More

    ಲಾಕ್​ಡೌನ್​ ಅವಧಿ ವಿಸ್ತರಣೆಯಾಗಲಿದೆ ಎಂಬ ವರದಿ, ವದಂತಿಗಳಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ; ಏ.14ರ ನಂತರ ಮುಂದುವರಿಸುವ ಯೋಜನೆ ಇಲ್ಲ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾ.24ರಿಂದ 21 ದಿನಗಳವರೆಗೆ ಇಡೀ ಭಾರತ ಲಾಕ್​ಡೌನ್​ ಆಗಲಿದೆ. ಕರೊನಾ ವೈರಸ್​ ನಿಯಂತ್ರಣಕ್ಕೆ ಇದೊಂದೇ ದಾರಿ ಎಂದು ತಿಳಿಸಿದರು. ಹಾಗೇ ಮಾ.25ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ, ಲಾಕ್​ಡೌನ್​ ಸಮಯದಲ್ಲಿ ಜನಸಾಮಾನ್ಯರ ಜೀವನಕ್ಕೆ ಅನುಕೂಲವಾಗುವಂತೆ ಮೂರು ತಿಂಗಳ ಆರ್ಥಿಕ ನೆರವಿನ ಪ್ಯಾಕೇಜ್​​ ಘೋಷಿಸಿದರು.

    ಲಾಕ್​ಡೌನ್​ ಪ್ರಾರಂಭವಾಗಿ ಆರು ದಿನವಾದರೂ ಅದಕ್ಕೊಂದು ಸ್ಪಷ್ಟನೆ ಸಿಗುತ್ತಿಲ್ಲ. ಈ ಮಧ್ಯೆ ರೂಮರ್​​ಗಳು ಶುರುವಾಗಿವೆ. ಈ ಲಾಕ್​ಡೌನ್​ 21ದಿನಕ್ಕೆ ಮುಗಿಯುವುದಿಲ್ಲ. ಇದನ್ನು ಕೇಂದ್ರ ಸರ್ಕಾರ ಖಂಡಿತ ಮುಂದುವರಿಸುತ್ತದೆ. ಏಪ್ರಿಲ್​ 14ರಂದು ಲಾಕ್​ಡೌನ್​ ಮಗಿಯುತ್ತದೆ ಎಂದು ಯಾರೂ ಭಾವಿಸಬೇಡಿ. ಮೂರು ತಿಂಗಳ ಆರ್ಥಿಕ ನೆರವಿನ ಪ್ಯಾಕೇಜ್​ ನೀಡಿದೆ ಎಂದರೆ ನಿಶ್ಚಿತವಾಗಿ ಲಾಕ್​ಡೌನ್​ ಅವಧಿ ವಿಸ್ತಾರವಾಗುತ್ತದೆ ಎಂದೇ ಅರ್ಥ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಅಷ್ಟೇ ಅಲ್ಲ, ಕೆಲವು ಪ್ರಮುಖ ಸುದ್ದಿ ಮಾಧ್ಯಮಗಳೂ ಹೀಗೇ ವಿಶ್ಲೇಷಣೆ ಮಾಡಿದ್ದವು. ಜನಸಾಮಾನ್ಯರೂ ಸಹ ಇದನ್ನೇ ನಂಬಿಕೊಂಡಿದ್ದರು. ಆದರೆ….

    ಕೇಂದ್ರ ಸರ್ಕಾರವೇ ಈಗ ಸ್ಪಷ್ಟನೆ ನೀಡಿದೆ. ಲಾಕ್​ಡೌನ್​ 21 ದಿನಕ್ಕೇ ಸೀಮಿತವಲ್ಲ. ಅವಧಿ ವಿಸ್ತರಣೆಯಾಗುತ್ತದೆ ಎಂದು ಹರಡುತ್ತಿರುವ ವದಂತಿಗಳು, ಮಾಧ್ಯಮಗಳ ವರದಿಗಳು ಆಧಾರರಹಿತವಾಗಿವೆ. ಹಾಗಾಗಿ ಯಾರೂ ಅದನ್ನು ನಂಬಬೇಡಿ ಎಂದು ಹೇಳಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮಾಧ್ಯಮ ಸಂಸ್ಥೆಯಾಗಿರುವ ಪ್ರೆಸ್​ ಇನ್​ಫಾರ್ಮೇಶನ್​ ಬ್ಯೂರೋ ಟ್ವೀಟ್​ ಮಾಡಿ ಸ್ಪಷ್ಟಪಡಿಸಿದೆ.

    ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್​ ಗೌಬಾ ಅವರೂ ಸಹ ಲಾಕ್​ಡೌನ್​ ಅವಧಿ ವಿಸ್ತರಣೆಯಾಗಲಿದೆ ಎಂಬ ವರದಿಯನ್ನು ತಳ್ಳಿ ಹಾಕಿದ್ದಾರೆ. ಇಂತಹ ರೂಮರ್​, ರಿಪೋರ್ಟ್​ಗಳನ್ನು ನೋಡಿ ನನಗೂ ಆಶ್ಚರ್ಯವಾಯಿತು. ಏ.14ರ ನಂತರ ಲಾಕ್​ಡೌನ್​ ಮುಂದುವರಿಸುವ ಯಾವುದೇ ಯೋಜನೆಯೂ ಇಲ್ಲ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts