More

    ಮಾಸ್ಕ್ ಧರಿಸದಿದ್ದರೆ 200 ರೂ. ದಂಡ

    ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಹೆಚ್ಚಳವಾಗುತ್ತಿದೆ. ಕೋವಿಡ್ ಸೋಂಕಿನ ನಿಯಂತ್ರಣ, ಚಿಕಿತ್ಸೆಗೆ ವೈದ್ಯಕೀಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಸೋಂಕು ಹರಡದಂತೆ ಸಾರ್ವಜನಿಕರು ಸರ್ಕಾರದ ಕೋವಿಡ್ ನಿಯಮಗಳನ್ನು ಸ್ವಯಂ ಪ್ರೇರಣೆಯಿಂದ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಪ್ರಕ್ರಿಯೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಬೆಡ್​ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಹಾವೇರಿ ತಾಲೂಕಿನ ಬಸಾಪುರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಅಗತ್ಯಬಿದ್ದರೆ ರಾಣೆಬೆನ್ನೂರು ತಾಲೂಕಿನಲ್ಲೊಂದು ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ 540 ಆಕ್ಸಿಜನ್ ಸಹಿತ ಬೆಡ್​ಗಳ ವ್ಯವಸ್ಥೆಯಿದೆ. 950ಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಹೊಂದಲಾಗಿದೆ. ತಾಲೂಕಾಸ್ಪತ್ರೆಗಳಲ್ಲಿ 190 ಜಂಬೋ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಹೊಂದಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್ ಆಕ್ಸಿಜನ್ ಟ್ಯಾಂಕ್ ಅಳವಡಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಕೊರತೆಯಿಲ್ಲ. ಅಗತ್ಯಕ್ಕೆ ತಕ್ಕಂತೆ ಲಸಿಕೆ ಬೆಳಗಾವಿಯಿಂದ ಪೂರೈಕೆಯಾಗುತ್ತಿದೆ. ಈಗಾಗಲೇ 1,11,298 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಗುರುವಾರ 7 ಸಾವಿರ ಡೋಸ್ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿದೆ. ಗಂಭೀರ ಪರಿಸ್ಥಿತಿಯಿರುವ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಮಾತ್ರ ರಮಿಡಿಸಿವರ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 510 ಡೋಸ್ ರಮಿಡಿಸಿವರ್ ಲಸಿಕೆ ದಾಸ್ತಾನಿದೆ ಎಂದರು.

    ಧಾರ್ವಿುಕ ಸ್ಥಳಗಳಲ್ಲಿ, ಜಾತ್ರೆ, ಸಂತೆ ಹಾಗೂ ಮದುವೆ, ಸಭೆ-ಸಮಾರಂಭಗಳಲ್ಲಿ ಗುಂಪುಗುಂಪಾಗಿ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಛತ್ರಗಳ ಮಾಲೀಕರಿಗೆ 25 ಸಾವಿರ ರೂ. ದಂಡ ಹಾಕಲು ಎಲ್ಲ ತಹಸೀಲ್ದಾರ್​ಗಳಿಗೆ ಸೂಚಿಸಲಾಗಿದೆ ಎಂದರು.

    ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ಜಿಲ್ಲೆಯಲ್ಲಿ ಆರ್​ಟಿಪಿಸಿಆರ್ ತಪಾಸಣೆ ಮಾತ್ರ ನಡೆಸಲಾಗುತ್ತಿದೆ. ಉಳಿದ ತಪಾಸಣೆ ಕೈಬಿಡಲಾಗಿದೆ. ದಿನಕ್ಕೆ ಒಂದೂವರೆ ಸಾವಿರದಿಂದ 2 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಿತ್ಯ ತಾಲೂಕುವಾರು 2ರಿಂದ 300 ರವರೆಗೆ ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

    ಕೋವಿಡ್ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಪಡೆಯಲು ತೊಂದರೆಯಾಗದಂತೆ ಕೇಂದ್ರ ಸರ್ಕಾರ ಇ-ಸಂಜೀವಿನಿ ಒಪಿಡಿ ಆಪ್ ಸೇವೆಯನ್ನು ಆರಂಭಿಸಿದೆ. ಮೊಬೈಲ್​ಗಳಲ್ಲಿ ಆಪ್​ನ್ನು ಡೌನ್​ಲೋಡ್ ಮಾಡಿಕೊಂಡು ನೋಂದಾಯಿಸಿಕೊಂಡರೆ ವೆಬ್​ವಿಡಿಯೋ ಹಾಗೂ ಆನ್​ಲೈನ್ ಮೂಲಕ ರೋಗಿಗಳಿಗೆ ವೈದ್ಯರು ಮನೆಯಿಂದಲೇ ಚಿಕಿತ್ಸೆ ನೀಡಲಿದ್ದಾರೆ ಎಂದರು.

    ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಜನರು ಸ್ವಯಂ ಜಾಗ್ರತರಾಗಬೇಕು

    ಕೋವಿಡ್ ತೀವ್ರತರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂ ಜಾಗ್ರತರಾಗಿ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದರೆ ಕಠಿಣ ಕ್ರಮ ಅನಿವಾರ್ಯ. ಮಾಸ್ಕ್ ಹಾಕದವರಿಗೆ, ಅಂತರ ಕಾಯ್ದುಕೊಳ್ಳಲು ನಿರ್ಲಕ್ಷ್ಯ ವಹಿಸಿದವರಿಗೆ ದಂಡ ಹಾಕಲಾಗುವುದು. ಹಾವೇರಿ, ರಾಣೆಬೆನ್ನೂರು ನಗರಗಳಲ್ಲಿ 200 ರೂ. ಉಳಿದ ಪಟ್ಟಣಗಳಲ್ಲಿ 100 ರೂ. ದಂಡ ಹಾಕಲು ಪೊಲೀಸ್ ಇಲಾಖೆ, ತಹಸೀಲ್ದಾರ್, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ. 2ನೇ ಅಲೆ ಆರಂಭವಾದ ದಿನದಿಂದ ಈವರೆಗೆ ಮಾಸ್ಕ್ ಧರಿಸದೇ ಇದ್ದವರಿಂದ 15 ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts