More

    244 ಹಂಪ್, ಸಂಚಾರ ನಿಯಂತ್ರಣಕ್ಕೆ ಡಾಂಬರು ರಸ್ತೆ ಉಬ್ಬು

    ಭರತ್ ಶೆಟ್ಟಿಗಾರ್ ಮಂಗಳೂರು
    ನಗರಾದ್ಯಂತ ಮೀತಿಮೀರಿದ ವೇಗದಲ್ಲಿ ವಾಹನ ಚಾಲನೆ, ಒಳರಸ್ತೆಯಿಂದ ಮುಖ್ಯರಸ್ತೆ ಸಂಪರ್ಕಿಸುವಲ್ಲಿ ಹೆಚ್ಚಾಗುತ್ತಿರುವ ಅಪಘಾತ, ಸಾರ್ವಜನಿಕರ ಬೇಡಿಕೆ ಮೊದಲಾದವುಗಳನ್ನು ಗಮನದಲ್ಲಿರಿಸಿ, ಪೊಲೀಸ್- ಮಹಾನಗರ ಪಾಲಿಕೆ ಅಧಿಕಾರಿಗಳ ಜಂಟಿ ಸಮೀಕ್ಷೆಯ ಬಳಿಕ ನಗರ ವ್ಯಾಪ್ತಿಯಲ್ಲಿ ರಸ್ತೆ ಉಬ್ಬು(ಹಂಪ್) ನಿರ್ಮಾಣ ಕಾರ್ಯ ಆರಂಭವಾಗಿದೆ.

    ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಹಲವು ಕಡೆ ಹಂಪ್ ನಿರ್ಮಿಸಲಾಗಿದೆ. ಈ ಮೊದಲು ನಗರದ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಫೈಬರ್ ಹಂಪ್ ಅಳವಡಿಸಲಾಗುತ್ತಿತ್ತು. ಆದರೆ ಅವುಗಳು ಬಿಸಿಲಿನ ಹೊಡೆತಕ್ಕೆ ತುಂಡುತುಂಡಾಗಿ ಎದ್ದು ಹೋಗುವುದು ಸಾಮಾನ್ಯವಾಗಿತ್ತು. ಲಕ್ಷಾಂತರ ರೂ. ಈ ರೀತಿ ಹಾಳು ಮಾಡುವುದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿತ್ತು. ಜತೆಗೆ ಅವುಗಳ ರಚನೆ ವಾಹನ ಸವಾರರ ಮೇಲೆ ಅದರಲ್ಲೂ ಬೆನ್ನಿಗೆ ಹೆಚ್ಚು ಹಾನಿಕಾರಕ ಎನ್ನುವ ಕಾರಣಕ್ಕೆ, ವಿರೋಧ ವ್ಯಕ್ತವಾದುದರಿಂದ ಅವುಗಳನ್ನು ತೆರವುಗೊಳಿಸಲಾಗಿತ್ತು. ಫೈಬರ್ ಹಂಪ್‌ಗಳಿದ್ದ ಸ್ಥಳ ಮತ್ತು ಇತರೆಡೆ ಈಗ ಡಾಂಬರು ಹಂಪ್ ನಿರ್ಮಿಸಲಾಗುತ್ತಿದೆ.

    ಮೊದಲ ಹಂತದಲ್ಲಿ ಸಂಚಾರ ಪಶ್ಚಿಮ ಪೊಲೀಸ್ ಠಾಣೆ(ಪಾಂಡೇಶ್ವರ) ಮತ್ತು ಪೂರ್ವ ಪೊಲೀಸ್ ಠಾಣೆ(ಕದ್ರಿ) ವ್ಯಾಪ್ತಿಯಲ್ಲಿ ಹಂಪ್ ಅಳವಡಿಸಲು ಉದ್ದೇಶಿಸಲಾಗಿದೆ. ಬಳಿಕ ಉತ್ತರ ಮತ್ತು ದಕ್ಷಿಣ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಹಂಪ್ ನಿರ್ಮಾಣ ಪೊಲೀಸ್ ಇಲಾಖೆಯಿಂದ ಈಗಾಗಲೇ ಸ್ಥಳ ಗುರುತು ಮಾಡುವ ಕೆಲಸ ನಡೆದಿದೆ. ಒಟ್ಟು 164 ಸ್ಥಳಗಳಲ್ಲಿ 244 ವೈಜ್ಞಾನಿಕ ಹಂಪ್‌ಗಳು ನಿರ್ಮಾಣವಾಗಲಿವೆ ಎಂದು ಸಂಚಾರ ವಿಭಾಗದ ಎಸಿಪಿ ಎಂ.ಎ.ನಟರಾಜ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಎಲ್ಲೆಲ್ಲ ನಿರ್ಮಾಣ?: ಬಿಜೈ ವ್ಯಾಪ್ತಿಯ ವಿವೇಕಾನಂದ ಪಾರ್ಕ್, ಚಂದ್ರಿಕಾ ಬಡಾವಣೆ ಅಡ್ಡರಸ್ತೆ, ಕೊಡಿಯಾಲ್‌ಗುತ್ತು ಅಡ್ಡರಸ್ತೆ, ಕದ್ರಿ ಕಂಬಳ ಅಡ್ಡರಸ್ತೆ, ಜೈಲ್ ರೋಡ್, ಕರಂಗಲಪಾಡಿ ಮುಖ್ಯ ರಸ್ತೆ, ಬಿಜೈ ಚರ್ಚ್ ರಸ್ತೆ, ಮಾರ್ಕೆಟ್ ಮುಂಭಾಗ, ಆನೆಗುಂಡಿ ರಸ್ತೆ, ಟಾಟಾ ಶೋರೂಂ ಬಳಿ, ಸರ್ಕಿಟ್ ಹೌಸ್ ರಸ್ತೆ ಶೆಲ್ ಬಂಕ್ ಮುಂಭಾಗ ಈಗಾಗಲೇ ಹಂಪ್ ನಿರ್ಮಿಸಲಾಗಿದೆ. ಕೋರ್ಟ್ ರಸ್ತೆ, ಕದ್ರಿ ಕಂಬಳ ರಸ್ತೆ, ಸಿಟಿ ಆಸ್ಪತ್ರೆ ಬಳಿ, ಕದ್ರಿ ವೃತ್ತ, ಶಿವಭಾಗ್, ಸೇಂಟ್ ಆ್ಯಗ್ನೆಸ್, ಕೊಲಾಸೊ ಆಸ್ಪತ್ರೆ, ಬಲ್ಮಠ -ಕಂಕನಾಡಿ ರಸ್ತೆ, ತೋಟಗಾರಿಕಾ ಇಲಾಖೆ ಬಳಿ ಹಂಪ್ ನಿರ್ಮಾಣ ಕೆಲಸ ನಡೆಯಲಿದೆ. ಮಂಗಳೂರು ನಗರ ಸೇರಿದಂತೆ, ಸುರತ್ಕಲ್ ವ್ಯಾಪ್ತಿಯ ಮುಕ್ಕವರೆಗೂ ಹಂಪ್ ನಿರ್ಮಾಣವಾಗಲಿದೆ.

    ವೈಜ್ಞಾನಿಕ ರೀತಿ ನಿರ್ಮಾಣ: ನಿಗದಿತ ಮಾನದಂಡ ಅನುಸರಿಸಿ, ವೈಜ್ಞಾನಿಕವಾಗಿ ಹಂಪ್ ನಿರ್ಮಿಸಲಾಗುತ್ತಿದೆ. ಡಿವೈಡರ್‌ನಿಂದ ರಸ್ತೆ ಅಂಚು ಅಥವಾ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿವರೆಗೆ ಇರುತ್ತದೆ. 1.75 ಮೀಟರ್ ಅಗಲ, 6 ಇಂಚು ಎತ್ತರವಿದೆ. ಕಾಮಗಾರಿ ಮುಗಿದು ವಾರದ ಬಳಿಕ ಬಿಳಿ ಬಣ್ಣ ಬಳಿದು, ರಿಫ್ಲೆಕ್ಟರ್ ಮತ್ತು ಸೂಚನಾ ಫಲಕ ಅಳವಡಿಸಲಾಗುತ್ತದೆ. ಹೊಸ ಹಂಪ್ ಆಗಿರುವುದರಿಂದ ಸವಾರರಿಗೆ ಗಮನಕ್ಕೆ ಬರಲಿ ಎಂದು ಕೆಲವು ಹಂಪ್‌ಗಳಲ್ಲಿ ಒಂದು ಕೋಟ್ ಬಿಳಿ ಬಣ್ಣ ಬಳಿಯಲಾಗಿದೆ. ಸಂಚಾರ ದಟ್ಟಣೆ ಇರುವುದರಿಂದ ದಿನಕ್ಕೆ 6-7 ನಿರ್ಮಾಣ ಸಾಧ್ಯವಾಗುತ್ತಿದೆ ಎನ್ನುತ್ತಾರೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಪಿಡಬ್ಲುೃಡಿ ಗುತ್ತಿಗೆದಾರ ಮೊಹಮ್ಮದ್ ಮುನಾಜ್.

    ಎಲ್ಲೆಲ್ಲಿ ಹಂಪ್ ಅಳವಡಿಸಬೇಕು ಎಂದು ಮಹಾನಗರ ಪಾಲಿಕೆ ಮತ್ತು ನಗರ ಪೊಲೀಸ್ ಜಂಟಿ ಸರ್ವೇ ನಡೆಸಿ ಸ್ಥಳ ಅಂತಿಮ ಪಡಿಸಲಾಗಿದೆ. ಮಹಾನಗರ ಪಾಲಿಕೆಯಿಂದ ಟೆಂಡರ್ ಕರೆದು, ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಹಂಪ್ ಅಳವಡಿಸಲಾಗುತ್ತಿದೆ.
    – ಅಕ್ಷಿ ಶ್ರೀಧರ್, ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts