More

    ಒಂದೇ ದಿನ 24 ಪಾಸಿಟಿವ್

    ವಿಜಯವಾಣಿ ಸುದ್ದಿಜಾಲ ಕಾರವಾರ/ಯಲ್ಲಾಪುರ/ಮುಂಡಗೋಡ

    ಜಿಲ್ಲೆಗೆ ಸೋಮವಾರ ಕರೊನಾಘಾತ ಉಂಟಾಗಿದೆ. ಇದೇ ಮೊದಲ ಬಾರಿಗೆ ಒಂದೇ ದಿನ 24 ಜನರಿಗೆ ಸೋಂಕು ದೃಢಪಟ್ಟಿದೆ. ಮುಂಡಗೋಡಿನ 6, ಹೊನ್ನಾವರದ 6, ಯಲ್ಲಾಪುರದ 7, ಕಾರವಾರದ ಇಬ್ಬರು, ಶಿರಸಿ, ಭಟ್ಕಳ ಹಾಗೂ ಕುಮಟಾದ ತಲಾ ಒಬ್ಬರಲ್ಲಿ ಕರೊನಾ ಕಾಣಿಸಿಕೊಂಡಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 213ಕ್ಕೆ ತಲುಪಿದ್ದು, 154 ಜನರು ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. 59 ಸಕ್ರಿಯ ಪ್ರಕರಣಗಳಿವೆ.

    ಸಾರಿಗೆ ಸಿಬ್ಬಂದಿಗೆ ಸೋಂಕು: ಬಸ್​ನಲ್ಲಿ ಬೆಂಗಳೂರಿಗೆ ಹೋಗಿ ಬಂದ ಎನ್​ಡಬ್ಲ್ಯುಕೆಆರ್​ಟಿಸಿ ಕಂಡಕ್ಟರ್(ಪಿ-10649) ಸಂಪರ್ಕಕ್ಕೆ ಬಂದ ಆರು ಜನರಲ್ಲಿ ರೋಗ ಕಾಣಿಸಿಕೊಂಡಿದೆ. ಅದರಲ್ಲಿ ಐವರು ಸಾರಿಗೆ ಸಿಬ್ಬಂದಿಯಾಗಿದ್ದು, ಒಬ್ಬ 45 ವರ್ಷದ ಗುಳ್ಳಾಪುರದ ಗರ್ಭಿಣಿ ಸೇರಿದ್ದಾರೆ. ಸೋಂಕಿತ ಕಂಡಕ್ಟರ್ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಮಾತ್ರ ತಪಾಸಣೆಗೊಳಪಡಿಸಿದ್ದು, ಎಲ್ಲ ಸಿಬ್ಬಂದಿಯ ತಪಾಸಣೆ ನಡೆಸಬೇಕು. ಡಿಪೊ ಸೀಲ್​ಡೌನ್ ಮಾಡಬೇಕೆಂದು ಎನ್​ಡಬ್ಲ್ಯುಕೆಆರ್​ಟಿಸಿ ಸಿಬ್ಬಂದಿ ಒತ್ತಾಯಿಸಿದ್ದಾರೆ. ಬಹುತೇಕ ಎನ್​ಡಬ್ಲ್ಯುಕೆಆರ್​ಟಿಸಿ ಸಿಬ್ಬಂದಿ ಇಲ್ಲಿನ ಇಂದಿರಾ ಕ್ಯಾಂಟೀನ್​ನಲ್ಲೇ ಪ್ರತಿನಿತ್ಯ ಊಟ, ತಿಂಡಿ ಮಾಡುತ್ತಿದ್ದಾರೆ. ಅಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಾಲ ತುಂಬಲು ಓಡಾಡಿದ: ಗೋವಾದಿಂದ ತಿಂಗಳ ಹಿಂದೆ ಆಗಮಿಸಿ, ವಾಪಸ್ ಉದ್ಯೋಗಕ್ಕೆ ತೆರಳಲು ಆರೋಗ್ಯ ತಪಾಸಣೆ ಮಾಡಿಸಿದ ತಾಲೂಕಿನ ನಂದೊಳ್ಳಿಯ ಯುವಕನಿಗೆ ಸೋಂಕು ದೃಢಪಟ್ಟಿದೆ. ಸೋಮವಾರ ಬೆಳಗ್ಗೆ ಆತ ಬೆಳೆ ಸಾಲ ಸಂಬಂಧ ತನ್ನ ತಂದೆಯ ಜತೆ ಎಲ್​ಎಸ್​ಎಂಪಿ ಸೊಸೈಟಿ ಹಾಗೂ ಕೆಡಿಸಿಸಿ ಬ್ಯಾಂಕ್​ಗೆ ತೆರಳಿ ನೂರಾರು ರೈತರ ಜತೆ ಸರದಿಯಲ್ಲಿ ನಿಂತಿದ್ದ, ಬ್ಯಾಂಕ್ ಪಕ್ಕದ ಟಿಎಂಎಸ್ ಸೂಪರ್ ಮಾರ್ಕೆಟ್​ಗೂ ಆತ ತೆರಳಿದ್ದ ಎನ್ನಲಾಗಿದೆ. ಕೆಲ ದಿವಸಗಳ ಹಿಂದೆ ತನ್ನ ತಂದೆಯ ಚಿಕಿತ್ಸೆಗಾಗಿ ಧಾರವಾಡಕ್ಕೆ ಹೋಗಿದ್ದ ಸಂದರ್ಭದಲ್ಲಿ ಆತನಿಗೆ ಕರೊನಾ ತಗುಲಿರಬಹುದೆಂದು ಅಂದಾಜಿಸಲಾಗಿದೆ.

    ಮುಂಬೈ ನಂಜು: ಶಿರಸಿ, ಕುಮಟಾ, ಹೊನ್ನಾವರದಲ್ಲಿ ಮುಂಬೈನಿಂದ ಆಗಮಿಸಿ ಕ್ವಾರಂಟೈನ್​ನಲ್ಲಿದ್ದ 8 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಇನ್ನು ಭಟ್ಕಳದಲ್ಲಿ ವಿಜಯ ವಾಡದಿಂದ ಆಗಮಿಸಿದ 50 ವರ್ಷದ ವ್ಯಕ್ತಿಗೆ ಕರೊನಾ ಬಂದಿದೆ.

    ಟಿಬೇಟಿಯನ್ ಕಾಲನಿಯಲ್ಲಿ 6 ಕೇಸ್ ದೃಢ: ಮುಂಡಗೋಡ ಟಿಬೆಟಿಯನ್ ಕಾಲನಿಯ ಕ್ವಾರಂಟೈನ್​ನಲ್ಲಿದ್ದ 5 ಮಂದಿಗೆ ಸೋಂಕು ದೃಢಪಟ್ಟಿದೆ. ಕ್ಯಾಂಪ್ ನಂ. 3ರಲ್ಲಿನ ಗಜಾಂಗ್ ಪೆಮಿಟ್ಸಲ್ ಹಾಸ್ಟೆಲ್ ಕ್ವಾರಂಟೈನ್​ನಲ್ಲಿದ್ದ 4 ಪುರಷರಿಗೆ ರೋಗ ಖಚಿತವಾಗಿದೆ. ಅಸ್ಸಾಂ, ಡೆಹ್ರಾಡೂನ್ ಹಾಗೂ ಕಾರ್ಗಿಲ್​ನಿಂದ ಬಂದಿದ್ದ ಯುವಕರನ್ನು ಕ್ವಾರಂಟೈನ್ ಮಾಡಲಾಗಿತ್ತು. ದೆಹಲಿಯಿಂದ ಬಂದು ಸೋಂಕಿತ (ಯುಕೆ117)ನ ಪ್ರಾಥಮಿಕ ಸಂಪರ್ಕಕ್ಕೆ ಬಂದು, ಟಿಸಿವಿ ಹಾಸ್ಟೆಲ್ ಕ್ವಾರಂಟೈನ್​ನಲ್ಲಿದ್ದ 83 ವರ್ಷದ ವೃದ್ಧೆಗೂ ಸೋಂಕು ದೃಢಪಟ್ಟಿದೆ. ಪಟ್ಟಣದ 20 ವರ್ಷದ ಇನ್ನೊಬ್ಬ ಯುವಕನಿಗೆ ಕರೊನಾ ದೃಢಪಟ್ಟಿದ್ದು, ಆತನಲ್ಲಿ ಡೆಂಘೆ ಕೂಡ ಕಾಣಿಸಿಕೊಂಡಿದೆ. ವರದಿಯ ಬಗ್ಗೆ ಅನುಮಾನ ಇದ್ದ ಹಿನ್ನೆಲೆಯಲ್ಲಿ ಆತನ ಗಂಟಲ ದ್ರವದ ಮಾದರಿಯ ಮರು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

    ಭಟ್ಕಳದ ಇನ್ನಿಬ್ಬರು ಮಂಗಳೂರಿನಲ್ಲಿ: ತೀವ್ರ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗೆ ತೆರಳಿದ 75 ಹಾಗೂ 78 ವರ್ಷದ ಇಬ್ಬರಲ್ಲಿ ಕರೊನಾ ದೃಢಪಟ್ಟಿದೆ. ಅವರ ಸೋಂಕಿನ ಮೂಲದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಹೆಲ್ತ್ ಬುಲೆಟಿನ್​ನಲ್ಲಿ ಅವರ ಮಾಹಿತಿ ಇನ್ನಷ್ಟೇ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ನೌಕಾನೆಲೆಗೂ ಕರೊನಾ…: ಕದಂಬ ನೌಕಾನೆಲೆಯಲ್ಲಿ ಇಲೆಕ್ಟ್ರೀಶಿಯನ್ ಕೆಲಸ ಮಾಡುತ್ತಿದ್ದ ಕಾರವಾರ ಕೋಡಿಬಾಗ ಹಾಗೂ ಕೋಡಿಬೀರ ದೇವಸ್ಥಾನ ಸಮೀಪದ ಇಬ್ಬರಿಗೆ ಕರೊನಾ ದೃಢಪಟ್ಟಿದೆ. ಕದಂಬ ನೌಕಾನೆಲೆಗೆ ಆಗಮಿಸಿದ್ದ ಗೋವಾ ಮೂಲದ ಗುತ್ತಿಗೆದಾರನಿಗೆ ಕರೊನಾ ದೃಢಪಟ್ಟಿದೆ. ಇಬ್ಬರೂ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಇದರಿಂದ ನೌಕಾನೆಲೆಗೂ ಕರೊನಾ ಆತಂಕ ಎದುರಾಗಿದೆ.

    ಸ್ಥಳೀಯವಾಗಿ ಚಿಕಿತ್ಸೆಗೆ ವ್ಯವಸ್ಥೆ: ತೀವ್ರ ಸ್ವರೂಪದ ಸೋಂಕಿನ ಲಕ್ಷಣ ಇರುವವರನ್ನು ಮಾತ್ರ ಇನ್ನು ಮುಂದೆ ಕಾರವಾರ ಕ್ರಿಮ್್ಸ ಕರೊನಾ ವಾರ್ಡ್​ಗೆ ಸಾಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಕುಮಟಾ ಹಾಗೂ ಹೊನ್ನಾವರದಲ್ಲಿ ತಲಾ 40 ಹಾಸಿಗೆಗಳ ಕರೊನಾ ವಾರ್ಡ್ ಪ್ರಾರಂಭಿಸಲಾಗಿದೆ. ಶಿರಸಿಯಲ್ಲಿ ಎರಡ್ಮೂರು ದಿನದಲ್ಲಿ ವಾರ್ಡ್ ಸಿದ್ಧವಾಗಲಿದೆ. ಆಯಾ ಭಾಗದ ರೋಗಿಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕಾರವಾರದಲ್ಲೂ 100 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸಿದ್ಧ ಮಾಡಲಾಗಿದ್ದು, ಸೋಂಕು ಲಕ್ಷಣ ಕಡಿಮೆ ಇರುವವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts