More

    ಕಾಫಿನಾಡಿನಲ್ಲಿ ೧೯ ಕೆಎಫ್‌ಡಿ ಪ್ರಕರಣ ಪತ್ತೆ

    ಚಿಕ್ಕಮಗಳೂರು: ಜನವರಿ ತಿಂಗಳಿನಿಂದ ಇದುವರೆಗೆ ಜಿಲ್ಲೆಯಲ್ಲಿ ೧೯ ಕೆಎಫ್‌ಡಿ ಪ್ರಕರಣಗಳು ಕಂಡು ಬಂದಿದ್ದು, ಇದರಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆನಾಡು ಭಾಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆ ಕಡಿಮೆ ಆಗಿರುವುದರಿಂದ ಮಂಗನಕಾಯಿಲೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಮಳೆ ಬಂದಲ್ಲಿ ಕೆಎಫ್‌ಡಿ ಸೋಂಕು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನೊಂದಿಗೆ ಸಂಪರ್ಕಹೊಂದಿರುವ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ಎರಡು ಎಸ್ಟೇಟ್‌ಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಂಡಿದೆ. ಈ ಎಸ್ಟೇಟ್‌ಗಳಲ್ಲಿ ಮರಗಳನ್ನು ಕಡಿದಿದ್ದರಿಂದಾಗಿ ಅದರ ಎಲೆಗಳು ಹಾಗೂ ಕಾಂಡಗಳು ಅಲ್ಲಿಯೇ ಒಣಗಿವೆ. ಇದರಿಂದಾಗಿ ಉಣ್ಣೆಗಳು ಹೆಚ್ಚಾಗಿರುವ ಸಾಧ್ಯತೆಯಿದೆ. ಇಲ್ಲಿಂದಲೇ ಮಂಗನ ಕಾಯಿಲೆ ಉಲ್ಭಣಗೊಂಡಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
    ಎಲ್ಲೆಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆಯೋ ಆ ಭಾಗದಲ್ಲಿ ಹಾಗೂ ಅದರ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಪ್ರತಿ ಕುಟುಂಬಕ್ಕೆ ತಲಾ ೪ರಂತೆ ಒಟ್ಟು ೯೦೦ ಕುಟುಂಬಕ್ಕೆ ದೀಪಾ ಎಣ್ಣೆ ವಿತರಿಸಲಾಗಿದೆ. ಜೊತೆಗೆ ಮನೆಯಿಂದ ಹೊರಹೋಗುವಾಗ ಕೈ ಹಾಗೂ ಕಾಲುಗಳಿಗೆ ಈ ಎಣ್ಣೆ ಸವರಿಕೊಂಡು ಹೋಗುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
    ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಆಯಾ ತಹಸೀಲ್ದಾರ್‌ಗಳು, ಟಿಎಚ್‌ಓಗಳು, ಪಶು ವೈದ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಸಭೆ ನಡೆಸಿ ಕೆಎಫ್‌ಡಿ ತಡೆಯುವ ಬಗ್ಗೆ ತುರ್ತು ಕ್ರಮ ಕೈಗೊಳ್ಳುತ್ತಿದ್ದಾರೆ. ಜೊತೆಗೆ ಜನರಲ್ಲಿ ನಿರಂತರವಾಗಿನ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ವಿವರಿಸಿದರು.
    ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾತನಾಡಿ, ಕೆಎಫ್‌ಡಿ ರೋಗಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಹೀಗೆಂದಾಕ್ಷಣ ಜನರು ಹೆದರುವುದು ಬೇಡ. ಕೆಎಫ್‌ಡಿ ಬಂದಾಗ ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ ಈಗಾಗಲೇ ಮಂಗನಕಾಯಿಲೆ ಕಾಣಿಸಿಕೊಂಡಿರುವ ಭಾಗದಲ್ಲಿ ಹಾಗೂ ಅದರ ಅಕ್ಕಪಕ್ಕದ ಗ್ರಾಮಗಳಲ್ಲಿ ಜನರಿಗೆ ಜ್ವರ ಕಾಣಿಸಿಕೊಂಡಾಕ್ಷಣ ಕೂಡಲೇ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
    ಡಿಎಚ್‌ಒ ಡಾ. ಅಶ್ವಥಬಾಬು ಮಾತನಾಡಿ, ಮಂಗನಕಾಯಿಲೆಗೆ ಸಂಬಂಧಿಸಿದಂತೆ ಕಳೆದ ನವೆಂಬರ್ ತಿಂಗಳಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಮಳೆ ಕೊರತೆ ಹಾಗೂ ಕಾಡಿನಲ್ಲಿ ಬೇಗನೆ ಎಲೆಗಳು ಉದುರಿರುವ ಕಾರಣದಿಂದಾಗಿ ಕೆಎಫ್‌ಡಿ ಸೋಂಕು ಜನವರಿ ತಿಂಗಳಿನಲ್ಲಿಯೇ ಕಾಣಿಸಿಕೊಂಡಿದೆ. ಹೀಗಾಗಿ ಮಂಗನಕಾಯಿಲೆ ಹರಡದಂತೆ ಈಗಾಗಲೇ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
    ಮಂಗನಕಾಯಿಲೆ ಕಾಣಿಸಿಕೊಂಡ ರೋಗಿಗಳಿಗೆ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಬಹುತೇಕರು ಇಲ್ಲಿಯೇ ಗುಣಮುಖರಾಗುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
    ಸುದ್ದಿಗೋಷ್ಟಿಯಲ್ಲಿ ಎಸಿ ದಲ್ಜಿತ್ ಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts