More

    3ನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಬದ್ಧತೆ ಇರಲಿ

    ಕೋಲಾರ: ಕರೊನಾ 3ನೇ ಅಲೆ ಮಕ್ಕಳನ್ನು ಬಾಧಿಸುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಆರ್.ಜಿ.ಆನಂದ್ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಭವನದಲ್ಲಿನ ಡಿಸಿ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, 3ನೇ ಅಲೆಯಲ್ಲಿ ಮಕ್ಕಳು ಬೇಗ ಸೋಂಕಿಗೆ ತುತ್ತಾಗುವ ಬಗ್ಗೆ ತಜ್ಞರು ಎಚ್ಚರಿಸಿರುವುದರಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ತಡೆ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವ ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕು. ಹೋಟೆಲ್, ಕಾರ್ಖಾನೆ, ಕಟ್ಟಡ ಕೆಲಸ ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರನ್ನು ಗುರುತಿಸಿ ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಳಿಸಬೇಕು ಎಂದು ಸೂಚಿಸಿದರು.

    ಕರೊನಾ ಸೋಂಕಿತ ಹಾಗೂ ಬಾಧಿತ ಮಕ್ಕಳ ನೆರವಿಗೆ ರಾಜ್ಯಾದ್ಯಂತ ಪ್ರಾದೇಶಿಕ ಭಾಷೆಗಳಲ್ಲಿ ಸಂವೇದನಾ ಸಹಾಯವಾಣಿ ತೆರೆಯಲಾಗಿದ್ದು, 18001212830 ನಂಬರ್‌ಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕರೆ ಮಾಡಬಹುದು ಎಂದರು.

    ಡಿಸಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಸಂಪೂರ್ಣ ತಡೆಗೆ ಮತ್ತು ಮಕ್ಕಳ ಸ್ನೇಹಿ ಜಿಲ್ಲೆಯಾಗಿಸಲು ಮಕ್ಕಳ ರಕ್ಷಣೆಗೆ ಇರುವ ಕಾನೂನು ಅನುಷ್ಠಾನಕ್ಕೆ, ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ 34 ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಕಲ್ಯಾಣ ಕಾರ್ಯಪಡೆ ರಚನೆ ಹಾಗೂ ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ ಒಟ್ಟು 6 ಲಕ್ಷ ಮಕ್ಕಳಿದ್ದು, ಕರೊನಾ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡದಂತೆ ಜಿಲ್ಲಾಡಳಿತ ಕ್ರಮ ವಹಿಸಿ ಅಧಿಕಾರಿಗಳ ತಂಡ ರಚಿಸಲಾಗಿದೆ, ಚಿಕಿತ್ಸೆಗೆ ಅಗತ್ಯ ಹಾಸಿಗೆ ವ್ಯವಸ್ಥೆಯಾಗಿದೆ. ಮಕ್ಕಳ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಂ.ಜಿ.ಪಾಲಿ ಮಾತನಾಡಿ, ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 94 ಬಾಲ್ಯ ವಿವಾಹ ಪ್ರಕರಣ ಕಂಡುಬಂದಿದ್ದು, 91 ಪ್ರಕರಣ ತಡೆಯಲಾಗಿದೆ. 3 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ವರ್ಷ 12 ದೂರು ವ್ಯಕ್ತವಾಗಿ 10 ವಿವಾಹ ತಡೆದು ಪಾಲಕರಿಗೆ ತಿಳಿ ಹೇಳಲಾಗಿದೆ. ಅಧಿಕಾರಿಗಳ ಮನವರಿಕೆಗೆ ಮಣಿಯದವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು. ಎಸ್ಪಿ ಡೆಕ್ಕಾ ಕಿಶೋರ್ ಬಾಬು, ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್, ತಹಸೀಲ್ದಾರ್ ಶೋಭಿತಾ, ಬಿಸಿಎಂ ಅಧಿಕಾರಿ ರಾಜಣ್ಣ, ಡಿಡಿಪಿಐ ಕೃಷ್ಣಮೂರ್ತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts