More

    ಬಗರ್ ಹುಕುಂಗೆ ಒಬ್ಬರಿಂದಲೇ 25 ಅರ್ಜಿ! ಸಾಗುವಳಿ ಮಾಡದ ಜಮೀನಿಗೂ ಅರ್ಜಿ!!

    ಬೆಂಗಳೂರು: ಬಗರ್ ಹುಕುಂ ಸಾಗುವಳಿ ಸಕ್ರಮ ಕೋರಿ ಒಬ್ಬರೇ 25 ಅರ್ಜಿ ಹಾಕಿದ್ದಾರೆ! ಸ್ವಂತಕ್ಕೆ ಬೇಕಾದಷ್ಟು ಜಮೀನಿದ್ದವರು, ಜಿಲ್ಲೆಯ ನಿವಾಸಿಗಳಲ್ಲದವರು, 18 ವರ್ಷ ಆಗದವರೂ ಕೂಡ ಅರ್ಜಿ ಹಾಕಿದ್ದಾರೆ. ಸಾಗುವಳಿ ಮಾಡದ ಜಮೀನಿಗೂ ಅರ್ಜಿ ಸಲ್ಲಿಸಿದ್ದಾರೆ!!
    ಹೌದು, ಈ ಅಂಶವನ್ನು ಖುದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡರೇ ಬಹಿರಂಗಪಡಿಸಿದರು.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಅನರ್ಹರು ಬಗರ್‌ಹುಕುಂ ಸಾಗುವಳಿ ಚೀಟಿಗೆ ಅರ್ಜಿ ಹಾಕಿದ್ದು, ಎಲ್ಲವನ್ನೂ ಪರಿಶೀಲಿಸಿ 8 ತಿಂಗಳಲ್ಲಿ ಡಿಜಿಟಲೀಕೃತ ರೂಪದ ಸಾಗುವಳಿ ಚೀಟಿ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

    ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿರುವಾಗ ಸರ್ಕಾರಿ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದ ಭೂರಹಿತರಿಗೆ ಸಕ್ರಮೀಕರಣ ಮಾಡಲು ಅವಕಾಶ ಕೊಟ್ಟಿತ್ತು. 9,29,513 ಅರ್ಜಿ ಬಂದಿವೆ. ಸ್ವಂತ ಭೂಮಿ ಇಲ್ಲದಿದ್ದರೆ ಅಥವಾ 4.38 ಎಕರೆಗಿಂತ ಹೆಚ್ಚಿಗೆ ಭೂಮಿ ಇಲ್ಲದವರು ಗೊತ್ತಿದ್ದೋ , ಗೊತ್ತಿಲ್ಲದೆಯೋ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದರೆ ಸಕ್ರಮೀಕರಣ ಮಾಡಲಾಗುತ್ತದೆ. ಆದರೆ ಅರ್ಹರು, ಅನರ್ಹರು ಅರ್ಜಿ ಹಾಕಿದ್ದಾರೆ. ಬಡವರಿಗೆ ತಂದ ಕಾನೂನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಒಬ್ಬನೇ 25ಕ್ಕೂ ಹೆಚ್ಚು ಅರ್ಜಿ ಹಾಕಿದ್ದಾರೆ, ಸ್ವಂತ ಸಾಕಷ್ಟು ಜಮೀನಿದ್ದರೂ ಅರ್ಜಿ ಸಲ್ಲಿಸಿದ್ದಾರೆ, ಸಾಗುವಳಿಯನ್ನೇ ಮಾಡದ ಜಮೀನಿಗೂ ಅರ್ಜಿ, ಜಿಲ್ಲೆಯ ನಿವಾಸಿಗಳೇ ಅಲ್ಲದವರು ಅರ್ಜಿ ಹಾಕಿದ್ದಾರೆ. 2004 ಕ್ಕಿಂತ ಮೊದಲು ಸಾಗುವಳಿ ಮಾಡಿದವರಿಗೆ ಮಾತ್ರ 18 ವರ್ಷ ಆಗ ಆಗಿರಬೇಕೆಂದು ಷರತ್ತು ಇತ್ತು. ಷರತ್ತು ಪೂರೈಸದವರು, ಈಗ 18 ವರ್ಷ ಆದವರೂ ಪತ್ತೆಯಾಗಿದ್ದಾರೆ ಎಂದು ಹೇಳಿದರು.

    ಅರ್ಹ ಬಡವರಿಗೆ ಜಮೀನೂ ಸಿಗಬೇಕು, ನೆಮ್ಮದಿಯ ಮಾಲಿಕತ್ವ ಸಿಗಬೇಕು ಎಂಬುದು ನಮ್ಮ ಆದ್ಯತೆ. ಅರ್ಜಿದಾರರ ಆಧಾರ್ ಮೇಲೆ ಕುಟುಂಬದ ಜಮೀನು ಪರಿಶೀಲಿಸಲು ತಹಸೀಲ್ದಾರ್‌ಗೆ ಆದೇಶ ಮಾಡಲಾಗಿದೆ. ಅದರಿಂದ ಲಭಿಸುವ ಎಲ್ಲ ಮಾಹಿತಿಗಳನ್ನು ಬಗರ್ ಹುಕುಂ ಸಮಿತಿ ಮುಂದಿಟ್ಟು ಪರಿಹರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.


    ಸ್ಯಾಟ್‌ಲೈಟ್ ಇಮೇಜ್ನ್ನು ತಹಸೀಲ್ದಾರ್‌ರಿಗೆ ಕೊಟ್ಟು ಸಾಗುವಳಿಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ. ಬಗರ್ ಹುಕುಂ ಸಮಿತಿ ಸಭೆಯನ್ನೂ ಕೂಡ ಗಣಕೀಕರಣ ಮಾಡಲಾಗುತ್ತದೆ. ಸಮಿತಿಯ ನಡಾವಳಿಗಳೇ ನಾಪತ್ತೆಯಾಗಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ಸಮಿತಿಯ ಸಭೆಯ ಹಾಜರಾತಿಗೆ ಬಯೋ ಮೆಟ್ರಿಕ್ ಮೂಲಕ ಮಾಡಲಾಗುತ್ತದೆ. ಶಾಸಕರು ಅಧಿವೇಶನದಲ್ಲಿ ಇರುವಾಗ ದೂರದ ತಾಲೂಕಿನಲ್ಲಿ ಅದೇ ದಿನ ಸಮಿತಿ ಸಭೆ ನಡೆದಿರುವುದಾಗಿ ದಾಖಲೆ ಇವೆ. ಕೆಲವೆಡೆ ಸದಸ್ಯರೇ ಇಲ್ಲದೆ, ಅವರ ಸಹಿಯೇ ಇಲ್ಲದೆ ಸಭೆಗಳು ನಡೆದಿವೆ ಎಂದು ಬಹಿರಂಗಪಡಿಸಿದರು.

    ಬಾರ್‌ಕೋಡ್ ಸಾಗುವಳಿ ಚೀಟಿ

    ಸಾಗುವಳಿ ಚೀಟಿಯೂ ಬಾರ್‌ಕೋಡ್ ಇರುವ ಡಿಜಟಲೀಕೃತ ರೂಪದಲ್ಲಿ ಕೊಡಲಾಗುತ್ತದೆ. ಆಧಾರ್ ಸಂಖ್ಯೆ, ಸಾಗುವಳಿ ಮಾಡುವವರ ಭಾವಚಿತ್ರ ಎಲ್ಲವೂ ಅದರಲ್ಲಿ ಇರಲಿದೆ. ಆನ್‌ಲೈನ್ ಪೇಮೆಂಟ್‌ಗೂ ಅವಕಾಶ ಕೊಡಲಾಗುತ್ತದೆ. ಜಮೀನನ್ನು ನೋಂದಣಿ ಮಾಡಿಕೊಡಲೂ ಆದೇಶ ಮಾಡಲಾಗುತ್ತದೆ. ಪೋಡಿಯನ್ನೂ ನಾವೇ ಮಾಡಿಕೊಟ್ಟುಬಿಡುತ್ತೇವೆ. 30-40 ವರ್ಷದ ಹಿಂದೆ ಮಂಜೂರಾದ ಜಮೀನುಗಳ ಪೋಡಿ ಆಗಿಯೇ ಇಲ್ಲ. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts