More

    ಜ.8ರಂದು 20ನೇ ಚಿತ್ರಸಂತೆ: 1,500 ಕಲಾವಿದರು ಭಾಗಿ, 5 ಲಕ್ಷ ಜನ ಭೇಟಿ ನಿರೀಕ್ಷೆ

    ಬೆಂಗಳೂರು: ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಜ.8ರಂದು ಕುಮಾರಕೃಪಾ ರಸ್ತೆಯಲ್ಲಿ ’20ನೇ ಚಿತ್ರಸಂತೆ’ ಹಮ್ಮಿಕೊಂಡಿದ್ದು, ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದೆ.

    ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರದರ್ಶನ ನೀಡಲಾಗದೆ ಚಿತ್ರಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ಈ ವರ್ಷ ಚಿತ್ರಸಂತೆಯನ್ನು ಅದ್ದೂರಿಯಾಗಿ ನಡೆಸುವುದರ ಮೂಲಕ ಈ ಬಾರಿಯ ಚಿತ್ರಸಂತೆಯನ್ನು ‘ಕಲಾವಿದರಿಗೆ ಅರ್ಪಣೆ’ ಮಾಡಲಾಗುತ್ತಿದೆ. ಕಲಾವಿದರೂ ಹೊಸ ಹೊಸ ಪ್ರಯೋಗಗಳೊಂದಿಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ ಎಂದು ಪರಿಷತ್ತು ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪರಿಷತ್ತಿನ ಆವರಣದಲ್ಲಿ ಜ.8ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕಲಾ ಪ್ರದರ್ಶನವನ್ನು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದು, ಸಚಿವರಾದ ಆರ್.ಅಶೋಕ್, ಅರಗ ಜ್ಞಾನೇಂದ್ರ, ಎಸ್.ಟಿ.ಸೋಮಶೇಖರ್, ವಿ.ಸುನೀಲ್ ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಆಯ್ದ ಕಲಾವಿದರ ಕಲಾಕೃತಿಗಳು ಪರಿಷತ್ತಿನ ಗ್ಯಾಲರಿಗಳಲ್ಲಿ ಪ್ರದರ್ಶನಗೊಳ್ಳಲಿವೆ. ಹಿರಿಯ ಕಲಾವಿದರು ಹಾಗೂ ವಿಶೇಷ ಚೇತನರಿಗೆ ಪರಿಷತ್ತಿನ ಆವರಣದಲ್ಲಿಯೇ ಮಳಿಗೆಗಳ ವ್ಯವಸ್ಥೆ ಕಲ್ಪಿಸಲಾಗುವುದು. ಹೊರಗಿನಿಂದ ಬರುವ 400ಕ್ಕೂ ಅಧಿಕ ಕಲಾವಿದರಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದೆ. ಆವರಣದ ಹೊರಗೆ ಕೆನರಾ ಬ್ಯಾಂಕ್ ಹಾಗೂ ಎಸ್‌ಬಿಐ ಬ್ಯಾಂಕ್‌ನ ಸಂಚಾರಿ ಎಟಿಎಂ ಮತ್ತು ಸ್ವೈಪಿಂಗ್ ಯಂತ್ರಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

    ಹಲವು ಬಗೆಯ ಕಲಾಕೃತಿಗಳು: ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್, ಲಿಥೋಗ್ರಫಿ, ಡೂಡಲ್, ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ, ಶಿಲ್ಪ ಕಲೆ, ಪ್ರತಿಷ್ಠಾಪನಾ ಕಲೆ, ರ್ಪಾರ್ಮೆನ್ಸ್ ಕಲೆ, ಮಿಶ್ರ ಮಾಧ್ಯಮ, ಫೋಟೋಗ್ರಫಿ.. ಹೀಗೆ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳು ಒಂದೇ ಸೂರಿನಡಿ ನೋಡುಗರ ಗಮನ ಸೆಳೆಯಲಿವೆ ಎಂದರು.

    5 ಲಕ್ಷ ಜನರ ಭೇಟಿ ನಿರೀಕ್ಷೆ: ಕಳೆದ ವರ್ಷ 4 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಈ ಬಾರಿ 5 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಸಂತೆಯಲ್ಲಿ 100ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಖರೀದಿಸಬಹುದು. ಭದ್ರತೆಗಾಗಿ ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಹಿಂದಿನ ವರ್ಷದಂತೆ ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್‌ವರೆಗೆ, ಕುಮಾರ ಕೃಪಾ ರಸ್ತೆ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

    ಪ್ರೊ.ಎಂ.ಎಸ್.ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ: ಚಿತ್ರಸಂತೆ ಅಂಗವಾಗಿ ನೀಡಲಾಗುವ ಪ್ರೊ.ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿಗೆ ಪ್ರೊ.ಕೆ.ಲಕ್ಷ್ಮಗೌಡ್ ಭಾಜನರಾಗಿದ್ದಾರೆ. ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಇದೇ ವೇಳೆ ನಾಲ್ವರು ಕಲಾವಿದರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದ್ದು, ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿಗೆ ಮಾರ್ಥ ಯಾಕಿಮೋವಿಜ್, ಡಿ.ದೇವರಾಜ ಅರಸು ಪ್ರಶಸ್ತಿಗೆ ಶಾಂತಾಮಣಿ ಮುದ್ದಯ್ಯ, ವೈ.ಸುಬ್ರಹ್ಮಣ್ಯರಾಜು ಪ್ರಶಸ್ತಿಗೆ ಕೆ. ವಿಠ್ಠಲ್ ಭಂಡಾರಿ ಹಾಗೂ ಎಂ.ಆರ್ಯಮೂರ್ತಿ ಪ್ರಶಸ್ತಿಗೆ ಪ್ರೊ. ರಜನಿ ಪ್ರಸನ್ನ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 50 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿವೆ. ಜ. 7ರಂದು ಸಂಜೆ 4.30ಕ್ಕೆ ಪರಿಷತ್ತಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರು ವಿವಿ ಕುಲಪತಿ ಪ್ರೊ.ಡಾ. ಎಸ್.ಎಂ. ಜಯಕರ್ ಇತರರು ಭಾಗವಹಿಸಲಿದ್ದಾರೆ.

    ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

    ಇವನ ಹಣೆಬರಹ ನೋಡಿ; ಈಗ ಪಶ್ಚಾತ್ತಾಪ ಕಾಡ್ತಿದೆಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts