More

    2ಎ ಮೀಸಲಾತಿ ಸಿಗೋವರೆಗೂ ಹೋರಾಟ

    ಇಟಗಿ: ಕಳೆದ ಹಲವು ವರ್ಷಗಳಿಂದ ನಮ್ಮನ್ನಾಳಿದ ರಾಜಕಾರಣಿಗಳು ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಿದ್ದಾರೆ. ಆದ್ದರಿಂದ ನಮಗೆ 2ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿರಂತರ ಎಂದು ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಪಂಚಮಸಾಲಿ ಸಮುದಾಯದವರು ತಮ್ಮ ದಾಖಲಾತಿಗಳಲ್ಲಿ ಪಂಚಮಸಾಲಿ ಎಂದು ನಮೂದಿಸದೆ ಕೇವಲ ಲಿಂಗಾಯತ ಎಂದು ನಮೂದಿಸುವಂತೆ ಮಾಡಿದ್ದಾರೆ. ಇದರಿಂದ ನಮ್ಮ ಸಮುದಾಯ ಮೀಸಲಾತಿಯಿಂದ ವಂಚಿತಗೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಡಿ.19ರ ಗಡುವು ನೀಡಲಾಗಿದೆ. ಅಷ್ಟರಲ್ಲಿ ಮುಖ್ಯಮಂತ್ರಿಗಳು ಸಮುದಾಯಕ್ಕೆ ಮೀಸಲಾತಿ ಘೋಷಿಸದಿದ್ದರೆ ಡಿ.22ರಂದು ಸುವರ್ಣ ವಿಧಾನಸೌಧದ ಎದುರು ಸಮುದಾಯಕ್ಕೆ ಮೀಸಲಾತಿ ನೀಡಲು ಹಕ್ಕೊತ್ತಾಯ ಮಾಡಲಾ ಗುವುದು. ಖಾನಾಪುರ ತಾಲೂಕಿನ ಪಂಚಮಸಾಲಿ ಸಮುದಾಯದವರು ಸಂಘಟಿತರಾಗಲು ಮೊದಲ ಬಾರಿ ಈ ಸಮಾವೇಶ ಆಯೋಜಿಸಲಾಗಿದೆ. ಮಹ ದಾಯಿ ಮತ್ತು ಮಲಪ್ರಭಾ ನದಿಗಳು ಹರಿಯುವ ಪವಿತ್ರ ಕ್ಷೇತ್ರವಾದ ಖಾನಾಪುರ ತಾಲೂಕಿನ ಜನತೆ ಸಮುದಾ ಯದ ಮೀಸಲಾತಿಗೆ ತಮ್ಮ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು. ಸಮಾವೇಶವನ್ನು ರಾಣಿ ಚನ್ನಮ್ಮ, ಅಕ್ಕಮಹಾದೇವಿ, ರಾಯಣ್ಣನ ಪಾತ್ರಧಾರಿ ಪುಟಾಣಿಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

    ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಪಂಚಮಸಾಲಿ ಸಮುದಾಯ ಸಂಘಟಿತಗೊಳ್ಳಬೇಕು. 2ಎ ಮೀಸಲಾತಿ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
    ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಜಯಾನಂದ ಕಾಶಪ್ಪನವರ, ಎಚ್.ಎಸ್. ಶಿವಶಂಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಎ.ಬಿ ಪಾಟೀಲ, ಶಶಿಕಾಂತ ನಾಯಕ, ಪಂಚಮಸಾಲಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ ಪಾಟೀಲ, ಕಾರ್ಯಾಧ್ಯಕ್ಷ ನಿಂಗಪ್ಪ ಫಿರೋಜಿ, ತಾಲೂಕು ಉಸ್ತುವಾರಿ ಅಡಿವೇಶ ಇಟಗಿ, ತಾಲೂಕು ಘಟಕದ ಅಧ್ಯಕ್ಷ ಸಂಗಮೇಶ ವಾಲಿ, ಹಿರಿಯ ವಕೀಲ ಆರ್.ಎನ್. ಪಾಟೀಲ, ರೈತ ಮುಖಂಡ ಅಶೋಕ ಯಮಕನಮರಡಿ, ರಾಣಿ ಚನ್ನಮ್ಮನ ವಂಶಸ್ಥ ಉದಯ ದೇಸಾಯಿ, ಮುಖಂಡರಾದ ವಿಜಯ ಸಾಣಿಕೊಪ್ಪ, ಸುಭಾಷ ಗುಳಶೆಟ್ಟಿ, ಉಮೇಶ ಮೂಲಿಮನಿ, ವಿಠ್ಠಲ ಹಲಗೇಕರ, ಸಂಜಯ ಕುಬಲ, ಅಪ್ಪಯ್ಯ ಕೊಡೋಳಿ, ಶಿಕ್ಷಕ ಪುಲಕೇಶಿ ಗಿರಿಯಾಲ, ರುದ್ರಪ್ಪ ಕುಂಕೂರ ಇತರರು ಇದ್ದರು.
    ಸಮಾವೇಶದ ಅಂಗವಾಗಿ ಗಂದಿಗವಾಡ ಗ್ರಾಮದ ಬಸವೇಶ್ವರ ವೃತ್ತದಿಂದ ಸಮಾವೇಶ ಜರುಗಿದ ಪರಂಜ್ಯೋತಿ ಪ್ರೌಢಶಾಲೆಯ ಮೈದಾನದವರೆಗೆ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಾದ್ಯ ಮೇಳಗಳು, ಪೂರ್ಣಕುಂಭ ಹೊತ್ತ ಸುಮಂಗಲೆಯರು, ಸಮುದಾಯದ ನಾಗರಿಕರು ಸೇರಿ ಗಂದಿಗವಾಡ ಮತ್ತು ಸುತ್ತಮುತ್ತಲಿನ ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಬಹುಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶಕ್ಕೆ ವಿಶೇಷ ಮೆರುಗು ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts