More

    ಒಮಿಕ್ರಾನ್ ಭೀತಿ ನಡುವೆ ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಎ ತಂಡಗಳ 2ನೇ ಟೆಸ್ಟ್

    ಬ್ಲೋಮ್‌ಫೌಂಟೇನ್: ಕರೊನಾ ವೈರಸ್ ಹೊಸ ತಳಿ ‘ಒಮಿಕ್ರಾನ್’ ಆತಂಕದ ನಡುವೆ ಪ್ರವಾಸಿ ಭಾರತ ಎ ತಂಡ ದಕ್ಷಿಣ ಆಫ್ರಿಕಾ ಎ ವಿರುದ್ಧ ಮಂಗಳವಾರದಿಂದ 2ನೇ ಚತುರ್ದಿನ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಹರಿಣಗಳ ನಾಡಲ್ಲಿ ವೈರಸ್ ಹಾವಳಿ ಹೆಚ್ಚಿರುವ ನಡುವೆ ಕಟ್ಟುನಿಟ್ಟಿನ ಬಯೋ-ಬಬಲ್ ನಿರ್ಮಿಸಲಾಗಿದ್ದು, ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈ ಸರಣಿಯ ಯಶಸ್ಸು ಮುಂಬರುವ ಭಾರತ ಸೀನಿಯರ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ದಿಕ್ಸೂಚಿಯಾಗಿರಲಿದೆ.

    ಕಳೆದ ವಾರ ಇಲ್ಲೇ ನಡೆದ ಮೊದಲ ಪಂದ್ಯ ಪ್ರತಿಕೂಲ ಹವಾಮಾನದಿಂದಾಗಿ ನೀರಸ ಡ್ರಾನಲ್ಲಿ ಕೊನೆಗೊಂಡಿತ್ತು. ಅದರ ಬೆನ್ನಲ್ಲೇ ಒಮಿಕ್ರಾನ್ ಆತಂಕ ಹೆಚ್ಚಿದ್ದು, ಹಲವು ದೇಶಗಳು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣವನ್ನು ನಿರ್ಬಂಧಿಸಿವೆ. ನೆದರ್ಲೆಂಡ್ ಕ್ರಿಕೆಟ್ ತಂಡವೂ ದಕ್ಷಿಣ ಆಫ್ರಿಕಾ ಪ್ರವಾಸ ಮೊಟಕುಗೊಳಿಸಿ ತವರಿಗೆ ಮರಳಿತ್ತು. ಆದರೆ ಭಾರತ ಎ ತಂಡ ಬಿಸಿಸಿಐ ಸೂಚನೆಯಂತೆ ಪ್ರವಾಸ ಮುಂದುವರಿಸಿದೆ.

    ಟೀಮ್ ಇಂಡಿಯಾ ನಿಗದಿಯಂತೆ ಡಿಸೆಂಬರ್ 9ರಂದು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಬೇಕಾಗಿದ್ದು, ಪ್ರವಾಸಕ್ಕೆ ಇನ್ನಷ್ಟೇ ತಂಡ ಪ್ರಕಟಗೊಳ್ಳಬೇಕಿದೆ. ಹೀಗಾಗಿ ಭಾರತ ಎ ತಂಡದ ಕೆಲ ಆಟಗಾರರು ಆಯ್ಕೆಗಾರರ ಗಮನ ಸೆಳೆಯುವ ಹಂಬಲದಲ್ಲಿದ್ದಾರೆ. ಪೃಥ್ವಿ ಷಾ, ಹನುಮ ವಿಹಾರಿ, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಉಮ್ರಾನ್ ಮಲಿಕ್, ರಾಹುಲ್ ಚಹರ್ ಈ ಪೈಕಿ ಪ್ರಮುಖರಾಗಿದ್ದಾರೆ.

    ಮೊದಲ ಪಂದ್ಯದಲ್ಲಿ ಭಾರತ ಎ ತಂಡ ಬೃಹತ್ ಮೊತ್ತ ಬಿಟ್ಟುಕೊಟ್ಟಿದ್ದರೂ, ಪ್ರತಿಯಾಗಿ ದಿಟ್ಟ ಬ್ಯಾಟಿಂಗ್ ನಿರ್ವಹಣೆಯನ್ನೂ ತೋರಿತ್ತು. ಅಭಿಮನ್ಯು ಈಶ್ವರನ್ ಶತಕ ಸಿಡಿಸಿದ್ದರೆ, ನಾಯಕ ಪ್ರಿಯಾಂಕ್ ಪಾಂಚಾಲ್ 96 ರನ್ ಬಾರಿಸಿದ್ದರು. ಪೃಥ್ವಿ ಷಾ ಕೂಡ ಬಿರುಸಿನ 48 ರನ್ ಗಳಿಸಿ ಗಮನ ಸೆಳೆದಿದ್ದರು. ಕಿವೀಸ್ ವಿರುದ್ಧ ಟೆಸ್ಟ್ ಸರಣಿಗೆ ಕಡೆಗಣಿಸಲ್ಪಟ್ಟಿರುವ ಹನುಮ ವಿಹಾರಿ ಮಾತ್ರ 25 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.

    ಬೌಲಿಂಗ್ ವಿಭಾಗದಲ್ಲಿ ಭಾರತ ಎ ಹೆಚ್ಚಿನ ಸುಧಾರಣೆ ಕಾಣಬೇಕಾಗಿದೆ. ವೇಗಿಗಳಾದ ನವದೀಪ್ ಸೈನಿ ಮತ್ತು ಉಮ್ರಾನ್ ಮಲಿಕ್ ಹೆಚ್ಚು ಪರಿಣಾಮಕಾರಿ ಎನಿಸಿರಲಿಲ್ಲ. ಸ್ಪಿನ್ನರ್‌ಗಳಾದ ರಾಹುಲ್ ಚಹರ್, ಕೆ. ಗೌತಮ್ ಕೂಡ ನಿರಾಸೆ ಅನುಭವಿಸಿದ್ದರು.

    PHOTO: ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts