More

    ಒಂದು ವಾರದ ಮಳೆಗೆ 259 ಮನೆ ಹಾನಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಒಂದು ವಾರದಿಂದ ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದು, ಕಾದ ಕಾವಲಿಯಂತಾಗಿದ್ದ ಭುವಿಯೀಗ ತಕ್ಕ ಮಟ್ಟಿಗೆ ತಂಪಾಗಿದೆ. ಮರ ಗಿಡಗಳಲ್ಲಿ ಹಸಿರು ನಳನಳಿಸುತ್ತಿದೆ. ಇನ್ನೊಂದೆಡೆ ಒಂದಷ್ಟು ಹಾನಿಯೂ ಆಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನರು ಪರಿತಪಿಸುವಂತಾಗಿದೆ. ಮೇ 20ರಂದು ಸುರಿದ ಮಳೆಯಿಂದ ಜಿಲ್ಲೆಯಲ್ಲಿ 259 ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಈವರೆಗೆ ಮೂರು ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

    ಗಾಳಿ ಆರ್ಭಟಕ್ಕೆ ಮನೆ ಮೇಲೆ ಮರ ಬಿದ್ದು ನಷ್ಟ ಅನುಭವಿಸಿದವರಿದ್ದಾರೆ. ಮೇ 15ರಿಂದ 21ರವರೆಗೆ ಸರಾಸರಿ 81 ಮಿ.ಮೀ ಮಳೆಯಾಗಿದೆ. ಕಳೆದ ವಾರದಿಂದ ಮಳೆಯಾಗದೇ ಇದ್ದರೆ ಜಿಲ್ಲೆಯ ಜನರ ಸ್ಥಿತಿ ಮತ್ತಷ್ಟು ಘೋರವಾಗುತ್ತಿತ್ತು ಎಂಬುದು ವಾಸ್ತವ.
    ಭದ್ರಾ, ಲಿಂಗನಮಕ್ಕಿ, ತುಂಗಾ ಜಲಾಶಯಗಳಿಗೆ ಒಳಹರಿವು ಆರಂಭವಾಗುವಷ್ಟು ಮಳೆಯಾಗಿದೆ ಎಂದು ಆಶಾದಾಯಕ ಸಂಗತಿ. ಮಳೆಯಾದ ಕಾರಣದಿಂದ ವಿದ್ಯುತ್ ಬಳಕೆ ಕಡಿಮೆಯಾಗಿದ್ದು, ಲಿಂಗನಮಕ್ಕಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಕಡಿಮೆ ಮಾಡಲಾಗಿದೆ.
    ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಲೋಪ ಹಾಗೂ ಮಳೆಗಾಲ ಎದುರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳದ ಕಾರಣ ಸಾರ್ವಜನಿಕರು ತತ್ತರಿಸುವಂತಾಯಿತು. ಇದನ್ನು ಬಿಟ್ಟರೆ ಜಿಲ್ಲೆಯ ವಿವಿಧ ಭಾಗದಲ್ಲಿ ಉತ್ತಮ ಮಳೆಯಾದರೂ ಜನರಿಗೆ ತೀರಾ ಸಮಸ್ಯೆಗಳು ಉಂಟಾಗಲಿಲ್ಲ.
    ಕಳೆದೊಂದು ವಾರದಲ್ಲಿ ಶಿವಮೊಗ್ಗದಲ್ಲಿ 19 ಜಾನುವಾರು, ತೀರ್ಥಹಳ್ಳಿ, ಸಾಗರ, ಸೊರಬದಲ್ಲಿ ತಲಾ ಒಂದು, ಶಿಕಾರಿಪುರದಲ್ಲಿ ಒಂದು ಜಾನುವಾರು ಸಾವನ್ನಪ್ಪಿದೆ. 3 ಜನರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. 24 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮನೆಗಳಿಗೆ ನೀರು ನುಗ್ಗಿದ ಪ್ರಕರಣ ಶಿವಮೊಗ್ಗ ನಗರದಲ್ಲೇ ಹೆಚ್ಚು. ನಗರದ ತಗ್ಗು ಪ್ರದೇಶದ ಬಡಾವಣೆ ಜನರು ಕಳೆದೊಂದು ವಾರದಲ್ಲಿ ಮೂರ‌್ನಾಲ್ಕು ಬಾರಿ ಸಮಸ್ಯೆ ಎದುರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts