More

    2ನೇ ಹಂತದ ಹಣಾಹಣಿ ಇಂದು

    ಕಾರವಾರ: ಒಂದೇ ಪಕ್ಷದದಲ್ಲಿ ನಾಲ್ಕಾರು ಬಣ. ಒಂದೇ ಮನೆಯಲ್ಲೇ ವಿಭಿನ್ನ ಮನ. ಹೀಗೆ ಮನೆ, ಮನೆಯಲ್ಲೂ ಬೀದಿಗಳಲ್ಲೂ ರಾಜಕೀಯ ಕಿಚ್ಚನ್ನು ಹುಟ್ಟು ಹಾಕಿದ್ದು ಗ್ರಾಪಂ ಚುನಾವಣೆ. ಜಿಲ್ಲೆಯಲ್ಲಿ ಗ್ರಾಮ ಭಾರತ ಕಣದ ಮೊದಲ ಚರಣ ಮುಗಿದು ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಡಿ.27 ರಂದು ಬೆಳಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, 126 ಗ್ರಾಪಂಗಳ 3452 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.

    ಎರಡನೇ ಹಂತದಲ್ಲಿ ಒಟ್ಟಾರೆ 1203 ಕ್ಷೇತ್ರಗಳಿಗೆ 1999 ಪುರುಷ ಹಾಗೂ 1453 ಮಹಿಳಾ ಸ್ಪರ್ಧಿಗಳಿದ್ದಾರೆ. ಒಟ್ಟಾರೆ 3,98,782 ಮತದಾರರು ಭವಿಷ್ಯ ನಿರ್ಧರಿಸಲಿದ್ದಾರೆ. ಈಗಾಗಲೇ ಮತ ಪೆಟ್ಟಿಗೆಗಳನ್ನು ಹೊತ್ತ 765 ಆರ್​ಒಗಳು, 767 ಪಿಆರ್​ಒಗಳು, 1543 ಮತಗಟ್ಟೆ ಅಧಿಕಾರಿಗಳು, 688 ಡಿ ದರ್ಜೆಯ ನೌಕರರು ಮತಗಟ್ಟೆ ತಲುಪಿ, ಎಲ್ಲ ಸಿದ್ಧತೆ ನಡೆಸಿದ್ದಾರೆ.

    72 ಅತಿ ಸೂಕ್ಷ್ಮ

    ಒಟ್ಟಾರೆ 664 ಮತಗಟ್ಟೆಗಳಲ್ಲಿ ಭಾನುವಾರ ಮತದಾನ ನಡೆಯಲಿದ್ದು, ಅದರಲ್ಲಿ 72 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ. ಶಿರಸಿಯಲ್ಲಿ 26, ಯಲ್ಲಾಪುರದಲ್ಲಿ 7, ಮುಂಡಗೋಡಿನಲ್ಲಿ 10, ಹಳಿಯಾಳದಲ್ಲಿ 12, ದಾಂಡೇಲಿಯಲ್ಲಿ 3, ಜೊಯಿಡಾದಲ್ಲಿ 14 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಆ ಎಲ್ಲ ಕಡೆ ಒಬ್ಬ ಹವಾಲ್ದಾರ್ ಅಥವಾ ಎಎಸ್​ಐ ಹಾಗೂ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತದಾನದ ವಿಡಿಯೋ ಶೂಟಿಂಗ್ ಮಾಡಲಾಗುತ್ತದೆ. ಶಿರಸಿಯಲ್ಲಿ 31, ಸಿದ್ದಾಪುರದಲ್ಲಿ 24, ಯಲ್ಲಾಪುರದಲ್ಲಿ 14, ಮುಂಡಗೋಡಿನಲ್ಲಿ 12, ಹಳಿಯಾಳದಲ್ಲಿ 18, ದಾಂಡೇಲಿಯಲ್ಲಿ 1, ಜೊಯಿಡಾದಲ್ಲಿ 9 ಸೂಕ್ಷ್ಮ ಮತಗಟ್ಟೆಗಳಿವೆ.

    ಮಹಿಳಾ ಮತದಾರರೇ ಅಧಿಕ

    ಶಿರಸಿಯಲ್ಲಿ 52233 ಪುರುಷ, 50658 ಮಹಿಳಾ, ಸಿದ್ದಾಪುರದಲ್ಲಿ 36622 ಪುರುಷ, 35203 ಮಹಿಳಾ, ಯಲ್ಲಾಪುರದಲ್ಲಿ 25597 ಪುರುಷ, 24906 ಮಹಿಳಾ, ಮುಂಡಗೋಡಿನಲ್ಲಿ 30051 ಪುರುಷ, 28025 ಮಹಿಳಾ, ಹಳಿಯಾಳದಲ್ಲಿ 33946 ಪುರುಷ, 31328 ಮಹಿಳಾ, ದಾಂಡೇಲಿಯಲ್ಲಿ 4996 ಪುರುಷ, 5051 ಮಹಿಳಾ, ಜೊಯಿಡಾದಲ್ಲಿ 20239 ಪುರುಷ, 19923 ಮಹಿಳಾ ಮತದಾರರಿದ್ದಾರೆ.

    ರಾಜಕೀಯದ ಒಳಸುಳಿ

    ರಾಜಕೀಯ ಪಕ್ಷಗಳ ಹಸ್ತಕ್ಷೇಪಕ್ಕೆ ಚುನಾವಣಾ ಆಯೋಗ ಮೂಗುದಾರ ಹಾಕಲೆಯತ್ನಿಸಿದೆ. ಆದರೆ, ಪಕ್ಷಗಳ ಚಿಹ್ನೆಯಡಿ ನಡೆಯುವ ಚುನಾವಣೆಗಿಂತ ಹೆಚ್ಚು ರಾಜಕೀಯ ರೋಚಕತೆ ಸೇರಿಕೊಂಡಿದೆ. ಶಿರಸಿ ತಾಲೂಕಿನ ಕೆಲ ಭಾಗಗಳು ಹಾಗೂ ಸಿದ್ದಾಪುರದಲ್ಲಿ ಓಡಾಡಿದರೆ ಬಿಜೆಪಿಯಲ್ಲೇ ಭಿನ್ನ ಬಣಗಳ ಕಾವು ಹೆಚ್ಚಿದೆ. ಹಲವು ಗ್ರಾಪಂಗಳಲ್ಲಿ ಒಂದೇ ಪಕ್ಷದ ಮೂರ್ನಾಲ್ಕು ಕಾರ್ಯಕರ್ತರು ಎದುರು ಬದರಾಗಿ ನಿಂತಿದ್ದಾರೆ. ಪರಸ್ಪರ ತೊಡೆ ತಟ್ಟಿದ್ದಾರೆ. ಶಿರಸಿಯ ಕೆಲ ಭಾಗಗಳಲ್ಲಿ ಕಾಂಗ್ರೆಸ್​ನಲ್ಲೂ ಇದೇ ಪರಿಸ್ಥಿತಿ ಇದೆ. ರಾಜಕೀಯ ಜಿದ್ದಾಜಿದ್ದಿನ ನಡುವೆಯೂ ಮಲೆನಾಡಿನ ಕೆಲ ಕುಗ್ರಾಮಗಳ ಜನ ಚುನಾವಣೆಯಿಂದಲೇ ದೂರ ಇರುವುದಾಗಿ ತಿಳಿಸಿದ್ದಾರೆ. ರಸ್ತೆ, ಮನೆ ಮುಂತಾದ ಗ್ರಾಪಂನಿಂದ ಸಿಗಬೇಕಾದ ಕನಿಷ್ಠ ಸೌಲಭ್ಯಗಳೂ ಸಿಗದ ಕಾರಣ ಹಲವರು ಅಸಮಾಧಾನಗೊಂಡಿದ್ದಾರೆ.

    ಅಂಚೆ ಮತ ಚಲಾಯಿಸಲು ಅವಕಾಶ

    ಸಿದ್ದಾಪುರ: ತಾಲೂಕಿನಲ್ಲಿ ಕಾರ್ಯ ನಿರ್ವಹಿಸುವ 144 ಸಿಬ್ಬಂದಿಗೆ ಅಂಚೆ ಮತಪತ್ರ ಚಲಾವಣೆಗೆ ಪಟ್ಟಣದ ಹಾಳದಕಟ್ಟಾ ಸರ್ಕಾರಿ ಹೈಸ್ಕೂಲ್​ನಲ್ಲಿ ಅವಕಾಶ ಮಾಡಲಾಗಿದೆ ಎಂದು ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಎಲ್ಲ ಕಡೆ ಶಾಂತಿಯುತ ಮತದಾನ ನಡೆಯುವ ವಿಶ್ವಾಸ ಇದೆ. ಸೂಕ್ಷ್ಮ ಮತಗಟ್ಟೆಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಪಿಎಸ್​ಐ ಮಂಜುನಾಥ ರ್ಬಾ ತಿಳಿಸಿದ್ದಾರೆ.

    ಬೈಕ್​ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ

    ಶಿರಸಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜಾಗೃತವಾಗಿರುವ ಅಬಕಾರಿ ಇಲಾಖೆ ಸಿಬ್ಬಂದಿ ಶನಿವಾರ ಕಾರ್ಯಚರಣೆ ನಡೆಸಿ ಬನವಾಸಿಯಿಂದ ಮೊಗವಳ್ಳಿಗೆ ಬೈಕ್​ನಲ್ಲಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯಿಂದ ಸುಮಾರು 3,150 ರೂ. ಬೆಲೆಯ 90 ಎಂ.ಎಲ್.ನ 90 ಟೆಟ್ರಾಪ್ಯಾಕ್ ವಿಸ್ಕಿ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಆರೋಪಿ ಭಾಶಿ ಗ್ರಾಮದ ವಿನಯಕುಮಾರ ನಾಗರಾಜ ಗೌಡ ಪರಾರಿಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಶಿರಸಿ ಉಪವಿಭಾಗ ಕಚೇರಿಯ ಪ್ರಭಾರಿ ಅಬಕಾರಿ ಉಪಾಧೀಕ್ಷಕ ಮಹೇಂದ್ರ ನಾಯ್ಕ ಕಾರ್ಯಚರಣೆಯ ನೇತೃತ್ವ ವಹಿಸಿದ್ದರು. ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ, ಅಬಕಾರಿ ಉಪ ನಿರೀಕ್ಷಕ ಡಿ.ಎನ್. ಸಿರ್ಸಿಕರ್, ಅಬಕಾರಿ ರಕ್ಷಕರಾದ ಪ್ರಸನ್ನ ನೇತ್ರಕರ್, ಗಂಗಾಧರ ಕಲ್ಲೇದ್ ಹಾಗೂ ಕುಮಾರೇಶ್ವರ ಅಂಗಡಿ ಪಾಲ್ಗೊಂಡಿದ್ದರು.

    ಮತಗಟ್ಟೆಗೆ ತೆರಳಿದ ಸಿಬ್ಬಂದಿ

    ಜೊಯಿಡಾ: ಎರಡನೇ ಹಂತದ ಮತದಾನ ಡಿ. 27ರಂದು ನಡೆಯಲಿದ್ದು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮತಗಟ್ಟೆ ಸಿಬ್ಬಂದಿ ಚುನಾವಣೆ ಸಲಕರಣೆಯೊಂದಿಗೆ ತೆರಳಿದರು. ತಹಸೀಲ್ದಾರ್ ಸಂಜಯ ಕಾಂಬಳೆ ನೇತೃತ್ವದಲ್ಲಿ ಚುನಾವಣೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.

    ನೀತಿ ಸಂಹಿತೆ ಉಲ್ಲಂಘನೆ

    ಶಿರಸಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಇಸಳೂರು ಪಂಚಾಯಿತಿ ಗೌಡಳ್ಳಿ ವಾರ್ಡ್​ನ ಮೂವರು ಅಭ್ಯರ್ಥಿಗಳು ಪಕ್ಷದ ಚಿಹ್ನೆ ಹಾಗೂ ಪಕ್ಷದ ಹೆಸರು ಬಹಿರಂಗವಾಗಿ ಪ್ರಕಟಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ಶನಿವಾರ ನಡೆದಿದೆ.

    ವಾರ್ಡ್ ನಂಬರ್ 52ರ ಅಬ್ದುಲ್ ಖಾದರ್, ನಾಜಿಮಾಭಾನು ಹಾಫೀಜ್ ಸಾಬ್ ಹಾಗೂ ರಹಿಮಾಬಿ ಅಬ್ದುಲ್ ಶುಕುರ ಎಂಬುವವರು ಎಸ್​ಡಿಪಿಐ ಚಿಹ್ನೆ ಹಾಗೂ ಪಕ್ಷದ ಹೆಸರು ಬಹಿರಂಗವಾಗಿ ಪ್ರಕಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಕಾರಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಅವರಿಗೆ ಗ್ರಾಮೀಣ ಠಾಣೆ ಪಿಎಸ್​ಐ ಸ್ವಯಂ ಪ್ರೇರಿತ ದೂರಿನ ವರದಿ ರವಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts