More

    280 ಶಾಲೆ ದುರಸ್ತಿಗೆ 15 ಕೋಟಿ ರೂ.

    ಗದಗ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ 280 ಶಾಲೆಗಳ ಕಟ್ಟಡ ದುರಸ್ತಿಗೆ 15 ಕೋಟಿ ರೂ. ಮಂಜೂರಾಗಿದೆ. ಇವುಗಳಲ್ಲಿ 272 ಶಾಲೆಗಳ ಕಾಮಗಾರಿ ಆರಂಭವಾಗಿದ್ದು, 11 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.

    ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

    ಕೇಂದ್ರ ಪುರಸ್ಕೃತ ಯೋಜನೆಯಡಿ ಜಿಲ್ಲೆಗೆ 17 ಹೊಸ ಕೊಠಡಿಗಳು ಮುಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿವೆ ಎಂದರು. ಮುಳಗುಂದ ಸಮೀಪದ ಸೀತಾಲಹರಿ ಶಾಲೆಯನ್ನು ದುರಸ್ತಿಗೊಳಿಸುವಂತೆ ಡಿಡಿಪಿಐ ಬಸವಲಿಂಗಪ್ಪ ಅವರಿಗೆ ಸೂಚಿಸಿದರು. ‘ಒಂದು ಜಿಲ್ಲೆ ಒಂದು ಬೆಳೆ’ ಯೋಜನೆಯಡಿ ಜಿಲ್ಲೆಗೆ ಬ್ಯಾಡಗಿ ಕೆಂಪು ಮೆಣಸಿನಕಾಯಿ ನಿಗದಿ ಪಡಿಸಲಾಗಿದೆ. ಈ ಬೆಳೆಯನ್ನು ಹೆಚ್ಚು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಜತೆಗೆ ಉತ್ಪನ್ನ ಸಂಗ್ರಹಣೆಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಶೀತಲೀಕರಣ ಘಟಕ ಅಗತ್ಯವಿದೆ. ಬ್ಯಾಡಗಿಯಲ್ಲಿ ಅಧಿಕ ಸಾಮರ್ಥ್ಯದ ವೈಜ್ಞಾನಿಕ ಶೀತಲೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ಕೂಡಲೆ ಅಲ್ಲಿಗೆ ಹೋಗಿ ಮಾಹಿತಿ ಸಂಗ್ರಹಿಸಿ ಜಿಲ್ಲೆಯಲ್ಲೂ ಅಂಥ ಶೀತಲೀಕರಣ ಘಟಕ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

    ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಅನುದಾನ ಲ್ಯಾಪ್ಸ್ ಆಗದಂತೆ ನಿಗಾ ವಹಿಸಬೇಕು. ಡ್ರೖೆನೇಜ್, ನೀರು ಸರಬರಾಜು, ಮನೆ, ಅಮೃತ ಸಿಟಿ ಯೋಜನೆಗಳ ಬಗ್ಗೆ ನಗರಸಭೆಯಲ್ಲೇ ಸಭೆ ನಡೆಸಲಿದೆ. ಈ ವೇಳೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಬೇಕು. ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡ ನಿರ್ವಿುಸಲು ನಬಾರ್ಡ್ ಯೋಜನೆಯಡಿ ಅನುದಾನ ಪಡೆಯಲು ಬ್ಯಾಂಕ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಯೋಜನೆ ಸಿದ್ಧಪಡಿಸಬೇಕು ಎಂದರು. ಜಿಪಂ ಉಪ ಕಾರ್ಯದರ್ಶಿ ಬಿ. ಕಲ್ಲೇಶ ಮಾತನಾಡಿ, ಜಿಲ್ಲೆಯಲ್ಲಿ 45 ಕೆರೆಗಳು, 49 ಹಳ್ಳಗಳು, 26 ಚೆಕ್ ಡ್ಯಾಂಗಳನ್ನು ಹೂಳೆತ್ತಲಾಗಿದೆ. ತೋಟಗಾರಿಕೆ ಇಲಾಖೆಯಿಂದ 75 ತೋಟಗಳನ್ನು ನಿರ್ವಿುಸಲಾಗಿದೆ. 15 ಉಳ್ಳಾಗಡ್ಡಿ ಸಂಸ್ಕರಣೆ ಘಟಕಗಳ ನಿರ್ವಹಣೆ ಮಾಡಿದ್ದು, 3 ಅಲಂಕಾರಿಕ ಉದ್ಯಾನ ನಿರ್ವಿುಸಲಾಗಿದೆ. ಅರಣ್ಯ ಇಲಾಖೆಯಿಂದ 167 ಕಿ.ಮೀ. ರಸ್ತೆ ಬದಿ ನೆಡತೋಪು, ನರ್ಸರಿಗಳಿಂದ 2.60 ಲಕ್ಷ ಸಸಿ ವಿತರಿಸಲಾಗಿದೆ ಎಂದು ತಿಳಿಸಿದರು. ಫಸಲ್ ಬಿಮಾ ಯೋಜನೆಯಡಿ ಕಟಾವು ಪ್ರಯೋಗಗಳ ಆಧಾರದಲ್ಲಿ 9559 ರೈತರಿಗೆ 13.1 ಕೋಟಿ ರೂ. ವಿಮೆ ಮೊತ್ತ ಪಾವತಿಸಲಾಗಿದೆ. ಇನ್ನು ಹೂವು ಬೆಳೆಗಾರರಿಗೆ ಒಟ್ಟು 44.34 ಲಕ್ಷ ರೂ. ಪಾವತಿಸಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಜಿಪಂ ಸಿಇಒ ಡಾ. ಆನಂದ, ಜಿಲ್ಲಾ ನಗರಾಭಿವೃದ್ಧಿ ಯೋಜನೆ ನಿರ್ದೇಶಕ ರುದ್ರೇಶ ಎಸ್.ಎನ್. ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts