More

    21ನೇ ಸಂಗೀತೋತ್ಸವ ಸಂಪನ್ನ

    ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 21ನೇ ಸಂಗೀತೋತ್ಸವ ಭಾನುವಾರ ವಿದ್ವಾನ್ ಅಭಿಷೇಕರ್ ರಘುರಾಮ್ ಗಾಯನದೊಂದಿಗೆ ಸಂಪನ್ನಗೊಂಡಿತು.

    ವಿದ್ವಾನ್ ಡಾ.ಆರ್.ಕೆ. ಪದ್ಮನಾಭ ಅವರ ನೇತೃತ್ವದಲ್ಲಿ ಐದು ದಿನಗಳ ಕಾಲ ವಿವಿಧ ಕಲಾವಿದರು ಸಂಗೀತ ಕಛೇರಿ ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಸೂರೆಗೊಂಡರು.

    ಕಡೇ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನ ಕಚೇರಿ ನಡೆಸಿಕೊಟ್ಟ ವಿದ್ವಾನ್ ಅಭಿಷೇಕ್ ರಘುರಾಮ್ ಅವರು ದರ್ಬಾರ್ ರಾಗದ ವರ್ಣದಿಂದ ಪ್ರಾರಂಭಿಸಿ ಎರಡೂವರೆ ತಾಸು ನಿರಂತರವಾಗಿ ನುಡಿಸಿದ ಗಾಯನಕ್ಕೆ ಸಂಗೀತ ಪ್ರಿಯರ ಮನ ಮಿಡಿಯಿತು.

    ಮುತ್ತುಸ್ವಾಮಿ ದೀಕ್ಷಿತರ ಸೂರ್ಯ ಮೂರ್ತೆ ಕೃತಿಯನ್ನು ಸೌರಾಷ್ಟ್ರ ರಾಗದಲ್ಲಿ, ಬೇಗಡೆ ರಾಗದ ತ್ಯಾಗರಾಜರ ರಚನೆಯ ತನವರಿ ತನಮೋ, ಮತ್ತೊಂದು ತ್ಯಾಗರಾಜರ ತೋಡಿ ರಾಗದ ಕೃತಿ ನೀನುವಿನ, ಗರುಡ ಧ್ವನಿ ರಾಗದ ತ್ಯಾಗರಾಜರ ಆನಂದ ಸಾಗರ, ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ, ಮದ್ಯಮಾವತಿ ರಾಗದ ಪಾಪ ನಾಶನಂ ಶಿವಂ ಅವರ ಕರ್ಪಗಮೆ ಕೃತಿಗಳ ನಾದ ಸುಧೆಗೆ ಪ್ರೇಕ್ಷಕರು ತಲೆದೂಗಿದರು.

    ವಿದ್ವಾನ್ ಮೈಸೂರು ಕಾರ್ತಿಕ್ ವಯೋಲಿನ್ ನುಡಿಸಿ ಚಪ್ಪಾಳೆ ಗಿಟ್ಟಿಸಿದರು. ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ ಹಾಗೂ ವಿದ್ವಾನ್ ಸುನಾದ್ ಆನೂರ್ ಖಂಜರಿ ನುಡಿಸಿ ರಾಗಸುಧೆ ಹರಿಸಿ ಸಂಗೀತಾಭಿಮಾನಿಗಳಿಗೆ ರಸದೌತಣ ಉಣಬಡಿಸಿದರು.

    ಸಪ್ತಸ್ವರ ಮಂದಿರ ಆಕರ್ಷಣೆ: ಸಂಗೀತೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಅಪಾರ ಜನರು ಮುಗಿಲೆತ್ತರಕ್ಕೆ ಮುಖಮಾಡಿರುವ ತಂಬೂರಿಯಾಕಾರದ ಸಪ್ತಸ್ವರ ದೇವತಾ ಧ್ಯಾನ ಮಂದಿರ ಹಾಗೂ ದ್ವಾದಶ ಸಪ್ತಸ್ವರ ಮಂದಿರವನ್ನು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts