More

    2 ವರ್ಷದಲ್ಲಿ ವಿದ್ಯುತ್ ರೈಲು

    ಆನಂದ ಅಂಗಡಿ ಹುಬ್ಬಳ್ಳಿ

    ಬೆಂಗಳೂರು- ಹುಬ್ಬಳ್ಳಿ ಮಧ್ಯೆ ಇಲೆಕ್ಟ್ರಿಕ್ ರೈಲು ಓಡಾಡುವ ದಿನಗಳು ಇನ್ನು ಬಹಳ ದೂರ ಇಲ್ಲ.

    ಹೌದು, ಈಗಾಗಲೇ ಚಿಕ್ಕಬಾಣಾವರ- ಹುಬ್ಬಳ್ಳಿ ಮಧ್ಯೆ ಇಲೆಕ್ಟ್ರಿಕ್ ರೈಲುಗಳು ಸಂಚರಿಸಲು ಬೇಕಾದ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ.

    ಬೆಂಗಳೂರು- ಹುಬ್ಬಳ್ಳಿ ಮಧ್ಯದ 456 ಕಿಮೀ ಉದ್ದ ಇಲೆಕ್ಟ್ರಿಕ್ ರೈಲುಗಳ ಸಂಚಾರಕ್ಕೆ ನೈಋತ್ಯ ರೈಲ್ವೆ ವಲಯಕ್ಕೆ 2018-19ರಲ್ಲಿ ಹಸಿರು ನಿಶಾನೆ ನೀಡಲಾಗಿತ್ತು. ಅಂದಾಜು 310 ಕೋಟಿ ರೂ. ವೆಚ್ಚದಲ್ಲಿ ಇಲೆಕ್ಟ್ರಿಕ್ ರೈಲುಗಳ ಸಂಚಾರಕ್ಕೆ ಬೇಕಾದ ಸೌಲಭ್ಯ ಅಳವಡಿಸುವುದಕ್ಕಾಗಿ 2019ರ ಡಿಸೆಂಬರ್​ನಿಂದ ಕಾಮಗಾರಿ ನಡೆದಿದ್ದು, 2022ರ ಜೂನ್​ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಹೊಸಪೇಟೆಯಿಂದ ವಾಸ್ಕೊ ಡ ಗಾಮಾ ಮಧ್ಯೆಯೂ ಇಲೆಕ್ಟ್ರಿಕ್ ರೈಲುಗಳ ಸಂಚಾರಕ್ಕೆ ಬೇಕಾದ ಸೌಲಭ್ಯ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗವೂ ಹುಬ್ಬಳ್ಳಿ ಮೂಲಕವೇ ಹಾಯ್ದು ಹೋಗಲಿದೆ.

    ಬೆಂಗಳೂರು-ಹುಬ್ಬಳ್ಳಿ ಮತ್ತು ಹೊಸಪೇಟೆ- ವಾಸ್ಕೊ ಡ ಗಾಮಾ ಮಧ್ಯೆ ದ್ವಿಪಥ ಇರುವಲ್ಲಿ ಇಲೆಕ್ಟ್ರಿಕ್ ರೈಲು ಸಂಚಾರಕ್ಕೆ ಬೇಕಾದ ಸೌಲಭ್ಯ ಅಳವಡಿಸುವ ಕಾಮಗಾರಿ ಪ್ರಾರಂಭಗೊಂಡಿದೆ. ಇಕ್ಕೆಲಗಳಲ್ಲಿ ವಿದ್ಯುತ್ ಕಂಬಗಳನ್ನು ನಿಲ್ಲಿಸಿ, ತಂತಿಗಳನ್ನು ಜೋಡಿಸಲಾಗಿದೆ. ಇಲೆಕ್ಟ್ರಿಕ್ ರೈಲಿನ ಮೇಲ್ಭಾಗದಲ್ಲಿ ವಿದ್ಯುತ್ ಸಂಪರ್ಕ ಸೌಲಭ್ಯ ಒದಗಿಸಲು ಓವರ್​ಹೆಡ್ ಲೈನ್​ನ ನಿರ್ವಣವೂ ಅಲ್ಲಲ್ಲಿ ಪೂರ್ಣಗೊಂಡಿದೆ.

    ಚಿಕ್ಕಬಾಣಾವರ-ತುಮಕೂರು ಮಧ್ಯದ 57 ಕಿಮೀ, ತುಮಕೂರು-ಅರಸಿಕೆರೆ ಮಧ್ಯದ 96 ಕಿಮೀ ಉದ್ದದ ಮಾರ್ಗದಲ್ಲಿ 2021ರಲ್ಲಿ, ಅರಸಿಕೆರೆ-ನಾಗವಂಗಲ ಮಧ್ಯದ 54 ಕಿಮೀ, ಬೀರೂರು-ನಾಗವಂಗಲ-ಚಳಗೇರಿ ಮಧ್ಯದ 127 ಕಿಮೀ, ಚಳಗೇರಿ-ಹುಬ್ಬಳ್ಳಿ ಮಧ್ಯದ 122 ಕಿಮೀ ಮಾರ್ಗದಲ್ಲಿ ಈ ರೈಲಿಗೆ ಬೇಕಾದ ಸೌಲಭ್ಯಗಳ ಅಳವಡಿಕೆ ಕಾಮಗಾರಿ 2022ರಲ್ಲಿ ಪೂರ್ಣಗೊಳ್ಳಲಿದೆ.

    466 ಕೋಟಿ ರೂಪಾಯಿ ವೆಚ್ಚ: ಹೊಸಪೇಟೆ- ಹುಬ್ಬಳ್ಳಿ- ವಾಸ್ಕೊ ಡ ಗಾಮಾ ಮಧ್ಯೆ 466 ಕೋಟಿ ರೂ. ವೆಚ್ಚದಲ್ಲಿ 356 ಕಿಮೀ ಉದ್ದದ ರೈಲ್ವೆ ಮಾರ್ಗದಲ್ಲಿ ಇಲೆಕ್ಟ್ರಿಕ್ ಸೌಲಭ್ಯ ಅಳವಡಿಸುವ ಕಾಮಗಾರಿ 3 ಹಂತದಲ್ಲಿ ನಡೆದಿದೆ. ಹೊಸಪೇಟೆ-ಹುಬ್ಬಳ್ಳಿಯ 140 ಕಿಮೀ ಮಾರ್ಗದ ಬಾಣಾಪುರವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಿಂದ ಹುಲಕೋಟಿವರೆಗೆ ಕೆಲಸ ಪ್ರಗತಿಯಲ್ಲಿದೆ. ಹುಬ್ಬಳ್ಳಿ-ತಿನೈಘಾಟ್​ವರೆಗಿನ 108 ಕಿಮೀ (ಹುಬ್ಬಳ್ಳಿ ಬೈಪಾಸ್​ನ 10 ಕಿಮೀ ಸೇರಿದಂತೆ) ನಡೆದಿದ್ದು, ಹುಬ್ಬಳ್ಳಿ ಬೈಪಾಸ್​ನಲ್ಲಿ ವೈರಿಂಗ್ ಕೆಲಸ ಪೂರ್ಣಗೊಂಡಿದೆ. ಧಾರವಾಡ-ಮುಗದ ಮಧ್ಯೆ ಕಾಮಗಾರಿ ಪ್ರಗತಿಯಲ್ಲಿದೆ. ತಿನೈಘಾಟ್​ನಿಂದ ವಾಸ್ಕೊ ಡ ಗಾಮಾವರೆಗಿನ 108 ಕಿಮೀ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ.

    ಪ್ರಯೋಜನ: ಇಲೆಕ್ಟ್ರಿಕ್ ರೈಲುಗಳ ಸಂಚಾರ ಪ್ರಾರಂಭಗೊಂಡರೆ ರೈಲ್ವೆ ಇಲಾಖೆಗೆ ಸಾಕಷ್ಟು ಹಣ ಉಳಿತಾಯವಾಗಲಿದೆಯಲ್ಲದೇ, ಪರಿಸರಕ್ಕೆ ಹಾನಿಯಾಗುವುದೂ ತಪು್ಪತ್ತದೆ.

    ರೈಲ್ವೆ ಸಂಚಾರಕ್ಕೆ ಪ್ರತಿ ವರ್ಷ ಕೋಟ್ಯಂತರ ರೂ. ಡೀಸೆಲ್ ವೆಚ್ಚವಾಗುತ್ತಿದೆ. ಇಲೆಕ್ಟ್ರಿಕ್ ರೈಲುಗಳ ಸಂಚಾರ ಪ್ರಾರಂಭಗೊಂಡರೆ ಡೀಸೆಲ್ ವೆಚ್ಚ ಕಡಿತಗೊಳ್ಳಲಿದೆ.

    ಈಗಿನ ಡೀಸೆಲ್ ರೈಲುಗಳು ಕಾರ್ಬನ್ ಡೈ ಆಕೈ ್ಸ್ ಹೊರಸೂಸುತ್ತಿದ್ದು, ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇಲೆಕ್ಟ್ರಿಕ್ ರೈಲುಗಳು ಪರಿಸರ ಸ್ನೇಹಿಯಾಗಿರುತ್ತವೆ.

    ಈ ರೈಲುಗಳ ಸಂಚಾರದಿಂದ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಈಗಿನ ದರದಲ್ಲಿಯೇ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸಬಹುದು. ಇಲೆಕ್ಟ್ರಿಕ್ ರೈಲುಗಳು ಕಡಿಮೆ ವೆಚ್ಚದಲ್ಲಿ ಸಂಚರಿಸುವುದರಿಂದ ಪ್ರಯಾಣದ ದರ ಕಡಿಮೆ ಯಾದರೂ ಅಚ್ಚರಿ ಇಲ್ಲ.

    ಜನಶತಾಬ್ಧಿ ರೈಲು ಬೆಂಗಳೂರಿನಿಂದ ಹುಬ್ಬಳ್ಳಿಗೆ 8 ತಾಸಿನಲ್ಲಿ ತಲುಪುತ್ತಿದ್ದು, ಇಲೆಕ್ಟ್ರಿಕ್ ರೈಲು ಸುಮಾರು 6-7 ತಾಸುಗಳಲ್ಲಿ ಈ ದೂರ ಕ್ರಮಿಸಲಿದೆ.

    ಹುಬ್ಬಳ್ಳಿ-ಬೆಂಗಳೂರು ಹಾಗೂ ಹೊಸಪೇಟೆ- ವಾಸ್ಕೊ ಡ ಗಾಮಾ ಮಧ್ಯೆ ಇಲೆಕ್ಟ್ರಿಕ್ ರೈಲುಗಳ ಸಂಚಾರಕ್ಕೆ ಬೇಕಾದ ಸೌಲಭ್ಯಗಳ ಅಳವಡಿಕೆ ನಿರ್ಮಾಣ ಕಾಮಗಾರಿ ಬೇರೆ ಬೇರೆ ಹಂತದಲ್ಲಿ ಚುರುಕಿನಿಂದ ನಡೆದಿದೆ. 2022ರಲ್ಲಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    | ಇ. ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts