More

    254 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

    ಹಾವೇರಿ: ನಗರದ ಹಾನಗಲ್ಲ ರಸ್ತೆಯಲ್ಲಿರುವ ಎಪಿಎಂಸಿಯ ಗೋದಾಮನ್ನು ಹೊಂದಿರುವ ಸಿದ್ಧಲಿಂಗೇಶ್ವರ ಟ್ರೇಡರ್ಸ್​ನ ಮಾಲೀಕರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಯೋಜನೆಯ 254 ಕ್ವಿಂಟಾಲ್ ಅಕ್ಕಿಯನ್ನು ಮಂಗಳವಾರ ರಾತ್ರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಮೂವರು ಆರೋಪಿಗಳ ಮೇಲೆ ಕ್ರಮ ಜರುಗಿಸಿದ್ದಾರೆ.

    ಟಾಟಾಏಸ್ ಚಾಲಕ ಶಿವಾನಂದ ಕರಗಾಲ, ಗೋದಾಮು ಮಾಲೀಕ ಶಿವಯೋಗಿ ಪಟ್ಟಣಶೆಟ್ಟಿ ಹಾಗೂ ರವಿ ನಾಗನೂರ ಎಂಬ ಮೂವರನ್ನು ವಶಕ್ಕೆ ಪಡೆದು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    ಈ ಅಕ್ಕಿಯನ್ನು ಹಳ್ಳಿಗಳಿಂದ ಟಾಟಾಏಸ್ ವಾಹನದಲ್ಲಿ ಖರೀದಿಸಿ ಗೋದಾಮಿನಲ್ಲಿ ತಂದು ಸಂಗ್ರಹಿಸಲಾಗಿತ್ತು. ದಾಳಿಯ ವೇಳೆಯಲ್ಲಿ 10, 20, 30 ಕೆಜಿಯ ಬ್ಯಾಗ್​ಗಳಲ್ಲಿ ಅಕ್ಕಿ ಸಂಗ್ರಹಿಸಲಾಗಿತ್ತು. ಅದನ್ನು 40 ಕೆಜಿ ಬ್ಯಾಗ್​ಗೆ ಹಾಕಿ ಲಾರಿಯ ಮೂಲಕ ಬೇರೆಡೆ ಸಾಗಿಸುವ ಉದ್ದೇಶ ಹೊಂದಲಾಗಿತ್ತು. ಮೂವರನ್ನು ಪೊಲೀಸ್ ವಶಕ್ಕೆ ನೀಡಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಿಕೆ ‘ವಿಜಯವಾಣಿ’ಗೆ ತಿಳಿಸಿದರು.

    ದಾಳಿಯ ವೇಳೆ ಆಹಾರ ಶಿರಸ್ತೇದಾರ್ ಎಸ್.ಜಿ. ಸೂರಣಗಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

    ಫಲಾನುಭವಿಗಳೇ ಮಾರಾಟ ಮಾಡಿದರಾ ?: ದಾಳಿಯ ವೇಳೆ ಸಿಕ್ಕ ಅಕ್ಕಿ ಬ್ಯಾಗ್​ಗಳನ್ನು ಗಮನಿಸಿದರೆ ಸರ್ಕಾರ ಏಪ್ರಿಲ್, ಮೇ ತಿಂಗಳಲ್ಲಿ ನೀಡಿರುವ ದುಪ್ಪಟ್ಟು ಅಕ್ಕಿಯನ್ನು ಫಲಾನುಭವಿಗಳೇ ಕಾಳಸಂತೆ ದಂಧೆಕೋರರಿಗೆ ಮಾರಾಟ ಮಾಡಿದ್ದಾರಾ ಎಂಬ ಸಂಶಯ ಮೂಡಿದೆ. ಸರ್ಕಾರ ಲಾಕ್​ಡೌನ್​ನಿಂದ ಯಾರೂ ಹಸಿವಿನಿಂದ ಬಳಲಬಾರದು ಎಂದು ಉಚಿತವಾಗಿ ಅಕ್ಕಿ ಕೊಟ್ಟಿದೆ. ಆದರೆ, ಈ ಅಕ್ಕಿಯನ್ನು ಬಹುತೇಕರು ಪೂರ್ಣಪ್ರಮಾಣದಲ್ಲಿ ಬಳಸದೇ ಮಾರಾಟ ಮಾಡಿದ್ದಾರಾ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts