More

    ಪಿಯು ಪರೀಕ್ಷೆಗೆ 250 ವಿದ್ಯಾರ್ಥಿಗಳ ನೋಂದಣಿ ; ಅಂಕ ತೃಪ್ತಿಕರವಾಗಿಲ್ಲವೆಂದು ಹೊಸದಾಗಿ ಬರೆಯಲು ಸಿದ್ಧತೆ

    ಚಿಕ್ಕಬಳ್ಳಾಪುರ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದ್ದರೂ ಅಂಕಗಳು ತೃಪ್ತಿಕರವಾಗಿಲ್ಲ ಎಂದು ಹೊಸದಾಗಿ ಪರೀಕ್ಷೆ ಬರೆಯಲು ಜಿಲ್ಲೆಯ 250 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

    ಕರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಅಂತಿಮ ಪರೀಕ್ಷೆ ನಡೆಸದೆ, ಎಸ್ಸೆಸ್ಸೆಲ್ಸಿ, ಪ್ರಥಮ ಪಿಯು ಮತ್ತು ಕಾಲೇಜು ಹಂತದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಜು.20 ರಂದು ಲಿತಾಂಶ ಪ್ರಕಟಿಸಲಾಗಿತ್ತು.

    ನೋಂದಣಿಯಾಗಿದ್ದ 13,389 ಹೊಸ ಅಭ್ಯರ್ಥಿಗಳ ಪೈಕಿ 13,388 ಮಂದಿ ಉತ್ತೀರ್ಣರಾಗಿದ್ದಾರೆ. ಗ್ರೇಡ್ ಆಧಾರದ ಉತ್ತೀರ್ಣತೆಯ ಬಗ್ಗೆ ಅತೃಪ್ತಿ ಹೊಂದಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದರಿಂದ ಆ.19 ರಿಂದ ಸೆ.3 ರವರೆಗೆ ಪರೀಕ್ಷೆ ನಡೆಯಲಿದ್ದು, 250 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

    6 ಪರೀಕ್ಷಾ ಕೇಂದ್ರಗಳು: ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿಂತಾಮಣಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೌರಿಬಿದನೂರು ಎಸ್‌ಎಸ್‌ಇಎ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಗೇಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಗುಡಿಬಂಡೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿ 6 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

    ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಪರೀಕ್ಷೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದರು. ಈಗಾಗಲೇ ವಾರ್ಷಿಕ ಪರೀಕ್ಷೆಗೆ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ದೋಷರಹಿತವಾಗಿ ಪರೀಕ್ಷೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಬೇಕು. ಕೇಂದ್ರದ ಕೊಠಡಿಗಳನ್ನು ನಿಗದಿತ ದಿನದಂದು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಬಳಿಕ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದರು.

    ನೋಂದಾಯಿತ ವಿದ್ಯಾರ್ಥಿಗಳು: ಚಿಕ್ಕಬಳ್ಳಾಪುರ-76, ಶಿಡ್ಲಘಟ್ಟ-34, ಚಿಂತಾಮಣಿ-49, ಗೌರಿಬಿದನೂರು-41, ಬಾಗೇಪಲ್ಲಿ-49, ಗುಡಿಬಂಡೆ-1 ಸೇರಿ ಒಟ್ಟು 250 ವಿದ್ಯಾರ್ಥಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts