More

    ಹಾನಗಲ್ಲ ಕ್ಷೇತ್ರದಲ್ಲಿ 2.09 ಲಕ್ಷ ಮತದಾರರು

    ಹಾನಗಲ್ಲ: ಹಾನಗಲ್ಲ ಮತಕ್ಷೇತ್ರದಲ್ಲಿ 107842 ಪುರುಷರು, 101958 ಮಹಿಳೆಯರು, ಇತರೆ 4 ಸೇರಿದಂತೆ ಒಟ್ಟು 209804 ಮತದಾರರು ಹಕ್ಕು ಚಲಾಯಿಸಲಿದ್ದಾರೆ ಎಂದು ಚುನಾವಣಾಧಿಕಾರಿ ಎಂ. ಮಲ್ಲಿಕಾರ್ಜುನ ಹೇಳಿದರು.

    ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಲೂಕಿನಲ್ಲಿ ಒಟ್ಟು 239 ಮತಗಟ್ಟೆ ಸ್ಥಾಪಿಸಲಾಗಿದೆ. ಇದರಲ್ಲಿ 194 ಸಾಮಾನ್ಯ, 41 ಸೂಕ್ಷ್ಮ, 4 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಏ. 13ರಂದು ಅಧಿಸೂಚನೆ ಹೊರಬೀಳಲಿದ್ದು, ಏ. 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 21ರಂದು ನಾಮಪತ್ರ ಪರಿಶೀಲನೆ, 24 ನಾಮಪತ್ರ ಹಿಂಪಡೆಯಲು ಅಂತಿಮ ದಿನ. ಮೇ 10ರಂದು ಮತದಾನ ನಡೆಯಲಿದೆ ಎಂದರು.

    ಚುನಾವಣಾ ಸಿಬ್ಬಂದಿಗೆ ಪಟ್ಟಣದ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಚುನಾವಣೆಯಲ್ಲಿ 42 ರೂಟ್​ಗಳಲ್ಲಿ 264 ಮತಗಟ್ಟೆ ಅಧಿಕಾರಿಗಳು, 264 ಸಹಾಯಕ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 1056 ಸಿಬ್ಬಂದಿ 239 ಮತಗಟ್ಟೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲಿದ್ದಾರೆ. ತಾಲೂಕಿಗೆ ಏ. 6ರಂದು 287 ಇವಿಎಂ ಯಂತ್ರಗಳು ಜಿಲ್ಲಾ ಕೇಂದ್ರದಿಂದ ಆಗಮಿಸಲಿವೆ. ಮುಖ್ಯವಾಗಿ ತಾಲೂಕಿನ ಗಡಿ ಭಾಗಗಳಾದ ಕೊಪ್ಪರಸಿಕೊಪ್ಪ, ಸಮ್ಮಸಗಿ, ಗೊಂದಿ, ಹಳ್ಳಿಬೈಲ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಚೆಕ್​ಪೋಸ್ಟ್ ಆರಂಭಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಲ್ಲಿಕಾರ್ಜುನ ವಿವರಿಸಿದರು.

    ವಿಶೇಷ ಮತದಾನ ವ್ಯವಸ್ಥೆ: ಇತಿಹಾಸದಲ್ಲಿ ಮೊದಲ ಬಾರಿ ಚುನಾವಣಾ ಆಯೋಗ 80 ವರ್ಷ ಮೀರಿರುವವರು ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಕೈಗೊಳ್ಳುವ ವ್ಯವಸ್ಥೆ ಕೈಗೊಂಡಿದೆ. ತಾಲೂಕಿನಲ್ಲಿ 12,232 ಮತದಾರರಿದ್ದು, ಇದಕ್ಕಾಗಿ ವಿಶೇಷ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ತಾಲೂಕಿನಲ್ಲಿ 92 ಜನ ಶತಾಯುಷಿ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಈ ಬಾರಿ 5128 ಯುವ ಮತದಾರರು ಹೆಸರು ನೋಂದಾಯಿಸಿದ್ದು, ಇವರಲ್ಲಿ ಪ್ರಸ್ತುತ ಮತಪಟ್ಟಿಯಲ್ಲಿ 3460 ಯುವ ಮತದಾರರ ಹೆಸರು ಅಂತಿಮವಾಗಿ ಪ್ರಕಟಗೊಂಡಿವೆ ಎಂದು ಮಲ್ಲಿಕಾರ್ಜುನ ವಿವರಿಸಿದರು.

    ಚುನಾವಣೆಯ ಸಭೆ-ಸಮಾರಂಭ, ಪ್ರಚಾರ, ರೋಡ್-ಶೋ ಮತ್ತಿತರ ಕಾರ್ಯಕ್ರಮಗಳಿಗೆ ತಾಲೂಕು ಆಡಳಿತದಿಂದ ಪರವಾನಗಿ ಪಡೆಯುವುದು ಕಡ್ಡಾಯ. ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಚುನಾವಣೆ ಕಾರ್ಯಕ್ರಮಗಳಿಗೆ ಸಮಯ ನಿಗದಿಗೊಳಿಸಲಾಗಿದೆ. ತಾಲೂಕಿನಲ್ಲಿ 5 ಕಡೆಗಳಲ್ಲಿ ಮಾದರಿ ಮತಗಟ್ಟೆ ರಚಿಸಲು ತೀರ್ವನಿಸಲಾಗಿದೆ. ಪಟ್ಟಣದ ಜನತಾ ಬಾಲಕಿಯರ ಪ್ರೌಢಶಾಲೆ ಸೇರಿದಂತೆ 2 ಕಡೆಗಳಲ್ಲಿ ಸಖಿ ಮತಗಟ್ಟೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಚುನಾವಣಾಧಿಕಾರಿ ಎಂ.ಮಲ್ಲಿಕಾರ್ಜುನ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಶಶಿಧರ ಮಾಡ್ಯಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts