More

    ನೆರೆಯಿಂದ 290 ಕೋಟಿ ರೂ. ನಷ್ಟ 

    ಉಡುಪಿ: ಎರಡು ದಿನಗಳ ನಿರಂತರ ಮಳೆ, ನೆರೆಯಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು 290 ಕೋಟಿ ರೂ. ಮೊತ್ತದ ಆಸ್ತಿ, ಕೃಷಿ ನಷ್ಟ ಅಂದಾಜಿಸಲಾಗಿದೆ. 500ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದ್ದು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ತುರ್ತು ಸಹಾಯಧನ ವಿತರಣೆಗಾಗಿ 40 ಕೋಟಿ ರೂ. ಬಿಡುಗಡೆ ಮಾಡುವಂತೆ ಉಡುಪಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
     ಸದ್ಯ ಎಲ್ಲೆಲ್ಲಿ, ಎಷ್ಟೆಷ್ಟು ನಷ್ಟ?: ತೋಟಗಾರಿಕಾ ಇಲಾಖೆ ವ್ಯಾಪ್ತಿಯ 34.66 ಹೆಕ್ಟೇರ್ ಬೆಳೆ ಹಾನಿ 39.32 ಲಕ್ಷ ರೂ.ನಷ್ಟ, ಕಾಪು ತಾಲೂಕಿನ ವಿವಿಧ ಮನೆಗಳಿಗೆ ಉಂಟಾದ ಹಾನಿಯಿಂದ 34. 93 ಲಕ್ಷ ರೂ., ಬ್ರಹ್ಮಾವರ ತಾಲೂಕಿನಲ್ಲಿ 18.10 ಲಕ್ಷ, ಕಾರ್ಕಳ ತಾಲೂಕಿನಲ್ಲಿ 1.80 ಲಕ್ಷ, ಬೈಂದೂರಿನಲ್ಲಿ 3 ಲಕ್ಷ, ಉಡುಪಿ ತಾಲೂಕಿನಲ್ಲಿ 31.74 ಲಕ್ಷ ರೂ. ಮೊತ್ತದ ನಷ್ಟ ಅಂದಾಜಿಸಲಾಗಿದೆ. ಮೆಸ್ಕಾಂ ಉಡುಪಿ ಮತ್ತು ಕುಂದಾಪುರ ವಿಭಾಗ ವ್ಯಾಪ್ತಿಯಲ್ಲಿ 2 ದಿನದಲ್ಲಿ 106 ಕಂಬಗಳು ಧರೆಗುರುಳಿದ್ದು, 10 ವಿದ್ಯುತ್ ಪ್ರವಾಹಕ ಮತ್ತು 3 ಕಿ.ಮೀ. ಉದ್ದದ ತಂತಿಗಳಿಗೆ ಹಾನಿಯಾಗಿದೆ. 25 ಲಕ್ಷ ರೂ.ನಷ್ಟ ಸಂಭವಿಸಿದೆ. 460 ಹೆಕ್ಟೇರ್ ಭತ್ತದ ಗದ್ದೆಗಳು ನೆರೆಪೀಡಿತವಾಗಿದ್ದು, ನೀರು ಖಾಲಿಯಾದ ಮೇಲೆ ನಷ್ಟ ಅಂದಾಜು ಮಾಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೊಂದೆಡೆ ನೆರೆ ಪರಿಹಾರ ಕಾರ್ಯ ಮುಂದುವರಿದಿದೆ.
    ಸಾಂಕ್ರಾಮಿಕ ರೋಗ ಭೀತಿ: ನಗರಸಭೆ ವ್ಯಾಪ್ತಿಯ ತಗ್ಗುಪ್ರದೇಶಗಳಾದ ಕಲ್ಸಂಕ, ಬೈಲಕೆರೆ, ಬನ್ನಂಜೆ, ಕೊಡಂಕೂರು, ಕೊಡವೂರು ಭಾಗಗಳಲ್ಲಿ ಹಲವು ಮನೆಗಳಿಗೆ, ಅಂಗಡಿಗಳಿಗೆ ನೆರೆಯ ನೀರು ನುಗ್ಗಿದೆ. ಬ್ರಹ್ಮಾವರ, ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ನೆರೆ ತಗ್ಗಿದರೂ ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ರೋಗ ತಡೆ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ನೆರೆಪೀಡಿತ ಪ್ರದೇಶಗಳ ಸಮೀಕ್ಷೆಗೆ ಮುಂದಾಗಿದೆ. ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ನೀರು ನಿಂತ ಕಡೆಗಳಲ್ಲಿ ರಾಸಾಯನಿಕ ಸಿಂಪಡಣೆ ಹಾಗೂ ನೆರೆಯಿಂದ ಕಲುಷಿತವಾಗಿರುವ ಬಾವಿ ನೀರು ಕುಡಿಯದಂತೆ ಆರೋಗ್ಯ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ. ಬಾವಿ ನೀರು ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಮಳೆ ಮತ್ತು ಬಿಸಿಲು ಮಿಶ್ರಿತ ವಾತಾವರಣದಿಂದ ಡೆಂೆ, ಮಲೇರಿಯಾ, ಚಿಕನ್‌ಗೂನ್ಯ ಜ್ವರ ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಸೊಳ್ಳೆ ನಿಯಂತ್ರಣಕ್ಕೆ ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ, ಹಗಲು ಹೊತ್ತಿನಲ್ಲಿ ಸೊಳ್ಳೆ ನಿರೋಧಕ ಮುಲಾಮುಗಳನ್ನು ಹಚ್ಚಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
    ಮಳೆ ಕ್ಷೀಣ, ಮೋಡಕವಿದ ವಾತಾವರಣ: ಜಿಲ್ಲೆಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಸಾಯಂಕಾಲ ಬೆಳ್ಮಣ್, ಸಿದ್ದಾಪುರ, ಪಡುಬಿದ್ರಿ, ಕೊಕ್ಕರ್ಣೆ, ಮಂದಾರ್ತಿ, ಗಂಗೊಳ್ಳಿ, ಕೋಟ ಮೊದಲಾದ ಕಡೆಗಳಲ್ಲಿ ತುಂತುರು ಮಳೆಯಾಗಿದೆ. ಸೆ.23ಕ್ಕೆ ಆರೆಂಜ್ ಅಲರ್ಟ್ ಮತ್ತು ಸೆ. 24ಕ್ಕೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಉಡುಪಿ ತಾಲೂಕಿನಲ್ಲಿ 33.6, ಕುಂದಾಪುರ 72, ಕಾರ್ಕಳದಲ್ಲಿ 31.5 ಮಿ.ಮೀ.ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 48 ಮಿ.ಮೀ.ಮಳೆಯಾಗಿದೆ.
    ತಡೆಗೋಡೆ ನಿರ್ಮಿಸಲು ನೋಟಿಸ್: ಮಣಿಪಾಲದ ಕುಂಡೇಲು ಕಾಡು ಗುಡ್ಡದಲ್ಲಿ ಬಹುಮಹಡಿ ಕಟ್ಟಡದ ಬದಿಯ ತಡೆಗೋಡೆ ಕುಸಿದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡ ಪರವಾನಗಿ ಪತ್ರ ಸಹಿತ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಕಟ್ಟಡದಲ್ಲಿ ವಾಸವಿದ್ದ 32 ವಿದ್ಯಾರ್ಥಿಗಳು ಸ್ನೇಹಿತರ ವಸತಿಗಳಿಗೆ ತೆರಳಿದ್ದು, ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ಶೀಘ್ರ ತಡೆಗೋಡೆ ನಿರ್ಮಿಸುವಂತೆ ಕಟ್ಟಡ ಮಾಲೀಕರಿಗೆ ನಗರಸಭೆ ನೋಟಿಸ್ ನೀಡಿದೆ.
    ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ನಷ್ಟದ ಲೆಕ್ಕ 2-3 ದಿನದಲ್ಲಿ ಜಿಲ್ಲಾಡಳಿತದ ಕೈಸೇರಲಿದೆ. ಬಳಿಕ ಸ್ಪಷ್ಟಚಿತ್ರಣ ಲಭಿಸಲಿದೆ. ಸದ್ಯ ತುರ್ತು ಕೆಲಸಕ್ಕಾಗಿ 40 ಕೋಟಿ ರೂ.ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷದ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಈವರೆಗೆ 290 ಕೋಟಿ ರೂ.ನಷ್ಟ ಅಂದಾಜಿಸಲಾಗಿದೆ.
     ಜಿ. ಜಗದೀಶ್ ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts