More

    21 ಕೋಟಿ ವ್ಯಯವಾದರೂ ಸದ್ಬಳಕೆ ಅನುಮಾನ

    ಹುಬ್ಬಳ್ಳಿ: ನಗರದ ನೆಹರು ಮೈದಾನ ನವೀಕರಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 21 ಕೋಟಿ ರೂ. ಖರ್ಚು ಮಾಡುತ್ತಿದ್ದರೂ ಅಥ್ಲಿಟ್​ಗಳಿಗೆ ಅನುಕೂಲವಾಗುವ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುತ್ತಿಲ್ಲ. ರಾಜಕೀಯ, ಸಾಂಸ್ಕೃತಿಕ ಸೇರಿ ಎಲ್ಲ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದು ಕ್ರೀಡಾಪಟುಗಳಿಗೆ ಬೇಸರ ತರಿಸಿದೆ.

    ಅಥ್ಲೆಟಿಕ್ ಟ್ರ್ಯಾಕ್​ನಲ್ಲಿ ಸಿಂಥೆಟಿಕ್ ಹೊದಿಕೆ ಹಾಕಿದರೆ ಕ್ರೀಡೇತರ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ಹೇರಬೇಕಾಗುತ್ತದೆ. ಆಗ ನೆಹರು ಮೈದಾನ ವಿಶೇಷವಾದ ಸ್ಪೋರ್ಟ್ಸ್ ಸೆಂಟರ್ ಆಗುತ್ತಿತ್ತು. ಕೆಲವರಿಗೆ ಇದು ಇಷ್ಟವಿಲ್ಲ ಎಂಬುದು ಸ್ಪಷ್ಟ.

    ‘ಸಿಂಥೆಟಿಕ್ ಟ್ರ್ಯಾಕ್​ನಲ್ಲಿ ಓಟಗಾರರು ಸ್ಪೈಕ್ (ಶೂ) ಹಾಕಿ ಓಡಬೇಕು. ಮಣ್ಣಿನ ಅಂಕಣದಲ್ಲಿ ಸ್ಪೈಕ್ ಹಾಕಿ ಓಡಲು ಬರುವುದಿಲ್ಲ. ಸ್ಪೈಕ್ ಶೂ ಓಟಕ್ಕೆ ಹೆಚ್ಚಿನ ವೇಗವನ್ನು ಕೊಡುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ಗಳು ಸಿಂಥೆಟಿಕ್ ಟ್ರ್ಯಾಕ್​ನಲ್ಲಿಯೇ ನಡೆಯುತ್ತದೆ. ಹಾಗಾಗಿ ಭವಿಷ್ಯದ ಅಥ್ಲಿಟ್​ಗಳನ್ನು ತಯಾರಿಸಬೇಕಾದರೆ ಸಿಂಥೆಟಿಕ್ ಟ್ರ್ಯಾಕ್ ಅನಿವಾರ್ಯ. ಮೈದಾನವೊಂದು ಕ್ರೀಡಾ ಪ್ರತಿಭೆಗಳ ಆಸ್ತಿಯಾಗಬೇಕು. ಸಾರ್ವಜನಿಕ ಆಸ್ತಿಯಾಗಬಾರದು’ ಎಂಬುದು ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರ ಅಭಿಪ್ರಾಯವಾಗಿದೆ.

    ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್​ಎಐ) ನಡೆಸುವ ಕೆಲವು ಕ್ರೀಡಾ ವಸತಿ ನಿಲಯಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್​ನಲ್ಲಿಯೇ ತರಬೇತಿ ನೀಡಲಾಗುತ್ತದೆ. ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದೆ. ಹೀಗಿರುವಾಗ, 21 ಕೋಟಿ ರೂ. ಖರ್ಚು ಮಾಡಿಯೂ ಹುಬ್ಬಳ್ಳಿ ನೆಹರು ಮೈದಾನಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸದಿದ್ದರೆ ಹೇಗೆ ಎಂಬುದು ಅಥ್ಲಿ್ಲ್ಗಳ ಪ್ರಶ್ನೆಯಾಗಿದೆ.

    ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಲು ನಗರದ ಮಧ್ಯವರ್ತಿ ಸ್ಥಳದಲ್ಲಿ ಇಷ್ಟು ವಿಶಾಲವಾದ ಹಾಗೂ ಸುರಕ್ಷಿತವಾದ ಸ್ಥಳ ಬೇರೊಂದಿಲ್ಲ. ಕ್ರೀಡೆಯ ವಿಷಯದಲ್ಲೂ ಇದೇ ಅಭಿಪ್ರಾಯ ಅನ್ವಯಿಸುತ್ತದೆ. ನಗರದ ಶಾಲಾ-ಕಾಲೇಜಿನ ಕ್ರೀಡಾ ಪ್ರತಿಭೆಗಳಿಗೆ ತರಬೇತಿ ಪಡೆಯಲು ಹತ್ತಿರವಾದ, ಸೂಕ್ತವಾದ ಸ್ಥಳವೂ ಆಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ನೆಹರು ಮೈದಾನ ಕ್ರೀಡಾ ತಾಣವಾಗಿ ಬೆಳಯಬೇಕು ಎಂದು ಕ್ರೀಡಾಪಟುಗಳು ಬಯಸುತ್ತಾರೆ.

    ಸ್ಮಾರ್ಟ್ ಸಿಟಿ ಅನುದಾನದಲ್ಲಿ ನೆಹರು ಮೈದಾನ ನವೀಕರಣಗೊಂಡ ಮೇಲೂ ಮೈದಾನದ ಮಧ್ಯಭಾಗದಲ್ಲಿ ವೇದಿಕೆ ನಿರ್ವಿುಸಿ ಶಾಮಿಯಾನ ಹಾಕಿ ಸಾರ್ವಜನಿಕ ಕಾರ್ಯಕ್ರಮ ನಡೆಸಬಹುದು. ಸಾರ್ವಜನಿಕರು ಕುಳಿತುಕೊಳ್ಳಲು ಖುರ್ಚಿ ಹಾಕಬಹುದು. ಗ್ಯಾಲರಿಯಲ್ಲೂ ಕುಳಿತ ವೀಕ್ಷಿಸಬಹುದಾಗಿದೆ. ಈ ಕಾರಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.

    ಹೊರಾಂಗಣ ಕ್ರೀಡೆಗಳಾದ ಫುಟಬಾಲ್, ವಾಲಿಬಾಲ್, ಬಾಸ್ಕೆಟ್​ಬಾಲ್, ಅಥ್ಲೆಟಿಕ್ಸ್ ಟ್ರ್ಯಾಕ್, ಔಟ್​ಡೋರ್ ಜಿಮ್ ಔಟ್​ಡೋರ್ ಕಬಡ್ಡಿ ಅಂಕಣಗಳನ್ನು ಕ್ರೀಡಾಸಕ್ತರು ಉಚಿತವಾಗಿ ಅಭ್ಯಾಸಕ್ಕೆ ಬಳಸಿಕೊಳ್ಳಬಹುದು. ಆದರೆ, ಒಳಾಂಗಣ ಕ್ರೀಡೆಗಳಾದ ಮ್ಯಾಟ್ ಕಬಡ್ಡಿ, ಮ್ಯಾಟ್ ಕುಸ್ತಿ, ಕರಾಟೆ, ಬ್ಯಾಡ್ಮಿಂಟನ್, ಚೆಸ್, ಕೇರಂ ಪ್ರ್ಯಾಕ್ಟಿಸ್ ಮಾಡಲು ಜಿಲ್ಲಾಧಿಕಾರಿ ಕಾರ್ಯಾಧ್ಯಕ್ಷರಾಗಿರುವ ಸ್ಮಾರ್ಟ್ ಸಿಟಿಯು ಆಸ್ತಿ ನಿರ್ವಹಣಾ ಸಮಿತಿ ಶುಲ್ಕ, ಬಾಡಿಗೆ ನಿಗದಿಪಡಿಸಲಿದೆ. ಒಳಾಂಗಣ ಕ್ರೀಡಾ ವ್ಯವಸ್ಥೆಯ ನಿರ್ವಹಣೆಯನ್ನು ಹೊರ ಗುತ್ತಿಗೆ ನೀಡುವ ಸಾಧ್ಯತೆಗಳೂ ಇವೆ.

    2009-10ರಲ್ಲಿ 70 ಲಕ್ಷ ರೂ.

    ನೆಹರು ಮೈದಾನ ನವೀಕರಣಕ್ಕೆ 2009-10ರಲ್ಲಿ 70 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಮೈದಾನದಲ್ಲಿ ಅಲ್ಲಲ್ಲಿ ನೀರು ನಿಲ್ಲುತ್ತಿದ್ದ ಜಾಗವನ್ನು ಮಣ್ಣು ಹಾಕಿ ಎತ್ತರಿಸಲು, ಸುತ್ತಲೂ ಗಟಾರ, ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಶೌಚಗೃಹ ನಿರ್ವಣಕ್ಕೆ ಈ ಮೊತ್ತವನ್ನು ವ್ಯಯಿಸಲಾಗಿತ್ತು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ 50 ಲಕ್ಷ ರೂ. ಹಾಗೂ ಹು-ಧಾ ಮಹಾನಗರ ಪಾಲಿಕೆ 20 ಲಕ್ಷ ರೂ. ನೀಡಿತ್ತು. ಆದರೆ, ಇದರ ಸದ್ಬಳಕೆ ಆಗಿಲ್ಲ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಾರೆ.

    ನೆಹರು ಮೈದಾನ ನವೀಕರಣಗೊಂಡ ಬಳಿಕ ಹೊರಾಂಗಣ ಕ್ರೀಡಾ ಸೌಲಭ್ಯಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಒಳಾಂಗಣ ಕ್ರೀಡಾ ಸೌಲಭ್ಯಗಳ ನಿರ್ವಹಣೆ ವೆಚ್ಚ ಅಧಿಕವಾಗಿರುವುದರಿಂದ ಶುಲ್ಕ, ಬಾಡಿಗೆ ನಿಗದಿಪಡಿಸುವುದು ಅನಿವಾರ್ಯವಾಗಲಿದೆ.
    ಎಸ್.ಎಚ್.ನರೇಗಲ್, ವಿಶೇಷಾಧಿಕಾರಿ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts