More

    22ರಂದು ಪಂಚಶಕ್ತಿ ವಿರಾಟ ಸಮಾವೇಶ

    ಬೆಳಗಾವಿ: ವಿಧಾನಮಂಡಲ ಅಧಿವೇಶನ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಡಿ.22ರಂದು ಸುವರ್ಣ ವಿಧಾನಸೌಧ ಮುಂದೆ ಪಂಚಶಕ್ತಿ ವಿರಾಟ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದ ಗಾಂಧಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಚಮಸಾಲಿ ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರ ಮಾತ್ರ ಭರವಸೆ ಮೂಲಕ ದಿನ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಟ್ಟ ಮಾತಿನಂತೆ ಡಿ.19ರ ಒಳಗಾಗಿ ಮೀಸಲಾತಿ ಘೋಷಣೆ ಮಾಡಬೇಕು. ಮಾಡಿದರೆ ಡಿ.22ರಂದು ವಿರಾಟ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನ ಮಾಡ್ತಿವಿ. ಮೀಸಲಾತಿ ಘೋಷಣೆ ಮಾಡದಿದ್ದರೆ ಪಂಚಮಸಾಲಿ ಸಮಾಜದ ಶಕ್ತಿ ಪ್ರದೇಶನ ಮಾಡ್ತಿವಿ ಎಂದರು.

    ಸವದತ್ತಿಯಿಂದ ಬೆಳವಡಿ, ಕಿತ್ತೂರು, ಹಿರೇಬಾಗೇವಾಡಿಯಲ್ಲಿ ಪಾದಯಾತ್ರೆ ನಡೆಯಲಿದೆ. ಡಿ.22 ರಂದು ಪಾದಯಾತ್ರೆ ಹಿರೇಬಾಗೇವಾಡಿಯಿಂದ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನಾ ವೇದಿಕೆಗೆ ಬಂದು ತಲುಪಲಿದೆ. ರಾಜ್ಯದ ವಿವಿಧ ಭಾಗಗಳಿಂದ 25 ಲಕ್ಷ ಜನರು ವಿರಾಟ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮೀಸಲಾತಿ ಕೊಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ಗುಜರಾತನ ಪಟೇಲ್ ಸಮುದಾಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಡಿ.22ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಮುಂದೆ 25 ಲಕ್ಷ ಪಂಚಮಸಾಲಿಗರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡೋಣ. ಅಂತಿಮ ಘಟ್ಟಕ್ಕೆ ನಮ್ಮ ಹೋರಾಟ ಬಂದಿದೆ.

    ನಮ್ಮಲ್ಲಿ ಯಾವುದೇ ಡೆಡ್‌ಲೈನ್, ಲೈಫ್‌ಲೈನ್ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ 2ಎ ಮೀಸಲಾತಿ ಕೊಡುತ್ತೇನೆ ಎಂದು ಹೇಳಿ ಇದೀಗ ಸುಮ್ಮನಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ. ಮೀಸಲಾತಿ ಸಿಕ್ಕ ತಕ್ಷಣ ಶ್ರೀಗಳಿಗೆ ಕೂಡಲಸಂಗಮದಲ್ಲಿ ಮಠ ಕಟ್ಟಲು 1 ಕೋಟಿ ರೂ. ಕೊಡುತ್ತೇನೆ. ತುಮಕೂರಿನ ಸಿದ್ಧಗಂಗಾ ಮಠದ ಮಾದರಿಯಲ್ಲಿ ಮಠ ಕಟ್ಟುತ್ತೇನೆ. ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದರು. ಶಾಸಕರಾದ ಮಹಾಂತೇಶ ದೊಡಗೌಡರ, ಮಾಜಿ ಸಚಿವರಾದ ಎ.ಬಿ ಪಾಟೀಲ, ಶಶಿಕಾಂತ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts