More

    ಮನೆಯಲ್ಲಿದ್ದ 9 ಕ್ವಿಂಟಾಲ್ ಅಕ್ಕಿ ಜಪ್ತಿ

    ಬಾಗಲಕೋಟೆ: ಜನರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಮನೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಮುರನಾಳ ಕ್ರಾಸ್‌ನಲ್ಲಿ ಮಂಗಳವಾರ ಮಧ್ಯಾಹ್ನ ಎಸ್.ಐ. ಬಿದರಿ ಎನ್ನುವವರು ವಿದ್ಯಾಗಿರಿಯ ರೇಷನ್ ಅಂಗಡಿಯಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ತೆಗೆದುಕೊಂಡು ಮನೆಯಲ್ಲಿ ಸಂಗ್ರಹಿಸುತ್ತಿರುವುದನ್ನು ಗಮನಿಸಿದ್ದ ಸಾರ್ವಜನಿಕರು ಆಹಾರ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯಲ್ಲಿ ಅಂದಾಜು 9 ಕ್ವಿಂಟಾಲ್ ಅಕ್ಕಿ ಪತ್ತೆ ಆಗಿದೆ. ಕೆಲವು ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿದ್ದರೆ, ಮತ್ತೆ ಕೆಲವು ಅನ್ನಭಾಗ್ಯದ ಮೂಟೆಗಳು ಇದ್ದವು.

    ಆರೋಪಿ ಬಿದರಿ, ಗ್ರಾಮಗಳ ಮನೆ ಮನೆಯಲ್ಲಿ ಜನರಿಂದ ಅಕ್ಕಿ ಖರೀದಿಸಿದ್ದಾಗಿ ಹೇಳಿದರು. ವಿದ್ಯಾಗಿರಿಯ ಪಡಿತರ ವಿತರಣೆ ಅಂಗಡಿಯಲ್ಲಿ ಮೊದಲ ಬಾರಿಗೆ 7 ಪಾಕೆಟ್ ಅಕ್ಕಿಯನ್ನು ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ನಿರೀಕ್ಷಕ ಈರಯ್ಯ ಕೋಟಿ ಅವರು ಆರೋಪಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಿದ್ಯಾಗಿರಿಯಲ್ಲಿರುವ ಪಡಿತರ ವಿತರಕರೊಬ್ಬರು ತೂಕದಲ್ಲಿ ಮೋಸ ಮಾಡಿ ಅಕ್ರಮವಾಗಿ ಅಕ್ಕಿ ಮಾರಾಟ ಮಾಡುತ್ತಿದ್ದಾನೆ. ಅವರನ್ನು ಯಾರಾದರೂ ಪ್ರಶ್ನಿಸಿದರೆ ಅಂತವರ ರೇಷನ್ ಕಾರ್ಡ್ ರದ್ದು ಮಾಡಿಸುವುದಾಗಿ ಬೆದರಿಸುತ್ತಾನೆ. ಹೀಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಕಾರ್ಡ್ ರದ್ದು ಆಗಿದೆ. ನನಗೆ ಕಣ್ಣು ಕಾಣಲ್ಲ. ಕೋವಿಡ್ ಬಳಿಕ ನನ್ನ ಕಣ್ಣು ಹೋಗಿದೆ. ವಿದ್ಯಾಗಿರಿಯ ಆ ಪಡಿತರ ವಿತರಕ ಬಡವರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆ. ದಯವಿಟ್ಟು ಮೊದಲು ಆತನ ಪರವಾನಗಿ ರದ್ದುಪಡಿಸಿ, ಆತನನ್ನು ಬಂಧಿಸಿ ಎಂದು ಆಹಾರ ಇಲಾಖೆ ಮತ್ತು ಪೊಲೀಸರ ಎದುರು ಬಸವರಾಜ ಶೆಲ್ಲಿಕೇರಿ ಆಗ್ರಹಿಸಿದರು. ಆಹಾರ ಇಲಾಖೆ ಅಧಿಕಾರಿಗಳು ಯಾರ ವಿರುದ್ಧ ದೂರು ಕೊಡುತ್ತಾರೋ ಅವರ ವಿರುದ್ಧ ದೂರು ದಾಖಲಿಸುವುದಾಗಿ ಪೊಲೀಸರು ತಿಳಿಸಿದರು.

    ಸದ್ಯ ಪಡಿತರ ಪತ್ತೆ ಆಗಿರುವ ಬಿದರಿ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ. ಇನ್ನು ಪಡಿತರ ವಿತರಕನ ಕಡೆಗೆ ಇರುವ ಅಕ್ಕಿ ದಾಸ್ತಾನು ಪರಿಶೀಲಿಸಬೇಕಾಗುತ್ತದೆ. ಅಲ್ಲಿ ವ್ಯತ್ಯಾಸ ಕಂಡು ಬಂದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಾಗಿ ಆಹಾರ ನಿರೀಕ್ಷಕ ಕೋಟಿ ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts