More

    267 ಸಾಮಾನ್ಯ, 84 ಸೂಕ್ಷ್ಮ, 65 ಅತಿ ಸೂಕ್ಷ್ಮ

    ಧಾರವಾಡ: ಜಿಲ್ಲೆಯಲ್ಲಿ ಡಿ. 22ರಂದು ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ 65 ಗ್ರಾ.ಪಂ.ಗಳಲ್ಲಿ ಮತದಾನಕ್ಕಾಗಿ 416 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 267 ಸಾಮಾನ್ಯ, 84 ಸೂಕ್ಷ್ಮ ಮತ್ತು 65 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು ಧಾರವಾಡ ತಾಲೂಕಿನ 34 ಗ್ರಾ.ಪಂ.ಗಳಲ್ಲಿ 178 ಸಾಮಾನ್ಯ, 30 ಸೂಕ್ಷ್ಮ ಹಾಗೂ 30 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೊಟಬಾಗಿ ಗ್ರಾ.ಪಂ. 3 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿರುವುದರಿಂದ ಕೊಟಬಾಗಿ ವಾರ್ಡ್ 1ರ ಮತಗಟ್ಟೆ 127, 127ಎ ಮತ್ತು ಕೊಟಬಾಗಿ ವಾರ್ಡ್ ನಂ. 2ರ ಮತಗಟ್ಟೆ 128, 128ಎ ಮತ್ತು ಜೀರಿಗವಾಡದ ಮತಗಟ್ಟೆ 132ರಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುವುದಿಲ್ಲ. ಉಳಿದಂತೆ ತಾಲೂಕಿನಾದ್ಯಂತ 238 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ.

    ಅಳ್ನಾವರ ತಾಲೂಕಿನ 4 ಗ್ರಾ.ಪಂ.ಗಳಲ್ಲಿ ಚುನಾವಣೆ ಜರುಗಿಸಲು 5 ಸಾಮಾನ್ಯ, 10 ಸೂಕ್ಷ್ಮ ಮತ್ತು 6 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಳ್ನಾವರ ತಾಲೂಕಿನಲ್ಲಿ 21 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ.

    ಕಲಘಟಗಿ ತಾಲೂಕಿನ 27 ಗ್ರಾ.ಪಂ.ಗಳಲ್ಲಿ ಚುನಾವಣೆ ಜರುಗಿಸಲು 84 ಸಾಮಾನ್ಯ, 44 ಸೂಕ್ಷ್ಮ ಮತ್ತು 29 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸೂರಶೆಟ್ಟಿಕೊಪ್ಪ ಗ್ರಾ.ಪಂ.ನ ದ್ಯಾಮಾಪೂರ ಕ್ಷೇತ್ರದ ಮತಗಟ್ಟೆ 70, ಗುಡ್ಡದಹುಲಿಕಟ್ಟಿ ಗ್ರಾ.ಪಂ.ನ ಸೋಲಾರಗೊಪ್ಪ ಕ್ಷೇತ್ರದ ಮತಗಟ್ಟೆ 73, ಸೂಳಿಕಟ್ಟಿ ಗ್ರಾ.ಪಂ.ನ ಕಂದ್ಲಿ ಕ್ಷೇತ್ರದ ಮತಗಟ್ಟೆ 117 ಮತ್ತು ತಂಬೂರ ಗ್ರಾ.ಪಂ.ನ ಹುಲಗಿನಕೊಪ್ಪ ಕ್ಷೇತ್ರದ ಮತಗಟ್ಟೆ 132ರಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಮತದಾನ ಪ್ರಕ್ರಿಯೆ ನಡೆಯುವುದಿಲ್ಲ. ತಾಲೂಕಿನಲ್ಲಿ 157 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    112 ವಾಹನಗಳ ವ್ಯವಸ್ಥೆ: ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸಂಚಾರ ಹಾಗೂ ಚುನಾವಣಾ ಸಾಮಗ್ರಿ ಸಾಗಣೆಗೆ 87 ಸಂಚಾರಿ ಮಾರ್ಗಗಳನ್ನು ಗುರುತಿಸಲಾಗಿದೆ. ಒಟ್ಟು ವಿವಿಧ ರೀತಿಯ 112 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಮತದಾನ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಸಿಬ್ಬಂದಿ ಹಾಗೂ ಚುನಾವಣಾ ಸಾಮಗ್ರಿಗಳನ್ನು ನಿಗದಿತ ಸಮಯಕ್ಕೆ ಸುವ್ಯವಸ್ಥಿತವಾಗಿ ಮಸ್ಟರಿಂಗ್ ಕೇಂದ್ರಗಳಿಂದ ಆಯಾ ಮತಗಟ್ಟೆಗಳಿಗೆ ಮತ್ತು ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಮಸ್ಟರಿಂಗ್ ಕೇಂದ್ರಗಳಿಗೆ ತಲುಪಿಸಲು 60 ಬಸ್​ಗಳನ್ನು, 15 ಜೀಪ್, 17 ಮ್ಯಾಕ್ಸಿಕ್ಯಾಬ್ ಮತ್ತು ಹೆಚ್ಚುವರಿಯಾಗಿ 2 ಬಸ್, 3 ಮ್ಯಾಕ್ಸಿಕ್ಯಾಬ್ ಮತ್ತು 4 ಜೀಪಗಳು ಸೇರಿ ಒಟ್ಟು 112 ವಾಹನಗಳನ್ನು ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕರೊನಾ ಸುರಕ್ಷತಾ ಕಿಟ್ ವಿತರಣೆ: ಮತಗಟ್ಟೆಗಳಲ್ಲಿ ಕೋವಿಡ್ ಸುರಕ್ಷಾ ಕ್ರಮಗಳನ್ನು ಪಾಲಿಸಲು, ಸಿಬ್ಬಂದಿ ಹಾಗೂ ಮತದಾರರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡು ಪ್ರತಿ ಮತಗಟ್ಟೆಗೆ ಕರೊನಾ ಸುರಕ್ಷಿತ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರತಿ ಮತಗಟ್ಟೆಗೆ ಇಬ್ಬರು ಆರೋಗ್ಯ ಸಿಬ್ಬಂದಿ ಹಾಗೂ ಕೋವಿಡ್ ಸುರಕ್ಷತಾ ಸಾಮಗ್ರಿಗಳ ಕಿಟ್ ನೀಡಲಾಗುತ್ತದೆ. ಸಿಬ್ಬಂದಿಗೆ ಅನುಗುಣವಾಗಿ ಪ್ರತಿ ಕಿಟ್​ನಲ್ಲಿ ಸ್ಯಾನಿಟೈಸರ್ ಬಾಟಲ್, ಫೇಸ್ ಶೀಲ್ಡ್​ಗಳು, ಮಾಸ್ಕ್​ಗಳು, ಕೈಗವಸು, ಒಂದು ಥರ್ಮಲ್ ಸ್ಕ್ರೀನಿಂಗ್ ಉಪಕರಣ ಹಾಗೂ ಬಯೋಮೆಡಿಕಲ್ ತ್ಯಾಜ್ಯಗಳ ವಿಲೇವಾರಿ ಮಾಡುವ ಡಿಸ್ಪೋಸಲ್ ಬ್ಯಾಗ್ ನೀಡಲಾಗುತ್ತದೆ. ಮತ ಚಲಾಯಿಸಲು ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ, ಸ್ಯಾನಿಟೈಸರ್ ನೀಡುವುದು, ಥರ್ಮಲ್ ಸ್ಕ್ರೀನಿಂಗ್ ಮಾಡುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಸೇರಿ ಕೋವಿಡ್ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಮತಗಟ್ಟೆಯಲ್ಲಿ ಆರೋಗ್ಯ ಸಿಬ್ಬಂದಿ ನಿಗಾ ವಹಿಸುತ್ತಾರೆ. ಮತದಾನದ ಕೊನೆ ಒಂದು ಗಂಟೆ ಅವಧಿಯಲ್ಲಿ ಕರೊನಾ ಸೋಂಕಿತ ಹಾಗೂ ಶಂಕಿತರಿಗೆ ಮತದಾನ ಮಾಡಲು ರಾಜ್ಯ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದರಿಂದ ಅಂತಹವರಿಗೆ ಮುಂಜಾಗೃತೆಗಳೊಂದಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts