More

    26,388 ರೂ. ನಿಗದಿಪಡಿಸಿದ ಬಿಡ್ 1 ಕೋಟಿಗೆ ಹರಾಜು!

    ರಿಪ್ಪನ್‌ಪೇಟೆ: ತಾಲೂಕು ಸಮಾಜ ಕಲ್ಯಾಣ ಇಲಾಖೆ ಪಟ್ಟಣದ ವಿದ್ಯಾರ್ಥಿ ನಿಲಯದ ಹಳೆಯ ಕಟ್ಟಡದ ಸಾಮಗ್ರಿಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ 26,388 ರೂಗಳಿಗೆ ನಿಗದಿಪಡಿಸಿದ್ದ ಮರಮುಟ್ಟುಗಳನ್ನು ಬರೋಬ್ಬರಿ 1 ಕೋಟಿ ರೂ. ಗಳಿಗೆ ಬಿಡ್ ಕರೆಯಲಾಯಿತು. ಇದರಿಂದ ದಂಗಾದ ಅಧಿಕಾರಿಗಳು ಹೊರ ನಡೆದರು.
    ಪಟ್ಟಣದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಹರಾಜ ಪ್ರಕ್ರಿಯೆಯಲ್ಲಿ ಮಂಗಳೂರು ಹೆಂಚು, ಕಬ್ಬಿಣ ಸಾಮಗ್ರಿ, ಸೈಜುಗಲ್ಲು, ಮರಮುಟ್ಟುಗಳು ಹರಾಜಿಗಿದ್ದವು. ಅದರಲ್ಲಿ ಮರಮುಟ್ಟುಗಳಿಗಾಗಿ ಕೇವಲ 3 ಜನರು ಠೇವಣಿ ಮೊತ್ತವನ್ನು ಕಟ್ಟಿದ್ದು ಅಧಿಕಾರಿಗಳು ಹರಾಜು ಪ್ರಕ್ರಿಯೆ ಆರಂಭಿಸಿದರು. ಈ ಸಮಯದಲ್ಲಿ ಬಿಡ್‌ದಾರನಾಗಿದ್ದ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮರಮುಟ್ಟಗಳು ಸುರಕ್ಷಿತವಾಗಿಡದೆ ಮಳೆಯಲ್ಲಿ ನೆನೆದು ಹೋಗಿವೆ. ಆದ್ದರಿಂದ ಗುಣಮಟ್ಟದ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದರು. ಅಧಿಕಾರಿಗಳು ಯಥಾಸ್ಥಿತಿಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಪ್ರಮಾಣಪತ್ರ ಕೊಡಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ಮರು ಆರಂಭವಾಯಿತು. ಒಬ್ಬ ಬಿಡ್‌ದಾರ 3 ಸಾವಿರಕ್ಕೆ ಹಾಗೂ ಇನ್ನೊಬ್ಬ ಬಿಡ್‌ದಾರ 4 ಸಾವಿರ ರೂ.ಗೆ ಹರಾಜು ಕೂಗುತ್ತಿದ್ದಂತೆ ಎದ್ದುನಿಂತ ಕೃಷ್ಣಪ್ಪ 1 ಕೋಟಿ ರೂಪಾಯಿಗೆ ಬಿಡ್ ಕರೆದರು. ಅವಕ್ಕಾದ ಅಧಿಕಾರಿಗಳು ತುಸು ಸಾವರಿಸಿಕೊಂಡು ಮತ್ತೊಮ್ಮೆ ಪ್ರಶ್ನಿಸಿದರು. ಆಗಲೂ ಅದನ್ನೇ ಪುನರಾವರ್ತನೆ ಮಾಡಿದಾಗ ಮೇಲಧಿಕಾರಿಗಳ ಗಮನಕ್ಕೆ ತಂದು ತೀರ್ಮಾನಿಸಲಾಗುವುದು ಎಂದು ಹರಾಜು ಪ್ರಕ್ರಿಯೆ ಮುಕ್ತಾಯಗೊಳಿಸಿದರು.
    ತಾಪಂ ಇಒ ಪ್ರವೀಣ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶ ಇಕ್ಬಾಲ್ ಜಾತಿಗೇರ್, ಲೋಕೋಪಯೋಗಿ ಇಲಾಖೆಯ ಚಂದ್ರಶೇಖರ್, ಮಲ್ಲಿಕಾರ್ಜುನ್, ವಾರ್ಡನ್ ರಾಘವೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts