More

    216 ಕ್ವಿಂ. ಅನ್ನಭಾಗ್ಯ ಅಕ್ಕಿ ವಶಕ್ಕೆ

    ಗದಗ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮುಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂರು ದಿನಗಳ ಅವಧಿಯಲ್ಲಿ ಲಕ್ಷಾಂತರ ರೂ.ಮೌಲ್ಯದ 216 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ಅಬ್ಬಿಗೇರಿ ಕಾಂಪೌಂಡ್​ನಲ್ಲಿರುವ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಂದಾಜು 90 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಸೋಮವಾರ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಆದರೆ, ಗೋದಾಮಿನಲ್ಲಿ ಅಕ್ಕಿ ದಾಸ್ತಾನು ಮಾಡಿದ್ದು ಯಾರು ಎಂಬುದು ತಿಳಿದುಬಂದಿಲ್ಲ. ಈ ಕುರಿತು ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡು ಗೋದಾಮು ಸೀಜ್ ಮಾಡಲಾಗಿದೆ.

    ನಗರದ ಹುಬ್ಬಳ್ಳಿ ರಸ್ತೆ ಕೈಗಾರಿಕೆ ಪ್ರದೇಶದಲ್ಲಿರುವ ನಾಗರಾಜ ಚನ್ನಬಸಪ್ಪ ಮುರಗಿ ಎಂಬುವರ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 2,79 ಲಕ್ಷ ರೂ. ಮೌಲ್ಯದ 126 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಅಕ್ರಮ ದಂಧೆಗೆ ಬಳಕೆ ಮಾಡುತ್ತಿದ್ದ ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದು, ವಾಹನ ಚಾಲಕ ಗದಗ ತಾಲೂಕಿನ ಕಣವಿಹೊಸೂರ ಗ್ರಾಮದ ಸಿದ್ದಲಿಂಗಯ್ಯ ಪ್ರಭಯ್ಯ ಮರಿಅಯ್ಯನವರ, ವಾಹನದ ಮಾಲೀಕ ಕಣವಿಹೊಸೂರ ಗ್ರಾಮದ ನಾಗರಾಜ , ಗೋದಾಮಿನ ಮಾಲೀಕ ನಾಗರಾಜ ಚನ್ನಬಸಪ್ಪ ಮುರಗಿ, ಪ್ರಮೋದ ಪ್ರಕಾಶ ಮಾನೇದ ಮತ್ತು ಶ್ರೀಧರ ಈರಣ್ಣ ವಜ್ರಬಂಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಮೃದುಧೋರಣೆ ಏಕೆ?: ಕಳೆದ ನವೆಂಬರ್​ನಲ್ಲಿ ಬೆಟಗೇರಿಯ ಮಜಗಿ ಓಣಿಯಲ್ಲಿರುವ ಗೋದಾಮಿನಲ್ಲಿ 50 ಕ್ವಿಂಟಾಲ್​ಗೂ ಅಧಿಕ ಅನ್ನಭಾಗ್ಯದ ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಲಾಗಿತ್ತು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡು ಗೋದಾಮು ಸೀಜ್ ಮಾಡಿದರು. ಆ ಪ್ರಕರಣ ಏನಾಯಿತು? ಅದರಲ್ಲಿ ಭಾಗಿಯಾಗಿದ್ದವರು ಯಾರು ಎಂಬುದು ಗೊತ್ತೇ ಆಗಲಿಲ್ಲ. ದಂಧೆಕೋರರು ಯಾರು ಎಂಬುದು ಪೊಲೀಸರಿಗೆ ಗೊತ್ತಿದ್ದರೂ ಮೃದುಧೋರಣೆ ತಾಳುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

    ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಮಾಹಿತಿ ಸಿಕ್ಕ ನಂತರ ಎರಡು ಗೋದಾಮುಗಳ ಮೇಲೆ ದಾಳಿ ಮಾಡಿ ಸುಮಾರು 200 ಕ್ವಿಂಟಾಲ್​ಗೂ ಅಧಿಕ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿ ರಸ್ತೆಯ ಕೈಗಾರಿಕೆ ಪ್ರದೇಶದಲ್ಲಿ ಅಕ್ಕಿ ದಾಸ್ತಾನು ಮಾಡಿದವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಬ್ಬಿಗೇರಿ ಕಾಂಪೌಂಡ್​ನಲ್ಲಿನ ಗೋದಾಮಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದ್ದು, ಕೂಡಲೇ ಎಫ್​ಐಆರ್ ದಾಖಲಿಸಲಾಗುವುದು.
    | ವಿನೋದಕುಮಾರ ಹೆಗ್ಗಳಿಗೆ, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts