More

    ಎರಡನೇ ಏಕದಿನ ಪಂದ್ಯದಲ್ಲಿ ಟೇಲರ್​ ಅರ್ಧ ಶತಕ; ಟೀಮ್ ಇಂಡಿಯಾಕ್ಕೆ 274 ರನ್ ಗೆಲುವಿನ ಗುರಿ ನೀಡಿದ ಕಿವೀಸ್ ಪಡೆ

    ಆಕ್ಲೆಂಡ್: ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ತಂಡದ ವಿರುದ್ಧ ವಿರಳ ರಕ್ಷಣಾತ್ಮಕ ಆಟ ತೋರಿದ ರೋಸ್ ಟೇಲರ್​ ಅವರ ಅರ್ಧ ಶತಕದ ನೆರವಿನೊಂದಿಗೆ ಕಿವೀಸ್ ಪಡೆ 8 ವಿಕೆಟ್ ನಷ್ಟಕ್ಕೆ 273 ರನ್ ಕಲೆ ಹಾಕಿದೆ.

    ಈ ಸರಣಿಯಲ್ಲಿ ಟೀಂ ಇಂಡಿಯಾ ಜತೆಗಿನ ಎರಡನೇ ಏಕದಿನ ಪಂದ್ಯ ಇದಾಗಿದ್ದು, ಟೇಲರ್​ 74 ಬಾಲ್​ಗಳನ್ನು ಎದುರಿಸಿ ಆರು ಫೋರ್​, 2 ಸಿಕ್ಸ್​ ಸೇರಿ 73 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಇದು ಅವರ 51ನೇ ಅರ್ಧಶತಕ.ಆತಿಥೇಯ ತಂಡ ಎಂಟು ವಿಕೆಟ್ ಕಳೆದುಕೊಂಡು 197ರನ್​ ಗಳಿಸಿ ಸಂಕಷ್ಟದಲ್ಲಿದ್ದಾಗ ಇದೇ ಮೊದಲ ಬಾರಿ ಕಣಕ್ಕೆ ಇಳಿದ ಕೈಲ್ ಜಮೀಸನ್​ ಜತೆಗೂಡಿ ಒಂಭತ್ತನೇ ವಿಕೆಟ್​ನಲ್ಲಿ 51 ಬಾಲ್​ಗೆ 76 ರನ್​ಗಳ ಜತೆಯಾಟ ಪ್ರದರ್ಶಿಸಿದರು.

    ಓಪನರ್​ ಮಾರ್ಟಿನ್ ಗುಪ್ಟಿಲ್ ಅವರು ಬಾಲಿಗೊಂದು ರನ್​ನಂತೆ 79 ರನ್​ ಗಳಿಸಿ ಉತ್ತಮ ಆರಂಭ ನೀಡಿದ್ದು, ಹೆನ್ರಿ ನಿಕೋಲ್ಸ್​ 41 ರನ್​ ಗಳಿಸಿ ಮೊದಲ ವಿಕೆಟ್​ಗೆ 93 ರನ್​ಗಳ ಜೊತೆಯಾಟ ಪ್ರದರ್ಶಿಸಿದ್ದರು.ಹದಿನೇಳನೇ ಓವರ್ ತನಕ ಉತ್ತಮ ಪ್ರದರ್ಶನ ನೀಡಿದ್ದ ಈ ಜೋಡಿಯನ್ನು ಬೇರ್ಪಡಿಸಿದ್ದು ಯಜುವೇಂದ್ರ ಚಾಹಲ್​. ನಿಕೋಲ್ಸ್ ಅವರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡಹುವ ಮೂಲಕ ಪೆವಿಲಿಯನ್​ಗೆ ಅಟ್ಟಿದ ಯಜುವೇಂದ್ರ ಆತಿಥೇಯರಿಗೆ ಮೊದಲ ಆಘಾತ ನೀಡಿದರು.ಈ ವಿಕೆಟ್ ಪತನದ ಬಳಿಕ ಮತ್ತೆ 100 ರನ್​​ ಗಳಿಸುಷ್ಟರಲ್ಲಿ 8 ವಿಕೆಟ್​ಗಳನ್ನು ಕಳೆದುಕೊಂಡಿತ್ತು.

    ಲೆಗ್​ ಸ್ಪಿನ್ನರ್​ ಚಾಹಲ್ 58 ರನ್​ ನೀಡಿ ಮೂರು ವಿಕೆಟ್ ಗಳಿಸಿ ಗಮನಸೆಳೆದರು. ಟಿಮ್ ಸೌತಿ ಮೂರು ರನ್​ಗೆ ಔಟ್ ಆದಾಗ ಕಿವೀಸ್ ಪಡೆ 200 ರನ್ ಗಡಿ ದಾಟುವುದು ಕಷ್ಟ ಎಂಬ ವಾತಾವರಣವಿತ್ತು.ಆದರೆ,ರೋಸ್​ ಟೇಲರ್ ಆಸರೆಯಾದ ಕಾರಣ ಟೀಂ ಇಂಡಿಯಾಕ್ಕೆ 274 ರನ್​ಗಳ ಗೆಲುವಿನ ಗುರಿ ನೀಡುವಲ್ಲಿ ಕಿವೀಸ್ ಪಡೆ ಯಶಸ್ವಿಯಾಯಿತು.

    ಇದಕ್ಕೂ ಮುನ್ನ, ಈ ಸರಣಿಯಲ್ಲಿ ಇದೇ ಮೊದಲ ಸಲ ಟಾಸ್ ಗೆದ್ದ ಟೀಂ ಇಂಡಿಯಾ, ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು. ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾ ಎರಡು ಬದಲಾವಣೆ ಮಾಡಿದ್ದು, ಯಜುವೇಂದ್ರ ಚಾಹಲ್ ಅವರು ಕುಲದೀಪ್​ ಯಾದವ್ ಸ್ಥಾನಕ್ಕೂ, ಮೊಹಮ್ಮದ್ ಶಮಿ ಸ್ಥಾನಕ್ಕೆ ನವದೀಪ್ ಸೈನಿ ಅವರನ್ನೂ ಸೇರಿಸಿಕೊಂಡಿದೆ. ಮುಂದಿನ ಟೆಸ್ಟ್ ಸರಣಿಗಾಗಿ ಯಾದವ್ ಮತ್ತು ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಕಿವೀಸ್ ಪಡೆ ಈಗಾಗಲೇ ಒಂದು ಪಂದ್ಯ ಗೆದ್ದುಕೊಂಡಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts