More

    ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣ ತನಿಖೆಗೆ 2 ಎಸ್​ಐಟಿ ತಂಡ ರಚಿಸಿದ ದೆಹಲಿ ಪೊಲೀಸ್​

    ನವದೆಹಲಿ: ಈಶಾನ್ಯ ದೆಹಲಿ ಗಲಭೆ ಪ್ರಕರಣವನ್ನು ದೆಹಲಿ ಪೊಲೀಸ್​ ಅಪರಾಧ ವಿಭಾಗದ ಎರಡು ವಿಶೇಷ ತನಿಖಾ ತಂಡ (ಎಸ್​ಐಟಿ) ತನಿಖೆಯನ್ನು ನಡೆಸಲಿದೆ ಎಂದು ಗುರುವಾರ ಸಂಜೆ ದೆಹಲಿ ಪೊಲೀಸ್​ ತಿಳಿಸಿದೆ.

    ಡೆಪ್ಯುಟಿ ಪೊಲೀಸ್​ ಆಯುಕ್ತರ ನೇತೃತ್ವದಲ್ಲಿ ಎಸ್​ಐಟಿ ರಚನೆಯಾಗಿದ್ದು, ಮೊದಲ ತಂಡವನ್ನು ಡಿಸಿಪಿ ಜಾಯ್​ ಟಿರ್ಕಿ ಹಾಗೂ ಎರಡನೇ ತಂಡವನ್ನು ಡಿಸಿಪಿ ರಾಜೇಶ್​ ಡಿಯೋ​ ನೇತೃತ್ವ ವಹಿಸಿಕೊಂಡಿದ್ದಾರೆ. ಪ್ರತಿ ತಂಡವು ನಾಲ್ವರು ಅಸಿಸ್ಟೆಂಟ್​ ಪೊಲೀಸ್​ ಕಮಿಷನರ್​ಗಳನ್ನು ಹೊಂದಿರುತ್ತಾರೆ ಎಂದು ದೆಹಲಿ ಪೊಲೀಸ್​ ತಿಳಿಸಿದೆ.

    ಹೆಚ್ಚುವರಿ ಪೊಲೀಸ್​ ಆಯುಕ್ತರಾದ (ಅಪರಾಧ ವಿಭಾಗ) ಬಿ.ಕೆ. ಸಿಂಗ್​ ಅವರು ತನಿಖಾ ತಂಡದ ಕಾರ್ಯದ ಮೇಲೆ ನಿಗಾ ವಹಿಸಲಿದ್ದಾರೆ.

    ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಈಶಾನ್ಯ ದೆಹಲಿಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್​ ಠಾಣೆಗಳಲ್ಲಿ ಎಫ್​ಐಆರ್​ ದಾಖಲಾಗಿದ್ದು, ಎಲ್ಲವನ್ನು ಎಸ್​ಐಟಿಗೆ ವರ್ಗಾಯಿಸಲಾಗುತ್ತದೆ. ಈವರೆಗೂ ಗಲಭೆ ಸಂಬಂಧ 48 ಎಫ್​ಐಆರ್​ಗಳು ದಾಖಲಾಗಿವೆ ಎಂದು ದೆಹಲಿ ಪೊಲೀಸ್​ ಆಯುಕ್ತ ಕಚೇರಿ ಮಾಹಿತಿ ನೀಡಿದೆ.

    ರಚನೆಯಾಗಿರುವ ಎರಡು ಎಸ್​ಐಟಿ ತಂಡದಲ್ಲಿ ಮೂವರು ಇನ್ಸ್​ಪೆಕ್ಟರ್​ಗಳು​, ನಾಲ್ವರು ಸಬ್​ ಇನ್ಸ್​ಪೆಕ್ಟಗಳು ಮತ್ತು ಮೂವರು ಹೆಡ್​ ಕಾನ್​ಸ್ಟೆಬಲ್​​ಗಳು ಇರಲಿದ್ದಾರೆ. ಪ್ರಕರಣ ಸಂಬಂಧ ತಕ್ಷಣವೇ ತನಿಖೆ ಆರಂಭಿಸಲು ಸೂಚನೆ ನೀಡಲಾಗಿದೆ.

    ಗಲಭೆಯನ್ನು ನಿಯಂತ್ರಿಸಲು ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೆಹಲಿ ಹೈಕೋರ್ಟ್​ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಈ ನಡೆಯನ್ನು ಅನುಸರಿಸಿದ್ದಾರೆ. ನಿನ್ನೆಯಷ್ಟೇ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್​ ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಎಡವಿದೆ ಎಂದು ಕಿಡಿಕಾರಿತ್ತು.

    ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧ ಬಣಗಳಿಂದ ಆರಂಭವಾದ ಗಲಭೆ ಹಿಂಸಾಚಾರಕ್ಕೆ ತಿರುಗಿದೆ. ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆಯಾದರೂ ಈಗಾಗಲೇ 34 ಮಂದಿ ಸಾವಿಗೀಡಾಗಿ, ಸುಮಾರು 200 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts