More

    19 ಸ್ಥಾನಗಳಲ್ಲೂ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಸ್ಪರ್ಧೆ

    ಶಿವಮೊಗ್ಗ: ಮ್ಯಾಮ್ಕೋಸ್ ಆಡಳಿತ ಮಂಡಳಿಗೆ ಫೆ.22ರಂದು ನಡೆಯುವ ಚುನಾವಣೆಯಲ್ಲಿ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದಿಂದ ಎಲ್ಲ 19 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಅವರೆಲ್ಲರೂ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

    ಸಹಕಾರ ಭಾರತಿ ಬಿಜೆಪಿಯ ಅಂಗ ಸಂಸ್ಥೆ. ಈವರೆಗೆ ಮ್ಯಾಮ್ಕೋಸ್​ನಲ್ಲಿ ಆಡಳಿತ ಮಾಡಿದ ಸಹಕಾರ ಭಾರತಿ ಅಡಕೆ ಬೆಳೆಗಾರರ ಹಿತ ಕಾಯಲಿಲ್ಲ. ಬಿಜೆಪಿ ಕೂಡ ಅಡಕೆ ಬೆಳೆಗಾರರಿಗೆ ಮಾರಕವಾಗುವ ತೀರ್ಮಾನ ಕೈಗೊಂಡಿತು. ಹೀಗಾಗಿ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಅಭ್ಯರ್ಥಿಗಳನ್ನು ಅಡಕೆ ಬೆಳೆಗಾರರು ಬೆಂಬಲಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

    ಕೇಂದ್ರದಲ್ಲಿ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುಪಿಎ ಸರ್ಕಾರದಲ್ಲಿ ರೈತರ ಯಂತ್ರೋಪಕರಣಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದು ಮಾಡಿದೆ. ಕೇಂದ್ರ ಆರೋಗ್ಯ ಸಚಿವರು ಅಡಕೆ ಹಾನಿಕಾರಕ ಎಂದು ಸದನದಲ್ಲೇ ಹೇಳಿದ್ದರು. ಕ್ಯಾನ್ಸರ್ ಬರುತ್ತದೆ ಎಂದಿದ್ದರು. ಸಹಕಾರ ಭಾರತಿ ಇದನ್ನು ವಿರೋಧಿಸಲೇ ಇಲ್ಲ. ಮ್ಯಾಮ್ಕೋಸ್ ಚುನಾವಣೆಗೂ ಮುನ್ನ ಕೇಂದ್ರ ಸಚಿವರ ಹೇಳಿಕೆ ಬಗ್ಗೆ ಸಹಕಾರ ಭಾರತಿ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

    ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಕೆ ಮಾನ ಕಾಪಾಡುತ್ತೇವೆ ಎಂದಿದ್ದರು. ಅಡಕೆಯನ್ನು ನಿಷೇಧಿಸುವುದರಿಂದ ಅದರ ಮಾನ ಹೆಚ್ಚುತ್ತದೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

    2015-16ರಲ್ಲಿ ನೆರೆಹಾವಳಿಯಿಂದ ಕೊಳೆರೋಗಕ್ಕೆ ತುತ್ತಾಗಿ ಅಡಕೆ ಬೆಳೆ ನಾಶವಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ, ರೈತರಿಗೆ ಪರಿಹಾರ ನೀಡಲು 86 ಕೋಟಿ ರೂ. ಬಿಡುಗಡೆ ಮಾಡಿದ್ದರು. ಇದರಲ್ಲಿ ತೀರ್ಥಹಳ್ಳಿ ತಾಲೂಕಿಗೆ 15 ಕೋಟಿ ರೂ. ಬಿಡುಗಡೆಯಾಗಿತ್ತು ಎಂದು ಹೇಳಿದರು.

    ರಾಜ್ಯದಲ್ಲಿ ಬಗರ್​ಹುಕುಂ ಸರ್ಕಾರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಬಗರ್​ಹುಕುಂ ಸರ್ಕಾರ. ಬಗರ್​ಹುಕುಂ ಮೂಲಕ ಭೂಮಿ ಅತಿಕ್ರಮಣ ಮಾಡಿಕೊಂಡಂತೆ ಬಿಜೆಪಿಯವರು ಅಧಿಕಾರ ಅತಿಕ್ರಮಿಸಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ವ್ಯಂಗ್ಯವಾಡಿದರು.

    ನಾವು ಶಾಸಕರಾಗಿರುವುದೇ ಸಚಿವರಾಗಲು ಎಂದು ಕೆಲವರು ಭಾವಿಸಿದ್ದಾರೆ. ಜಾತಿಗೆ ಇಷ್ಟು ಎಂದು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲ ಪ್ರಬಲ ಜಾತಿಗೂ ಸಚಿವ ಸ್ಥಾನ ಹಂಚಿಕೆಯಾದರೆ ಕಡಿಮೆ ಜನಸಂಖ್ಯೆ ಇರುವ ಸಮುದಾಯಕ್ಕೆ ಅಧಿಕಾರ ಸಿಗುವುದಾದರೂ ಹೇಗೆ?ಇದೆಲ್ಲವೂ ಸಾರ್ವಜನಿಕವಾಗಿ ಚರ್ಚೆಯೇ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅಲ್ಪಸಂಖ್ಯಾತರ ವಿರುದ್ಧ ಮಾತನಾಡುವ ಬಿಜೆಪಿ ನಾಯಕರ ಬಗ್ಗೆ ದೊಡ್ಡ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಆದರೆ ಅದನ್ನು ವಿರೋಧಿಸುವ ಕಾಂಗ್ರೆಸ್ ಮತ್ತಿತರ ಪಕ್ಷಗಳ ಮುಖಂಡರ ಹೇಳಿಕೆಗಳು ಸಣ್ಣ ಪ್ರಮಾಣದಲ್ಲಿ ಪ್ರಕಟಗೊಳ್ಳುತ್ತವೆ ಎಂದು ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯ ಕಲಗೋಡು ರತ್ನಾಕರ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕಡಿದಾಳ್ ಗೋಪಾಲ್, ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಎಚ್.ಸಿ.ಯೋಗೀಶ್, ಮಂಜುಳಾ ಶಿವಣ್ಣ, ಶಾಮೀರ್ ಖಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts