More

    22,360 ಮಕ್ಕಳಿಗೆ ಆಹಾರ ಧಾನ್ಯ ವಿತರಣೆ



    ಹೊಳೆಆಲೂರ: ತಾಲೂಕು ವ್ಯಾಪ್ತಿಯ 207 ಶಾಲೆಗಳ 1ರಿಂದ 9ನೇ ತರಗತಿಯ 22,360 ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಮಧ್ಯಾಹ್ನ ಬಿಸಿಯೂಟ ಯೋಜನೆ ಬದಲಾಗಿ ಆಹಾರ ಧಾನ್ಯ ವಿತರಿಸಲಾಯಿತು.

    ಬುಧವಾರ ಹೊಳೆಆಲೂರ ಹೋಬಳಿಯ ಯಚ್ಚರೇಶ್ವರ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಅಕ್ಷರ ದಾಸೋಹದ ಸಮಿತಿಯ ನಿರ್ದೇಶಕ ಬಸವರಾಜ ಅಂಗಡಿ ಮಕ್ಕಳಿಗೆ ಆಹಾರ ಧಾನ್ಯವಿತರಿಸಿ ಅವರು ಮಾತನಾಡಿದರು. ಏ. 10ವರೆಗೆ ಶಾಲಾ ತರಗತಿಗಳು ನಡೆದಿದ್ದರೆ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಸಬೇಕಾಗಿತ್ತು. ಆದರೆ, ಕರೊನಾ ಕಾರಣದಿಂದ ಎಲ್ಲೆಡೆ ಲಾಕ್​ಡೌನ್ ಆಗಿರುವುದರಿಂದ ಮಾ. 14ರಿಂದ ಏಪ್ರಿಲ್ 10 ರ ವರೆಗೆ ಮಕ್ಕಳಿಗೆ ವೆಚ್ಚ ಮಾಡಬೇಕಾದ 21 ದಿನಗಳ ಆಹಾರ ಧಾನ್ಯ ಹಾಗೆ ಉಳಿದಿದ್ದು, ಅದನ್ನು ಅವರಿಗೆ ಹಂಚಿಕೆ ಮಾಡಲು ಸರ್ಕಾರ ಆದೇಶ ಮಾಡಿದೆ. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ಆರೋಗ್ಯ ಕಾಪಾಡುವುದು ಹಾಗೂ ಸಾಮಾಜಿಕ ಕಳಕಳಿಯ ಭಾಗವಾಗಿ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಿದ್ದು, ತಾಲೂಕಿನ ಎಲ್ಲ 207 ಶಾಲೆಗಳ ಮುಖ್ಯೋಪಾಧ್ಯಾಯರು ಎರಡ್ಮೂರು ದಿನಗಳಲ್ಲಿ ಪ್ರತಿಯೊಂದು ಮಕ್ಕಳ ಪಾಲಕರಿಗೆ ಮಾಹಿತಿ ನೀಡಿ ಪ್ರಾಮಾಣಿವಾಗಿ ಸ್ಪಂದಿಸಿ ಈ ಯೋಜನೆ ಯಶಸ್ವಿಗೊಳಿಸಬೇಕು. 1 ರಿಂದ 5ನೇ ತರಗತಿಯ 29 ಕಿರಿಯ ಪ್ರಾಥಮಿಕ ಶಾಲೆಯ 17,718 ಮಕ್ಕಳು, 1 ರಿಂದ 7ನೇ ತರಗತಿಯ 126 ಹಿರಿಯ ಪ್ರಾಥಮಿಕ ಶಾಲೆಯ 10,562 ಮಕ್ಕಳು, 8 ರಿಂದ 10ನೇ ತರಗತಿಯ 52 ಪ್ರೌಢ ಶಾಲೆಯ 680 ಮಕ್ಕಳಿಗೆ ಆಹಾರ ಧಾನ್ಯವನ್ನು ತ್ವರಿತವಾಗಿ ವಿತರಿಸಬೇಕು ಎಂದರು.

    ಸೇವಾ ಪ್ರಜ್ಞೆ ಮೆರೆದ ವೈದ್ಯರು, ನರ್ಸ್​ಗಳು

    ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್​ಗಳು, ಚಾಲಕರು ಇತರೆ ಸಿಬ್ಬಂದಿ ಬುಧವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ಮಾಡುವ ಮೂಲಕ ಸೇವಾ ಪ್ರಜ್ಞೆ ಮೆರೆದರು.

    ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುವವರನ್ನು ಪ್ರತಿ ವರ್ಷ ಮಾ. 31ಕ್ಕೆ ಸೇವೆಯಿಂದ ಬಿಡುಗಡೆಗೊಳಿಸಿ ಮತ್ತೆ ಏಪ್ರಿಲ್ 2ರಿಂದ ಸೇವೆಗೆ ಮರು ನೇಮಕಾತಿ ಮಾಡಿಕೊಳ್ಳುತ್ತ ಬರಲಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿಯೇ 20ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ರಾಷ್ಟ್ರೀಯ ಆರೋಗ್ಯ ಮಿಶನ್ ಅಡಿ ಗುತ್ತಿಗೆ ಆಧಾರದಲ್ಲಿ ಸೇವೆಗೆ ಸೇರಿಕೊಂಡಿದ್ದಾರೆ. ಏ.1 ರಂದು ಇವರು ಸೇವೆಯಿಂದ ಹೊರಗಿದ್ದರೂ ಕರೊನಾ ಮಹಾಮಾರಿಯಿಂದ ಭೀತಿಗೊಳಗಾಗಿರುವ ಜನರ ಮತ್ತು ಆಸ್ಪತ್ರೆಗೆ ಬರುವವರ ಆರೋಗ್ಯ ಕಾಪಾಡಲು ಇಲ್ಲಿನ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಈ ವೇಳೆ ಡಾ.ವಿ.ಎಫ್. ಪಾಟೀಲ, ರವಿಕುಮಾರ ಕೊಪ್ಪದ, ಫಕೀರೇಶ ಜಂತ್ಲಿ, ಈಶ್ವರಯ್ಯ ಹಿರೇಮಠ, ವಿಜಯ ಮಾಂಡ್ರೆ, ವೀರನಗೌಡ ರಾಮನಗೌಡ್ರ, ಆಶಾ ಭಂಡಾರಿ, ಸಂಧ್ಯಾ ಮಲ್ಲಾಪೂರ, ಇಮ್ತಿಯಾಜ್ ಕುಡಚಿ, ಇತರರಿದ್ದರು.

    ನಿಷೇಧಾಜ್ಞೆ 14ರವರೆಗೆ ವಿಸ್ತರಣೆ

    ಗದಗ: ಕರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾದ್ಯಂತ ಕಲಂ 144ರ ಅನ್ವಯ ಜಾರಿಯಲ್ಲಿರುವ ಪ್ರತಿಬಂಧಕಾಜ್ಞೆಯನ್ನು ಏ. 14ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಕರ್ತವ್ಯನಿರತರ, ಅಗತ್ಯ ದಿನಬಳಕೆ ಪೂರೈಕೆ ವಾಹನಗಳ ಹೊರತುಪಡಿಸಿ ಉಳಿದೆಲ್ಲ ವಾಹನಗಳ ರಸ್ತೆ ಸಂಚಾರ ಸಂಪೂರ್ಣ ನಿರ್ಬಂಧಿಸಿದೆ. ಜಿಲ್ಲೆಯ ಎಲ್ಲ ಸಂತೆ ಜಾತ್ರೆಗಳನ್ನು ಮುಂದೂಡಲಾಗಿದ್ದು ಎಲ್ಲ ಶಾಲೆ ಕಾಲೇಜ್​ಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯ ಧಾರ್ವಿುಕ ಕೇಂದ್ರಗಳಲ್ಲಿನ ಜಾತ್ರೆ ಉತ್ಸವಗಳನ್ನು ರದ್ದುಪಡಿಸಲಾಗಿದೆ ಹಾಗೂ ಯಾತ್ರಾ, ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರ ಪ್ರದೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

    ಪೌರಕಾರ್ವಿುಕರಿಗೆ ಆರೋಗ್ಯ ತಿಳಿವಳಿಕೆ

    ಲಕ್ಷ್ಮೇಶ್ವರ: ಪೌರ ಕಾರ್ವಿುಕರು ನಿಮಗೆ ನೀಡಿರುವ ರಕ್ಷಣಾ ಕವಚಗಳನ್ನು ತಪ್ಪದೇ ಧರಿಸುವ ಮೂಲಕ ಕರ್ತವ್ಯ ಪಾಲನೆ ಜತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಹೇಳಿದರು.

    ಕರೊನಾ ವೈರಸ್​ನ ಭೀತಿಯ ನಡುವೆಯೂ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ವಿುಕರಿಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಬುಧವಾರ ಪುರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲಸದ ಸಂದರ್ಭದಲ್ಲಿ ಕಸವನ್ನು ಬರಿಗೈಯಿಂದ ಮುಟ್ಟದೇ ಸುರಕ್ಷಾ ಕವಚಗಳನ್ನು ಕಡ್ಡಾಯವಾಗಿ ಬಳಸಬೇಕು. ಮಾಸ್ಕ್ ಬಳಸಿದ್ದರೂ ಗುಂಪಾಗಿ ಕೆಲಸ ನಿರ್ವಹಿಸಬೇಡಿ. ಕೆಲಸದ ನಂತರ ಮನೆಗೆ ಹೋದ ಮೇಲೆ ಸ್ಯಾನಿಟೈಸರ್​ನಿಂದ ಸ್ವಚ್ಛವಾಗಿ ಕೈತೊಳೆದುಕೊಂಡು ಸ್ನಾನ ಮಾಡಬೇಕು ಎಂದರು.

    ಈ ವೇಳೆ ಆರೋಗ್ಯ ನಿರೀಕ್ಷಕರಾದ ಆನಂದ ಬದಿ, ಮಂಜುನಾಥ ಮುದಗಲ್, ಆರ್​ಒ ಬಸವರಾಜ ಬಳಗಾನೂರ, ಅನ್ನಪೂರ್ಣ ಹೂಗಾರ, ಪೌರ ಕಾರ್ವಿುಕ ಮುಖಂಡ ಬಸವಣ್ಣೆಪ್ಪ ನಂದೆಣ್ಣವರ, ಪರಶು ಪಶುಪತಿಹಾಳ, ದೇವಪ್ಪ ನಂದೆಣ್ಣವರ ಇತರರಿದ್ದರು.

    ಹೊಳೆಆಲೂರ ನಿವಾಸಿಗಳಿಗೆ ಮಾಸ್ಕ್ ವಿತರಣೆ

    ಹೊಳೆಆಲೂರ: ಗ್ರಾಮದ ವಿವಿಧ ವಾರ್ಡ್​ಗಳಲ್ಲಿ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಬುಧವಾರ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಿವಾಸಿಗಳಿಗೆ ಮಾಸ್ಕ್ ವಿತರಿಸಿದರು. ಗೌರಿಮಠ ಓಣಿ, ಸರ್ಕಾರಿ ಆಸ್ಪತ್ರೆಯ ಕಾಲನಿ, ಬಜಾರ ರಸ್ತೆ, ಸಿದ್ಧರಾಮೇಶ್ವರ ನಗರ, ರೈಲು ನಿಲ್ದಾಣ ರಸ್ತೆಯ ಮನೆಗಳ 500 ವೃದ್ಧರಿಗೆ ಸಾಮಾಜಿಕ ಕಾರ್ಯಕರ್ತ ಪ್ರವೀಣ ಶಲ್ಲಿಕೇರಿ ಮಾಸ್ಕ್ ವಿತರಿಸಿದರು. ಗ್ರಾಪಂ ಸದಸ್ಯ ಸುರೇಶ ಗಾಣಿಗೇರ ತಮ್ಮ 2ನೇ ವಾರ್ಡ್​ನ ಎಲ್ಲ ಮನೆಗಳಿಗೆ ತಲಾ ಎರಡು ಮಾಸ್ಕ್ ವಿತರಿಸಿದರು. ಬಿಜೆಪಿ ಹೊಳೆಆಲೂರ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ ಹಳೇ ಬಸ್ ನಿಲ್ದಾಣದ ಏರಿಯಾ, ಬೆನಹಾಳ, ಆಲೂರ ವೆಂಕಟರಾವ್ ವೃತ್ತದ ವಿವಿಧ ಮನೆಗಳಿಗೆ ಮಾಸ್ಕ್ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts