಿ, ಡಿಎಚ್​ಒ ಡಾ.ಶರದ್ ನಾಯಕ ಇದ್ದರು.
    ಐವರಿಗೆ ಬ್ಲ್ಯಾಕ್ ಫಂಗಸ್: ಇದುವರೆಗೆ ಜಿಲ್ಲೆಯ ಐವರಲ್ಲಿ ಬ್ಲ್ಯಾಕ್ ಫಂಗಸ್ ರೊಗ ಪತ್ತೆಯಾಗಿದೆ. ಸದಾಶಿವಗಡದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಬ್ಲ್ಯಾಕ್ ಫಂಗಸ್ ರೋಗ ಗುರುತಿಸಲು ಮೈಕ್ರೋ ಡಿಬ್ರಾಯಿಡರ್ ಯಂತ್ರದ ಅವಶ್ಯಕತೆ ಇದ್ದು, ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಒದಗಿಸಲು ಸಿಎಂ ಅವರಿಗೆ ಮನವಿ ಮಾಡಲಾಗುವುದು ಎಂದರು. ಜಿಲ್ಲೆಗೆ ನ್ಯೂರೋ ಸರ್ಜನ್ ಹಾಗೂ ಎಂಆರ್​ಐ ಸ್ಕ್ಯಾನಿಂಗ್ ಯಂತ್ರವನ್ನು ಒದಗಿಸುವಂತೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ಒದಗಿಸುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದೂರವಾಣಿ ಮೂಲಕ ಭರವಸೆ ನೀಡಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು. ಜಿಲ್ಲೆಯ ಎಲ್ಲ ಶಾಸಕರು ಸಿಎಂ ಬಳಿ ತೆರಳಿ ಇನ್ನೊಮ್ಮೆ ವಿನಂತಿಸುವುದಾಗಿ ಹೆಬ್ಬಾರ ವಿವರಿಸಿದರು.
    ತೌಕ್ತೆಯಿಂದ ಜಿಲ್ಲೆಯಲ್ಲಿ 104 ಕೋಟಿ ರೂಪಾಯಿ ಹಾನಿ: ತೌಕ್ತೆ ಚಂಡ ಮಾರುತದಿಂದ ಜಿಲ್ಲೆಗೆ 104 ಕೋಟಿ ರೂಪಾಯಿ ಹಾನಿ ಸಂಭವಿಸಿದ್ದು, ಕೇಂದ್ರ ಸರ್ಕಾರದ ವಿಶೇಷ ಅನುದಾನ ನೀಡುವಂತೆ ಒತ್ತಾಯಿಸುವುದಾಗಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ. 22 ಗ್ರಾಮಗಳಿಗೆ ಹಾನಿಯಾಗಿದ್ದು, 2 ಸಾವು ಸಂಭವಿಸಿದೆ. 8 ಪರಿಹಾರ ಕೇಂದ್ರ ತೆರೆದು 107 ಜನರನ್ನು ರಕ್ಷಿಸಲಾಗಿದೆ. 6 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 36 ಮನೆಗಳಿಗೆ ಭಾರಿ ಹಾನಿ ಸಂಭವಿಸಿದೆ. 122 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 164.8 ಹೆಕ್ಟೇರ್​ನಷ್ಟು ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. 230 ಬೋಟ್​ಗಳು, 310 ಬಲೆಗಳಿಗೆ ಸೇರಿ ಸುಮಾರು 78 ಲಕ್ಷ ರೂಪಾಯಿ ನಷ್ಟವಾಗಿದೆ. 54 ಮನೆಗಳಿಗೆ ನೀರು ತುಂಬಿದ್ದು, ಅವುಗಳ ಮಾಲೀಕರಿಗೆ ತಲಾ 10 ಸಾವಿರ ರೂಪಾಯಿ ತರ್ತ ಪರಿಹಾರ ನೀಡಲಾಗಿದೆ. ಮನೆ ಹಾನಿಯಾದವರಿಗೆ ಹಂತ, ಹಂತವಾಗಿ ಪರಿಹಾರ ನೀಡಲಾಗುವುದು. 2.94 ಕಿಮೀ ರಾಜ್ಯ ಹೆದ್ದಾರಿ, 272 ಕಿಮೀ ಜಿಲ್ಲಾ ರಸ್ತೆಗಳು, 15 ಕಿಮೀ ನಗರ ರಸ್ತೆ, 33 ಸೇತುವೆ, 22 ಶಾಲೆ, ಎರಡು ಪಿಎಚ್​ಸಿ, 1 ಕುಡಿಯುವ ನೀರಿನ ಯೋಜನೆ, 19 ಸರ್ಕಾರಿ ಕಟ್ಟಡಗಳು, 1287 ವಿದ್ಯುತ್ ಕಂಬಗಳು, 47.5 ಕಿಮೀ ವಿದ್ಯುತ್ ಲೈನ್ 57 ವಿದ್ಯುತ್ ಪರಿವರ್ತಕಗಳು, 29 ಸಣ್ಣ ನೀರಾವರಿ ಯೋಜನೆಗಳು, 24 ಸಮುದ್ರ ಕೊರೆತ ಸಂರಕ್ಷಣೆ ಕಾಮಗಾರಿಗೆ ತೊಂದರೆಯಾಗಿದೆ. ಹೆಸ್ಕಾಂಗೆ 3 ಕೋಟಿ ನಷ್ಟವಾಗಿದೆ. ಕಳೆದ ವರ್ಷದ ನೆರೆ ಪರಿಹಾರ ನಿಧಿಯ 4.2 ಕೋಟಿ ರೂಪಾಯಿಗಳನ್ನು ಹೆಸ್ಕಾಂಗೆ ಶೀಘ್ರ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.


    ಜಿಲ್ಲೆಯ ಏಳಿಗೆಯ ವಿಷಯದಲ್ಲಿ ನನಗೆ ಯಾವುದೇ ಬಿಗುಮಾನ ಇಲ್ಲ, ಯಾರ ಜತೆ ಬೇಕಾದರೂ ಮಾತನಾಡುತ್ತೇನೆ. ಹಿರಿಯರಾದ ಆರ್.ವಿ.ದೇಶಪಾಂಡೆ ಅವರ ಜತೆಗೂ ಮಾತನಾಡಿದ್ದೇನೆ. ದೇಶಪಾಂಡೆ ಅವರ ಕಾಲದಲ್ಲಿಯೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಅವರು ಆಸ್ಪತ್ರೆಯ ಕಟ್ಟಡ ಕಟ್ಟಿದ್ದರು. ನಾವು ಹಾಸಿಗೆ ಒದಗಿಸಿದ್ದೇವೆ. ಕಾರವಾರದಲ್ಲಿ ಆಕ್ಸಿಜನ್ ಸಂಗ್ರಹಾಗಾರ ಮಾಡಿದ್ದೇವೆ. ಕಾರವಾರ, ಶಿರಸಿ, ಭಟ್ಕಳ, ದಾಂಡೇಲಿಯಲ್ಲಿ ಆಕ್ಸಿಜನ್ ತಯಾರಿಕಾ ಘಟಕ ಶೀಘ್ರದಲ್ಲಿ ಸಿದ್ಧವಾಗುತ್ತಿದೆ. ಕುಮಟಾ, ಹಳಿಯಾಳ, ಮುಂಡಗೋಡಿನಲ್ಲೂ ಮಾಡಲು ಪ್ರಸ್ತಾವನೆ ಕಳಿಸಿದ್ದೇವೆ.
    ಶಿವರಾಮ ಹೆಬ್ಬಾರ
    ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts