More

    ಜೋಡಿ ದುರಂತ ಕೇರಳಕ್ಕೆ ಆಘಾತ: 2 ಹೋಳಾದ ವಿಮಾನ, ಭೂಕುಸಿತಕ್ಕೆ 13 ಮಂದಿ ಜೀವಂತ ಸಮಾಧಿ

    ‘ದೇವರ ಸ್ವಂತನಾಡು’ ಕೇರಳ ಎರಡು ದುರಂತಕ್ಕೆ ಬೆಚ್ಚಿದೆ. ಇಡುಕ್ಕಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಜನ ಬಲಿಯಾಗಿ 80 ಜನ ನಾಪತ್ತೆಯಾದ ದುರ್ಘಟನೆ ಬೆನ್ನಲ್ಲೇ ಶುಕ್ರವಾರ ರಾತ್ರಿ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣದ ರನ್​ವೇಯಲ್ಲಿ ಜಾರಿ ಕಮರಿಗೆ ಬಿದ್ದು ಎರಡು ಹೋಳಾಗಿದೆ. ಈ ದುರಂತದಲ್ಲಿ ಪೈಲಟ್ ಸೇರಿ 17 ಜನ ಮೃತಪಟ್ಟಿದ್ದು, 123ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

    ತಿರುವನಂತಪುರ: ದುಬೈನಿಂದ ಆಗಮಿಸಿದ ಏರ್ ಇಂಡಿಯಾದ ವಂದೇ ಮಾತರಂ ವಿಶೇಷ ವಿಮಾನ ಭಾರಿ ಮಳೆಯಿಂದಾಗಿ ಶುಕ್ರವಾರ ರಾತ್ರಿ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ರನ್​ವೇಯಲ್ಲಿ ಜಾರಿ ಕಮರಿಯಲ್ಲಿ ಬಿದ್ದ ಪರಿಣಾಮ ಪೈಲಟ್ ಸೇರಿ 17 ಮಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. 123ಕ್ಕೂ ಹೆಚ್ಚು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಪೈಕಿ 15 ಜನರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.

    ಪೈಲಟ್​ಗಳು, ಸಿಬ್ಬಂದಿ ಹಾಗೂ 10 ಶಿಶುಗಳು ಸಹಿತ 191 ಜನರಿದ್ದ ಏರ್​ಇಂಡಿಯಾದ ಐಎಕ್ಸ್ 1344 ಸಂಖ್ಯೆಯ 737 ಬೋಯಿಂಗ್ ವಿಮಾನ ರಾತ್ರಿ 7.40ಕ್ಕೆ ಏರ್​ಪೋರ್ಟ್ ಪ್ರವೇಶಿಸಿದೆ. ಭಾರಿ ಮಳೆಯಾಗುತ್ತಿದ್ದ ಸಂದರ್ಭದಲ್ಲೇ ಪೈಲಟ್ ವಿಮಾನ ಇಳಿಸಲು ಮುಂದಾದಾಗ ಜಾರಿ ರನ್​ವೇ ಕೊನೆಯವರೆಗೆ ಹೋದ ವಿಮಾನ ಕಮರಿಗೆ ಬಿದ್ದು 2 ಹೋಳಾಗಿದೆ. 24 ಆಂಬುಲೆನ್ಸ್​ಗಳು ಘಟನಾ ಸ್ಥಳಕ್ಕೆ ತೆರಳಿ 123ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದವು. ಜಖಂಗೊಂಡಿದ್ದ ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿತ್ತು. ಗಾಯಾಳುಗಳನ್ನು ಸಮೀಪದ ಏಳು ಆಸ್ಪತ್ರೆಗಳಿಗೆ ರವಾನಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

    ಇದನ್ನೂ ಓದಿ: ಕೋಳಿಕ್ಕೋಡ್​ ವಿಮಾನ ದುರಂತ; ಲ್ಯಾಂಡಿಂಗ್​ಗೆ ಎರಡು ಬಾರಿ ಯತ್ನಿಸಿದ್ದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಪೈಲಟ್​…!

    ಪ್ರಧಾನಿ ಕಳವಳ: ಏರ್ ಇಂಡಿಯಾ ವಿಮಾನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ದುರಂತ ದಲ್ಲಿ ಮಡಿದವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಜತೆ ಮಾತನಾಡಿದ್ದಾರೆ.

    ಅಗತ್ಯ ಸೇವೆ ಒದಗಿಸಲು ಕೇರಳ ಸಿಎಂ ಸೂಚನೆ

    ಘಟನೆ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯ್​ ವಿಜಯನ್​ ಟ್ವೀಟ್​ ಮಾಡಿದ್ದು, ಕರೀಪುರದಲ್ಲಿ ಕೋಳಿಕ್ಕೋಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿರುವ ವಿಮಾನ ಪತನ ಬಗ್ಗೆ ಅಗ್ನಿಶಾಮಕದಳ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ. ರಕ್ಷಣೆಗೆ ಹಾಗೂ ವೈದ್ಯಕೀಯ ನೆರವಿಗೆ ಬೇಕಾದ ಅಗತ್ಯ ಸೇವೆಗಳನ್ನು ಹೊಂದಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪಾಕ್​ ವಿಮಾನದ ಕಥೆಯೂ ಇದೇ ಆಗಿತ್ತು; ಇಳಿಯುವ ಕೆಲ ಕ್ಷಣಗಳ ಮುನ್ನ ಸಂಭವಿಸಿದ್ದ ದುರಂತ; 98 ಮಂದಿ ಬಲಿ

    ರಾಜ್ಯದ ವಿದ್ಯಾರ್ಥಿಯಿದ್ದ

    ಮಂಗಳೂರು: ಕೋಯಿಕ್ಕೋಡಿನ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್​ವೇಯಿಂದ ಜಾರಿ ನೂರು ಮೀ ದೂರಕ್ಕೆ ಅಪ್ಪಳಿಸಿದ ವಿಮಾನದಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಮತ್ತು ಕಾಸರಗೋಡು ಜಿಲ್ಲೆಯ ಐವರು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಇವರ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

    ಎಲ್ಲಿ ದುರಂತ

    # ಕೊಯಿಕ್ಕೋಡಿನ ಕರಿಪ್ಪೂರ್ ಏರ್​ಪೋರ್ಟ್

    ಎಷ್ಟೊತ್ತಿಗೆ

    # ರಾತ್ರಿ 7.40

    ಇದನ್ನೂ ಓದಿ: ತಾಯ್ನೆಲ ಸ್ಪರ್ಶಿಸಲು ಹಾತೊರೆದವರಿಗೆ ಕಾಡಿತ್ತು ದುಃಸ್ವಪ್ನ; ‘ವಂದೇ ಭಾರತ’ ವಿಮಾನವದು; ಟೇಬಲ್​ ಟಾಪ್​ ನಿಲ್ದಾಣದಲ್ಲಿ ಮತ್ತೊಂದು ದುರಂತ

    ಹೇಗಾಯ್ತು?

    ಭಾರಿ ಮಳೆ ನಡುವೆಯೂ ರನ್​ವೇ-10ಕ್ಕೆ ಇಳಿದ ವಿಮಾನ ರನ್​ವೇ ಅಂತ್ಯ ದವರೆಗೂ ಚಲಿಸಿ ಬಳಿಕ 30 ಅಡಿಯ ಕಮರಿಗೆ ಉರುಳಿ 2 ಹೋಳಾಯಿತೆಂದು ಡಿಜಿಸಿಎ ಮೂಲಗಳು ತಿಳಿಸಿವೆ.

    ಯಾವ ವಿಮಾನ

    # ಏರ್ ಇಂಡಿಯಾ ಎಕ್ಸ್ 1344 ಬೋಯಿಂಗ್ 737

    ಟೇಬಲ್ ಟಾಪ್ ರನ್​ವೇ

    ಕಾರಿಪುರ್ ಏರ್​ಪೋರ್ಟ್ ಟೇಬಲ್ ಟಾಪ್ ರನ್​ವೇ ಹೊಂದಿದೆ. ಅಂದರೆ, ರನ್ ವೇ ಒಂದು ಅಥವಾ ಎರಡೂ ಬದಿ ಮುಕ್ತಾಯ ವಾಗಿರುವುದಿಲ್ಲ. ರನ್ ವೇ ಕೊನೆಯಲ್ಲಿ ಕಮರಿ ಇರುತ್ತದೆ.

    ತನಿಖೆಗೆ ಆದೇಶ

    ವಿಮಾನ ದುರಂತ ಸಂಬಂಧ ಡಿಜಿಸಿಎ ಸಮಗ್ರ ತನಿಖೆಗೆ ಆದೇಶಿಸಿದೆ.

    ***************************************************************

    ಟೀ ಎಸ್ಟೇಟ್​ನಲ್ಲಿ ಗುಡ್ಡಕುಸಿತ, 80 ಜನ ನಾಪತ್ತೆ

    ತಿರುವನಂತಪುರಂ: ಎರಡು ವರ್ಷದ ಹಿಂದೆ 800ಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡು ಅರ್ಧ ಕೇರಳವನ್ನು ಮುಳುಗಿಸಿ ಜನರ ಬದುಕನ್ನು ಬೀದಿಗೆ ತಂದಿದ್ದ ಮಹಾ ಪ್ರವಾಹದ ದುರಂತ ಮರುಕಳಿಸಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಭಾರಿ ಮಳೆ, ನೆರೆ ತೀವ್ರಗೊಂಡಿರುವಂತೆಯೇ ಶುಕ್ರವಾರ ಕೇರಳ ಇಡುಕ್ಕಿ ಜಿಲ್ಲೆಯಲ್ಲಿ ಬೆಟ್ಟವೊಂದು ಕುಸಿದು ಕನಿಷ್ಠ 13 ಮಂದಿ ಸಜೀವ ಸಮಾಧಿಯಾಗಿದ್ದಾರೆ. ಮಣ್ಣಿನಡಿ ಸಿಲುಕಿದ್ದ 12 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು 80ಕ್ಕೂ ಹೆಚ್ಚು ಚಹಾತೋಟದ ಕಾರ್ವಿುಕರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಭಾರಿ ಮಳೆ ಗಾಳಿಯ ನಡುವೆಯೂ ರಕ್ಷಣಾ ಕಾರ್ಯ ಬಿರುಸಿನಿಂದ ಸಾಗಿದ್ದು, ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ದೇವಿಕುಳಂ ತಾಲೂಕಿನ ರಾಜಾಮಲೈ ಸಮೀಪವಿರುವ ಕಣ್ಣನ್ ದೇವನ್ ಹಿಲ್ಸ್ ಪ್ಲಾಂಟೇಷನ್ ಕಂಪನಿಯ ನ್ಯಾಮಕಡ್ ಎಸ್ಟೇಟ್​ನಲ್ಲಿ ಈ ದುರಂತ ಸಂಭವಿಸಿದೆ. ಇದು ಪ್ರಖ್ಯಾತ ಪ್ರವಾಸಿ ತಾಣ ಮನ್ನಾರ್​ನಿಂದ 25 ಕಿಲೋಮೀಟರ್ ದೂರದಲ್ಲಿದೆ.

    ಇಲ್ಲಿ ವಾಸವಿದ್ದ ನೂರಾರು ಕಾರ್ವಿುಕರು ಚಹಾ ತೋಟದಲ್ಲಿ ದುಡಿಯುತ್ತಿದ್ದರು. ಆದರೆ ಮಣ್ಣು ಜರಿದು ಅನಾಹುತವಾದಾಗ ಸ್ಥಳದಲ್ಲಿ ಎಷ್ಟು ಜನರಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ ದುರಂತದ ವೇಳೆ 100ಕ್ಕೂ ಹೆಚ್ಚು ಕಾರ್ವಿುಕರು ಸ್ಥಳದಲ್ಲಿದ್ದರೆನ್ನಲಾಗಿದೆ.

    ಕೇಂದ್ರದ ಭರವಸೆ: ಮಣ್ಣಿನಡಿ ಸಿಲುಕಿರುವವವರ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಿಗೆ ನೆರವಾಗಲು ಹೆಲಿಕಾಪ್ಟರ್​ಗಳನ್ನು ಒದಗಿಸುವಂತೆ ಕೇರಳ ಸರ್ಕಾರ ಭಾರತೀಯ ವಾಯುಪಡೆಯನ್ನು (ಐಎಎಫ್) ಕೋರಿದೆ. ಮತ್ತೊಂದೆಡೆ, ಪರಿಸ್ಥಿತಿ ನಿರ್ವಹಿಸಲು ಅಗತ್ಯವಾದ ಎಲ್ಲ ನೆರವನ್ನು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿರುವುದಾಗಿ ಕೇಂದ್ರ ಸಚಿವ ವಿ.ಮುರಳೀಧರನ್ ಭರವಸೆ ನೀಡಿದ್ದಾರೆ.

    ಸಂಚಾರಿ ವೈದ್ಯ ತಂಡ

    ದುರಂತದಲ್ಲಿ ಬದುಕುಳಿದವರ ಚಿಕಿತ್ಸೆಗಾಗಿ ಒಂದು ಸಂಚಾರಿ ವೈದ್ಯಕೀಯ ತಂಡ ಮತ್ತು 15 ಆಂಬುಲೆನ್ಸ್​ಗಳನ್ನು ಇಡುಕ್ಕಿಗೆ ಕಳಿಸಲಾಗಿದೆ. ಸಂತ್ರಸ್ತರಿಗೆ ಚಿಕಿತ್ಸೆ ನೀಡುವಂತೆ ಎಲ್ಲ ಸ್ಥಳೀಯ ಆಸ್ಪತ್ರೆಗಳಿಗೆ ನಿರ್ದೇಶಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

    ಮಲಪು್ಪರಂ ರೆಡ್ ಅಲರ್ಟ್

    ಸತತ ಮಳೆಯಿಂದಾಗಿ ಮಲಪು್ಪರಂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಾಗೂ ಎಂಟು ಜಿಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಭಾರಿ ಗಾಳಿಯೊಂದಿಗೆ ಹಠಾತ್ತನೆ ಸುರಿದ ಧಾರಾಕಾರ ಮಳೆ ಜನರಲ್ಲಿ 2018 ಮತ್ತು 2019ರ ಆವಾಂತರದ ನೆನಪು ಮರುಕಳಿಸುವಂತೆ ಮಾಡಿತು. ಇಡುಕ್ಕಿ, ವಯನಾಡು ಮತ್ತು ಮಲಪು್ಪರಂ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವೆಡೆ ರಸ್ತೆಗಳು ಕುಸಿದಿದ್ದು, ಭೂ ಕುಸಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

    ಮಣ್ಣಿನಡಿ ಸಿಲುಕಿದ್ದ 12 ಜನರನ್ನು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
    ಎಚ್. ದಿನೇಶನ್, ಇಡುಕ್ಕಿ ಜಿಲ್ಲಾಧಿಕಾರಿ

    ಪ್ರಧಾನಿ ಪರಿಹಾರ ಘೋಷಣೆ

    ಇಡುಕ್ಕಿಯಲ್ಲಿ ಮಳೆಯ ಅಬ್ಬರಕ್ಕೆ ಅನೇಕ ಪ್ರಾಣಹಾನಿ ಆಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಅವರು ಘೋಷಿಸಿದ್ದಾರೆ. ಕೇರಳ ಸರ್ಕಾರ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

    ವಿಶೇಷ ಕಾರ್ಯ ಪಡೆ

    ಮೃತದೇಹಗಳನ್ನು ಹೊರತೆಗೆಯಲು ಹಾಗೂ ಮಣ್ಣಿನಡಿ ಸಿಲುಕಿರುವವರನ್ನು ಪಾರು ಮಾಡಲು ರಾಜ್ಯ ಅಗ್ನಿಶಾಮಕ ಪಡೆಯ 50 ಸದಸ್ಯರನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ರಾತ್ರಿಯಲ್ಲೂ ಕಾರ್ಯಾಚರಣೆ ನಡೆಸಲು ಸಾಧ್ಯವಾಗುವ ಸಾಧನ, ಸಲಕರಣೆ ಗಳನ್ನು ತಂಡಕ್ಕೆ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್​ಡಿಆರ್​ಎಫ್) ಒಂದು ತಂಡವೂ ದುರಂತ ಸ್ಥಳಕ್ಕೆ ಧಾವಿಸಿದೆ.

    ಕೊಚ್ಚಿ ಹೋದ ಸೇತುವೆ

    ಗುಡ್ಡಗಾಡು ಹೆಚ್ಚಿರುವ ಈ ಪ್ರದೇಶವನ್ನು ಸಂರ್ಪಸುವ ಸೇತುವೆ ಗುರುವಾರ ಪ್ರವಾಹದ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿತ್ತು. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಲು ಹರಸಾಹಸ ಪಡುತ್ತಿದ್ದಾರೆ.

    ಎಲ್ಲಿ ಘಟನೆ?

    # ಇಡುಕ್ಕಿ ಜಿಲ್ಲೆಯ ರಾಜಮಾಲಾದ ಪೆಟ್ಟಮುಡಿ

    ಕೇರಳ ವಿಮಾನ ದುರಂತ: 17ಕ್ಕೇರಿದ ಸಾವಿನ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts