More

    ಎಲ್ಲ ರೋಗಗಳಿಗೂ ಮೂಲ ಏನು? ಇದಿಷ್ಟು ನಿಮಗೆ ಗೊತ್ತಿದ್ದರೆ ನಿಮ್ಮಿಂದ ರೋಗಗಳೇ ದೂರ!

    • ಡಾ. ಗಿರಿಧರ ಕಜೆ

    ಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಜನಜನಿತ. ಎಲ್ಲಾ ರೋಗಗಳಿಗೂ ಕಾರಣವಾಗುವ ದೇಹದಲ್ಲಾಗುವ ಪ್ರಾರಂಭಿಕ ಬದಲಾವಣೆಯೆಂದರೆ ಜೀರ್ಣಶಕ್ತಿಯ ಕುಂದುವಿಕೆ. ಪಚನಶಕ್ತಿಯೆಂಬುದು ಕೇವಲ ಜಠರಕ್ಕೆ ಸಂಬಂಧಿಸಿದ್ದಲ್ಲ! ದೇಹದ ಪ್ರತಿ ಅಣುವಿನಲ್ಲಿ, ಎಲ್ಲಾ ಜೀವಕೋಶಗಳಲ್ಲಿ ನಿರಂತರವಾಗಿ ಕಾರ್ಯನಿರತವಾಗಿರುವ ಪ್ರಕ್ರಿಯೆ. ಇವೆಲ್ಲವುಗಳಿಗೆ ಅಗ್ನಿಯೇ ಮೂಲ. ಹೊಟ್ಟೆಗೆ ಸಂಬಂಧಿಸಿದಂತೆ ಜಠರಾಗ್ನಿ ಎಂದು ಕರೆದರೆ ಜೀವಕೋಶಗಳಿಗೆ ಹೊಂದಿಕೊಂಡು ವಿವಿಧ ಭೂತಾಗ್ನಿ, ಧಾತ್ವಗ್ನಿಗಳು ಶರೀರವನ್ನು ಕಾಪಾಡುತ್ತವೆ. ಸೂರ್ಯನಿಂದ ಜಗತ್ತಿನ ಜೀವಿಗಳಿಗೆ ಈ ಅಗ್ನಿಬಲ ಬರುತ್ತದೆ. ಅಂದಮೇಲೆ ಈ ಅಗ್ನಿಶಕ್ತಿಯನ್ನು ಕಾಪಾಡಿಕೊಳ್ಳುವುದು ಸ್ವಾಸ್ಥ್ಯ ಆಕಾಂಕ್ಷಿಗಳೆಲ್ಲರ ಕರ್ತವ್ಯವಾಗುತ್ತದೆ. ಜೀರ್ಣಶಕ್ತಿಯು ಬಲವನ್ನು ಕಳೆದುಕೊಳ್ಳಲು ಕಾರಣವಾಗುವ ಇಪ್ಪತ್ತು ಅಂಶಗಳನ್ನು ಆಯುರ್ವೇದ ಗ್ರಂಥಗಳಲ್ಲಿ ನೋಡಬಹುದು.

    1. ಅನಶನ: ಆಹಾರ ಸೇವಿಸದೇ ದೇಹದಂಡನೆ ಮಾಡುವ ಅನೇಕರಿರುತ್ತಾರೆ. ಅನಿಯಮಿತವಾಗಿ ಆಹಾರದಿಂದ ದೂರವಿದ್ದರೆ ಉದರದ ಅಗ್ನಿ ಬಲಹೀನವಾಗುತ್ತದೆ.
    2. ಅಧ್ಯಶನ: ಆಗಾಗ ಆಹಾರ ಸೇವನೆ ಮಾಡುವ ಅಭ್ಯಾಸ! ವಿಭಜಿತ ಆಹಾರವೆಂಬ ಹೆಸರಿನಲ್ಲಿ ಹೊತ್ತುಗೊತ್ತಿಲ್ಲದೇ ದಿನದಲ್ಲಿ ಹಲವಾರು ಬಾರಿ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸ್ವೀಕರಿಸುವ ವಿಧಾನದಿಂದಲೂ ಜೀರ್ಣಶಕ್ತಿ ದುರ್ಬಲವಾಗುತ್ತದೆ!
    3. ಅಜೀರ್ಣಕಾರಕ ಆಹಾರ: ತಿಂದಮೇಲೆ ಆಹಾರವು ಸರಿಯಾಗಿ ಜೀರ್ಣವಾಗದೇ ಇದ್ದರೆ ಮುಂದಿನ ಒಂದೆರಡು ದಿನಗಳ ಕಾಲ ಚಡಪಡಿಸುವಿಕೆ ಇದ್ದೇ ಇರುವುದು ಎಲ್ಲರಿಗೂ ಅನುಭವ ವೇದ್ಯವಾಗಿರುತ್ತದೆ.
    4. ಗುರು ಆಹಾರ: ಸುಲಭವಾಗಿ ಜೀರ್ಣವಾಗದ ಆಹಾರ ಜೀರ್ಣಶಕ್ತಿಗೆ ಪೂರಕವಲ್ಲ, ಮಾರಕ. ಅನ್ನತಿಂದು ಅಭ್ಯಾಸವಾಗಿರುವ ದಕ್ಷಿಣ ಭಾರತೀಯರು ಉತ್ತರದ ರೋಟಿ-ಗೀಟಿ ತಿನ್ನಲು ಶುರುಮಾಡಿಕೊಂಡರೆ ರೋಗಗಳಿಗೆ ತುತ್ತಾಗಲು ಈ ಕಾರಣವೇ ಸಾಕು.
    5. ಶೀತಲ ಆಹಾರ: ತಣ್ಣನೆಯ ಆಹಾರವನ್ನೇ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದೂ ಜೀರ್ಣಶಕ್ತಿ ಉಡುಗಿ ಹೋಗುವಂತೆ ಮಾಡುತ್ತದೆ.
    6. ರೂಕ್ಷ ಆಹಾರ: ಯಾವಾಗಲೂ ಒಣ, ನೀರಿನ, ಎಣ್ಣೆಯ ಅಂಶಗಳಿಲ್ಲದ ಆಹಾರವನ್ನೇ ಮೆಲ್ಲುತ್ತಾ ಹೋದರೂ ರೋಗಭಾದೆ ತಪ್ಪಿದ್ದಲ್ಲ. ಎಣ್ಣೆ, ತುಪ್ಪದ ಭೀತಿಯಿಂದಲೋ ಅಥವಾ ಸಿದ್ಧಪಡಿಸಿಟ್ಟ ಜಂಕ್‌ಫುಡ್ ತಿನ್ನುವ ಚಪಲದಿಂದಲೋ ಶುಷ್ಕ ಆಹಾರದ ಅಭ್ಯಾಸವನ್ನೇ ಮಾಡಿಕೊಂಡರೆ ಜೀರ್ಣಾಗ್ನಿ ಹದಗೆಡುತ್ತದೆ.
    7. ಅಧಿಕ ಜಲಯುಕ್ತ ಆಹಾರ: ನೀರಿನಾಂಶ ಹೆಚ್ಚಿರುವ ಆಹಾರವನ್ನೇ ಸದಾ ಸೇವಿಸುತ್ತಾ ಹೋದರೂ ಜೀರ್ಣಶಕ್ತಿ ಕುಂದುತ್ತದೆ. ಬರಿಯ ದ್ರವಾಹಾರದ ಡಯೆಟ್ ಮಾಡುತ್ತಿರುವವರಿಗೆ ದೀರ್ಘಕಾಲದ ದುಷ್ಪರಿಣಾಮದ ಅರಿವಿರಲಿ.
    8. ವಿರುದ್ಧಾಹಾರ: ವಿರುದ್ಧಾಹಾರದಿಂದ ಜೀರ್ಣಪ್ರಕ್ರಿಯೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿ ರೋಗಗಳಿಗೆ ಕಾರಣವಾಗುತ್ತದೆ.
    9. ಅಸಾತ್ಮ್ಯ ಆಹಾರ: ತಲೆತಲಾಂತರದಿಂದ ನಮ್ಮ ವಂಶವಾಹಿಗಳಿಗೆ ಒಗ್ಗದ ಆಹಾರವು ದೇಹಕ್ಕೂ ಹೊಂದಿಕೆ ಆಗುವುದಿಲ್ಲ. ಅದೆಷ್ಟೋ ಪೀಳಿಗೆಗಳಿಂದ ಅನ್ನ ಉಂಡು ಅಭ್ಯಾಸವಾದವರು ಸಿರಿಧಾನ್ಯಗಳತ್ತ ವಾಲುವುದರಲ್ಲಿ ಅರ್ಥವಿಲ್ಲ. ನಮ್ಮ ಆಹಾರ ನಮ್ಮದು. ಆಗಲಷ್ಟೇ ನಮಗೆ ಅಗ್ನಿಬಲ.
    10. ವಿಷಮಾಶನ: ದಿನಚರಿಯಲ್ಲಿ ಶಿಸ್ತಿಲ್ಲದೆ ಯಾವ್ಯಾವುದೋ ಸಮಯದಲ್ಲಿ ಆಹಾರ ಸೇವಿಸುವುದರಿಂದಲೂ ಅಗ್ನಿ ಬಲ ಕಳೆದುಕೊಳ್ಳುತ್ತದೆ.
    11. ವಿಷ್ಟಂಭ ಆಹಾರ: ಮಲಪ್ರವೃತ್ತಿಗೆ ತಡೆಯನ್ನು ಉಂಟುಮಾಡುವ, ಮುಖ್ಯವಾಗಿ ಬೇಳೆಕಾಳುಗಳ ಅತಿಪ್ರಮಾಣದ ಸೇವನೆಯೂ ಜೀರ್ಣಶಕ್ತಿಯನ್ನು ಕ್ಷೀಣವಾಗಿಸುತ್ತದೆ. 12. ವಿದಗ್ಧ ಆಹಾರ: ತಳಹಿಡಿದ ಅಥವಾ ಸುಟ್ಟುಕರಕಲಾದ ಆಹಾರವೂ ಸೇವನೆಗೆ ಯೋಗ್ಯವಲ್ಲ.
    12. ಅಪಕ್ವ ಆಹಾರ: ಅರ್ಧಂಬರ್ಧ ಬೆಂದ ಆಹಾರ ತಿಂದರೂ ಜಠರಾಗ್ನಿಗೆ ತೊಂದರೆ. 14. ಪಿಷ್ಟ ಆಹಾರ, ಜಿಡ್ಡಿನ ಆಹಾರ ವಸ್ತುಗಳನ್ನೂ ಅತಿಯಾಗಿ ತಿನ್ನುವುದರಿಂದ ಅಗ್ನಿಶಕ್ತಿ ಕುಂದುತ್ತದೆ.
    13. ಕೊಳೆತ ಆಹಾರ: ಊಟಕ್ಕೆ ಸರಿಯಾದ ದಿಕ್ಕಿಲ್ಲವೆಂದು ಸಿಕ್ಕುಸಿಕ್ಕಿದ ಹಳಸಿದ ಆಹಾರ ತಿಂದರೂ ಪಚನಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
    14. ಅಪ್ರಿಯ ಪದಾರ್ಥ: ಮನಸ್ಸಿಗೆ ಖುಷಿ ನೀಡದ, ತಿಂದ ಮೇಲೆ ತೃಪ್ತಿ ನೀಡದ ಆಹಾರ ಸೇವಿಸುವುದನ್ನು ಬಿಡಬೇಕು. ವಸತಿ ಶಾಲೆಗಳಲ್ಲಿ ಇರುವ ಅನೇಕ ಮಕ್ಕಳಿಗೆ ಜೀರ್ಣದ ತೊಂದರೆ ಯಾಕೆ ಬರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.
    15. ಒಣಗಿದ ಮೀನು ಸೇವಿಸುವ ಅಭ್ಯಾಸವೂ ಪಾಚಕಾಗ್ನಿಗೆ ಹಿತವಲ್ಲ.
    16. ಕೆಲವೊಂದು ವಿಧವಾದ ಮೀನುಗಳನ್ನು ಗ್ರಂಥಗಳಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಿ ಹೇಳಲಾಗಿದೆ.
    17. ಅತಿಯಾಗಿ ಮಾಂಸಾಹಾರ ಸೇವನೆಯೂ ಜೀರ್ಣಶಕ್ತಿಯನ್ನು ದುರ್ಬಲಗೊಳಿಸುತ್ತದೆ.
    18. ಸಿಹಿ, ಹುಳಿ ರುಚಿಯ ಆಹಾರವನ್ನು ಮಿತಿಮೀರಿ ತಿಂದರೆ ಜಾಠರಾಗ್ನಿ ಕಾರ್ಯ ಮಂದವಾಗುತ್ತದೆ. ಸಮಾಜ ಸ್ವಸ್ಥವಾಗಿ ಇರಬೇಕಾದರೆ ಆಯುರ್ವೇದ ಹೇಳಿದ ಆಹಾರ ಜ್ಞಾನ, ನಾಲಿಗೆಯ ಸ್ವಯಂ ನಿಯಂತ್ರಣ ಎರಡೂ ಅತ್ಯವಶ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts