More

    ಅಮೃತ ಯೋಜನೆಯಡಿ 27 ಗ್ರಾಪಂ, ಯೋಜನೆಗಳ ಶೇ.100ರಷ್ಟು ಅನುಷ್ಠಾನಕ್ಕೆ ಸಚಿವ ಅಂಗಾರ ಸೂಚನೆ

    ಮಂಗಳೂರು: ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 750 ಗ್ರಾಪಂಗಳಲ್ಲಿ ಅಮೃತ ಗ್ರಾಪಂ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಸೋಮವಾರ ದ.ಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸಭೆಯಲ್ಲಿ ಜಿಲ್ಲೆಯ 27 ಗ್ರಾಪಂ ಆಯ್ಕೆ ಮಾಡಿ, ಯೋಜನೆಯಡಿ ಅಭಿವೃದ್ಧಿ ಪಡಿಸಲು ನಿರ್ಣಯಿಸಲಾಯಿತು.

    ಆಯ್ಕೆಯಾಗಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯಡಿ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿದ್ದು, ಪಿಡಿಒಗಳ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವರು ಸೂಚಿಸಿದರು. ಯೋಜನೆಗಳನ್ನು ಶೇ.100ರಷ್ಟು ಅನುಷ್ಠಾನ ಮೂಲಕ ಮುಂದಿನ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ಸಮಸ್ಯೆಗಳು ಉಂಟಾಗಬಾರದು. ಅನುಷ್ಠಾನಕ್ಕೆ ಅಡ್ಡಿ ಇರುವ ಕಡೆಗಳಿಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಬಗೆಹರಿಸಿಕೊಡಬೇಕು. ವಸತಿರಹಿತರ ಪಟ್ಟಿಯನ್ನು ಶಾಸಕರ ಗಮನಕ್ಕೆ ತಂದು, ಯೋಜನೆಯಡಿ ಪೂರ್ಣಗೊಳಿಸಬೇಕು ಎಂದರು.

    ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ಜಿಪಂ ಸಿಇಒ ಡಾ.ಕುಮಾರ್, ಉಪಕಾರ್ಯದರ್ಶಿ ಆನಂದ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

    ಏನಿದು ಅಭಿವೃದ್ಧಿ ಯೋಜನೆ?: ಅಮೃತ ಯೋಜನೆಯಡಿ ಮನೆಮೆನೆಗಳಿಗೆ ನೀರಿನ ಸಂಪರ್ಕ, ಬೀದಿ ದೀಪ/ಸೋಲಾರ್ ದೀಪಗಳ ಅಳವಡಿಕೆ, ಅಮೃತ ಉದ್ಯಾನವನ, ಶಾಲಾ ಕೊಠಡಿ ನಿರ್ಮಾಣ/ದುರಸ್ತಿ, ಶಾಲೆ-ಅಂಗನವಾಡಿಯಲ್ಲಿ ಕುಡಿಯುವ ನೀರು, ಶೌಚಗೃಹ, ಆಟದ ಮೈದಾನ, ಆವರಣ ಗೋಡೆ ನಿರ್ಮಾಣ, ಶೇ.100ರಷ್ಟು ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ, ಗ್ರಾಪಂ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಗ್ರಂಥಾಲಯ ಡಿಜಿಟಲೀಕರಣ ಹಾಗೂ ಅಮೃತ ಗ್ರಾಮೀಣ ಯೋಜನೆಯಡಿ ವಸತಿ/ನಿವೇಶನ ರಹಿತರಿಗೆ ವಸತಿ ಅಥವಾ ನಿವೇಶನ ಕಲ್ಪಿಸಲಾಗುವುದು. ಪ್ರಗತಿಯಲ್ಲಿರುವ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಪಂಗಳು ವರ್ಷದೊಳಗೆ ಈ ಯೋಜನೆಗಳನ್ನು ಶೇ.100ರಷ್ಟು ಅನುಷ್ಠಾನಗೊಳಿಸಬೇಕು. ಯಶಸ್ವಿಯಾಗಿ ಪೂರ್ಣಗೊಳಿಸಿದ ಗ್ರಾಪಂಗಳಿಗೆ ಸರ್ಕಾರದಿಂದ 25 ಲಕ್ಷ ರೂ. ಅನಿರ್ಬಂಧಿತ ಅನುದಾನ ಸಿಗಲಿದೆ.

    ಆಯ್ಕೆಯಾದ ಗ್ರಾಮ ಪಂಚಾಯಿತಿಗಳು: ಬಂಟ್ವಾಳ ತಾಲೂಕಿನ ಸಂಗಬೆಟ್ಟು, ಇರ್ವತ್ತೂರು, ಪಿಲಾತಬೆಟ್ಟು, ಕಡೇಶ್ವಾಲ್ಯ, ಬಾಳೆಪುಣಿ, ಇಡ್ಕಿದು. ಬೆಳ್ತಂಗಡಿಯಲ್ಲಿ ಮಡಂತ್ಯಾರು, ಕೊಕ್ಕಡ, ಧರ್ಮಸ್ಥಳ, ಉಜಿರೆ, ಹೊಸಂಗಡಿ, ಆಳದಂಗಡಿ. ಕಡಬದ ಸವಣೂರು ಮತ್ತು ಅಲಂಕಾರು. ಪುತ್ತೂರಿನ ಉಪ್ಪಿನಂಗಡಿ, ಆರ್ಯಾಪು, ಕಬಕ. ಸುಳ್ಯದ ಅರಂತೋಡು, ಮಂಡೆಕೋಲು, ಮರ್ಕಂಜ. ಮೂಡುಬಿದಿರೆಯ ಬೆಳುವಾಯಿ, ತೆಂಕಮಿಜಾರು. ಮಂಗಳೂರು ತಾಲೂಕಿನ ಬಡಗ ಎಡಪದವು, ಗಂಜಿಮಠ, ಮುನ್ನೂರು, ಹಳೆಯಂಗಡಿ ಮತ್ತು ಪೆರ್ಮುದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts