More

    5 ವರ್ಷ 20 ಲಕ್ಷ ನೌಕರಿ: 5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಣೆ ಗುರಿ

    ಬೆಂಗಳೂರು: ಮುಂದಿನ 5 ವರ್ಷದಲ್ಲಿ ವಾರ್ಷಿಕ ಶೇ.10 ಕೈಗಾರಿಕಾ ಬೆಳವಣಿಗೆ ದರ ಕಾಯ್ದುಕೊಂಡು 5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸಿ 20 ಲಕ್ಷ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಗುರಿಸಾಧನೆ ಮೂಲಕ ಕರ್ನಾಟಕವನ್ನು ಭಾರತದ ಅಭಿವೃದ್ಧಿ ಇಂಜಿನ್ ಆಗಿಸುವ ಆಶಯದ ಹೊಸ ಕೈಗಾರಿಕಾ ನೀತಿಯನ್ನು ರಾಜ್ಯ ಸರ್ಕಾರ ಅನಾವರಣಗೊಳಿಸಿದೆ. ಬೆಂಗಳೂರಿನಿಂದ ಹೊರಗೆ ಹೂಡಿಕೆ ಉತ್ತೇಜಿಸುವಂತಹ ಅನೇಕ ಅಂಶಗಳನ್ನು ಈ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಹುಬ್ಬಳ್ಳಿ ಧಾರವಾಡದಲ್ಲಿ ಎಫ್​ಎಂಸಿಜಿ ಕ್ಲಸ್ಟರ್, ಯಾದಗಿರಿಯ ಜಿಲ್ಲೆಯಲ್ಲಿ ಫಾರ್ವ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗಿದೆ. ಜತೆಗೆ, ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್​ಶಿಪ್ ಅಭಿವೃದ್ಧಿಪಡಿಸಲಾಗುತ್ತದೆ.

    ವಾಹನ ಮತ್ತು ವಾಹನಗಳ ಬಿಡಿಭಾಗಗಳು, ಔಷಧಿ ಮತ್ತು ಲಾಜಿಸ್ಟಿಕ್ಸ್, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್ ಮತ್ತು ರಕ್ಷಣೆ ಹಾಗೂ ವಿದ್ಯುತ್​ಚಾಲಿತ ವಾಹನಗಳು, ವೈದ್ಯಕೀಯ ಉಪಕರಣಗಳು, ಇಂಜಿನಿಯರಿಂಗ್ ಮತ್ತು ಯಂತ್ರೋಪಕರಣ ಬಿಡಿಭಾಗಗಳು, ಜ್ಞಾನ ಆಧಾರಿತ ಕೈಗಾರಿಕೆಗಳು, ಪ್ರಮುಖ ವಲಯಗಳ ಮೇಲೆ ನೀತಿಯ ಗಮನ ಕೇಂದ್ರೀಕೃತವಾಗಿದೆ. ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಸಾಧ್ಯವಾಗುವಂತೆ ಏಕೀಕೃತ ತಂತ್ರಜ್ಞಾನ ವೇದಿಕೆ ‘ಸಮರ್ಥ’ವನ್ನು ಪರಿಚಯಿಸಲಾಗುತ್ತಿದೆ.

    ಮಂಗಳವಾರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೈಗಾರಿಕಾ ನೀತಿ 2020-25 ಕೈಪಿಡಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಬಿಡುಗಡೆ ಮಾಡಿದರು. ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಆಯುಕ್ತೆ ಗುಂಜನ್ ಕೃಷ್ಣ, ಎಫ್​ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಉಪಸ್ಥಿತರಿದ್ದರು.

    ಸಮೃದ್ಧ ಕರ್ನಾಟಕ ಸಾಧ್ಯ: ಕೈಗಾರಿಕಾ ನೀತಿಯು ಕೈಗಾರಿಕೆಗೆ ಪೂರಕವಾದ ವಾತಾವರಣದ ಜತೆಗೆ ಸಮೃದ್ಧ ಕರ್ನಾಟಕ ರೂಪಿಸುವುದಕ್ಕೂ ಸಹಕಾರಿಯಾಗಲಿದೆ. ಕೈಗಾರಿಕಾ ನೀತಿ 2020-25ರ ಉತ್ತೇಜನಾ ಕ್ರಮ ಹಾಗೂ ರಿಯಾಯಿತಿ ಪ್ಯಾಕೇಜ್ 2020ರ ಆ.13 ರಿಂದಲೇ ಅನ್ವಯವಾಗಿದ್ದು, ಮುಂದಿನ 5 ವರ್ಷಗಳ ಅವಧಿಗೆ ಅಥವಾ ಮುಂದಿನ ನೀತಿ ಘೊಷಣೆ ಆಗುವವರೆಗೆ ಜಾರಿಯಲ್ಲಿರುತ್ತದೆ. ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಭೂಮಿ ಖರೀದಿ ಸವಾಲಾಗಿರುವ ಹಿನ್ನೆಲೆಯಲ್ಲಿ ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಿಗೆ ಕೈಗಾರಿಕೆಗಳನ್ನು ಆಕರ್ಷಿಸಲು ಒತ್ತು ನೀಡಲಾಗುತ್ತಿದೆ.

    ಕನ್ನಡಿಗರಿಗೆ ಕಡ್ಡಾಯ: ಕೈಗಾರಿಕೆಗಳ ಡಿ ಗ್ರೂಪ್​ನಲ್ಲಿ ಶೇ.100 ಮತ್ತು ಸಿ ಗ್ರೂಪ್​ನಲ್ಲಿ ಶೇ.70 ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು. ಈ ನಿಯಮಗಳನ್ನು ಪಾಲನೆ ಮಾಡದ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

    ಭೂ ಖರೀದಿ ಸರಳ: ಕರ್ನಾಟಕವನ್ನು ಹೂಡಿಕೆದಾರರ ನೆಚ್ಚಿನ ತಾಣವಾಗಿ ರೂಪಿಸಲು ಸರ್ಕಾರ ಭೂ ಖರೀದಿಯನ್ನು ಸರಳಗೊಳಿಸಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಸಂಭಾವ್ಯ ಹೂಡಿಕೆದಾರರಿಗೆ ಎಲ್ಲ ಪ್ರಕ್ರಿಯೆಗಳನ್ನು ಸುಗಮಗೊಳಿಸಲಾಗುತ್ತಿದೆ. ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಮತ್ತು ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಒಪ್ಪಿಗೆ ಪಡೆದ ಬಳಿಕೆ 30 ದಿನದೊಳಗೆ ಅನುಮತಿ ದೊರೆಯುತ್ತದೆ. ಇಲ್ಲದಿದ್ದರೆ ಅದನ್ನು ಡೀಮ್್ಡ ಪರಿವರ್ತನೆ ಎಂದು ಪರಿಗಣಿಸಲಾಗುತ್ತದೆ. ರೈತರು, ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಧನದ ಬದಲು ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಪಾಲು ಕೊಡಲಾಗುತ್ತದೆ. ಎಸ್​ಸಿ-ಎಸ್​ಟಿ ಸಮುದಾಯದ ಉದ್ಯಮಿಗಳಿಗೆ ಆದ್ಯತೆ ನೀಡಲಾಗುವುದು. ಕೈಗಾರಿಕೆ ನಿವೇಶನಕ್ಕೆ ಶೇ.75 ರಿಯಾಯಿತಿ ನೀಡಲು ಸರ್ಕಾರ ಮುಂದಾಗಿದೆ.

    ಈಸ್ ಆಫ್ ಡೂಯಿಂಗ್​ಗೆ ಒತ್ತು: ಹೊಸ ನೀತಿಯು ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್​ಗೆ ಹೆಚ್ಚಿನ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆಯನ್ನು ಇತ್ತೀಚೆಗೆ ಜಾರಿಗೊಳಿಸಲಾಗಿದೆ. ಸ್ವಯಂಘೊಷಣೆ ಪತ್ರ ಮೂಲಕ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಯೋಜನೆ ಇದು. ವಿವಿಧ ಇಲಾಖೆಗಳ ಆಯ್ದ 15 ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ.

    ಕರೊನಾ ನಂತರದಲ್ಲಿ ಹೂಡಿಕೆ ಬರುತ್ತದೆಯೋ ಇಲ್ಲವೋ ಎಂಬ ಅಂಜಿಕೆಯ ನಡುವೆಯೂ ರಾಜ್ಯ ಉತ್ತಮ ಪ್ರದರ್ಶನ ತೋರಿದೆ. ರಾಜ್ಯದಲ್ಲಿ 2020ರ ಜನವರಿಯಿಂದ ಅಕ್ಟೋಬರ್​ವರೆಗಿನ ಅವಧಿಯಲ್ಲಿ 1,54, 937 ಕೋಟಿ ರೂ. ಮೊತ್ತದ 95 ಹೂಡಿಕೆ ಪ್ರಸ್ತಾವನೆಗಳು ನೋಂದಣಿಯಾಗಿದೆ. ದೇಶದಲ್ಲಿ ಒಟ್ಟಾರೆ ನೋಂದಣಿಯಾಗಿರುವ ಹೂಡಿಕೆ ಪ್ರಸ್ತಾವನೆಯ ಶೇ.41 ಕರ್ನಾಟಕಕ್ಕೇ ದಕ್ಕಿರುವುದು ಸಂತಸದ ಸಂಗತಿ.

    | ಜಗದೀಶ ಶೆಟ್ಟರ್ ಕೈಗಾರಿಕೆ ಸಚಿವ

    ಸರ್ಕಾರದ ಸಂಕಲ್ಪ

    • ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್​ಶಿಪ್ ಅಭಿವೃದ್ಧಿ
    • ವಾಹನ, ವಾಹನ ಬಿಡಿಭಾಗಗಳು, ಔಷಧ, ಲಾಜಿಸ್ಟಿಕ್ಸ್, ಜ್ಞಾನ ಆಧಾರಿತ ಕೈಗಾರಿಕೆ ಗಳು, ಪ್ರಮುಖ ವಲಯಗಳಿಗೆ ಆದ್ಯತೆ
    • ದ್ವಿತೀಯ, ತೃತೀಯ ಹಂತದ ನಗರಗಳಿಗೆ ಕೈಗಾರಿಕೆ ಆಕರ್ಷಿಸಲು ಒತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts